ತುಮಕೂರು
ತುಮಕೂರು ತಾಲ್ಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಣಾಧಿಕಾರಿ (ಇ.ಓ.) ಆಗಿ ಡಿ.ಜೈಪಾಲ್ ಅವರು ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ.
ತುಮಕೂರಿಗೆ ಬಂದ ಬೆನ್ನಲ್ಲೇ ಇ.ಓ. ಅವರು ಬೆಳಗುಂಬ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಅಲ್ಲಿ ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದ ಸಾರ್ವಜನಿಕರೊಡನೆ ಚರ್ಚಿಸಿದರು. ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರ ಸೂಚನೆ ಮೇರೆಗೆ ಇ.ಓ. ಅವರು ಬೆಳಗುಂಬಕ್ಕೆ ಭೇಟಿ ನೀಡಿದ್ದರು.
ಇ.ಓ. ಆಗಿ ಹೊಸದಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ತಾ.ಪಂ. ಕಚೇರಿಯಲ್ಲಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜೊತೆ ಪರಿಚಯಾತ್ಮಕವಾಗಿ ಸಭೆ ನಡೆಸಿ ಚರ್ಚಿಸಿದರು. ಕಚೇರಿ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಮಧ್ಯಾಹ್ನ ತುಮಕೂರು ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು (ಪಿ.ಡಿ.ಓ.) ಮತ್ತು ಗ್ರಾ.ಪಂ. ಕಾರ್ಯದರ್ಶಿಗಳ ಸಭೆಯೊಂದನ್ನು ಸಹ ನಡೆಸಿ ಅವರೊಡನೆಯೂ ತಾಲ್ಲೂಕಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.
ಜೈಪಾಲ್ ಅವರು ಈ ಮೊದಲು ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಈಗ ಮುಂಬಡ್ತಿಗೊಂಡು ಇ.ಓ. ಹುದ್ದೆಗೆ ನೇಮಕಗೊಂಡಿದ್ದಾರೆ. ತಾಲ್ಲೂಕು ಪಂಚಾಯಿತಿಯ ಆಡಳಿತವನ್ನು ನೂತನ ಇ.ಓ. ಅವರು ಹೇಗೆ ಬಿಗಿಗೊಳಿಸಲಿದ್ದಾರೆಂಬ ಕುತೂಹಲ ತಾ.ಪಂ.ನಲ್ಲಿ ಉಂಟಾಗಿದೆ. ತುಮಕೂರು ತಾ.ಪಂ.ನಲ್ಲಿ ಈವರೆಗೆ ಇ.ಓ. ಆಗಿದ್ದ ವೆಂಕಟೇಶಯ್ಯ ಅವರಿಗೆ ಯಾವ ಸ್ಥಾನವನ್ನು ತೋರಿಸಲಾಗಿದೆಯೆಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.