ಘನತ್ಯಾಜ್ಯ ಸಂಗ್ರಹಕ್ಕೆ ಹೊಸ ಶುಲ್ಕ..!

ತುಮಕೂರು
     ಘನತ್ಯಾಜ್ಯ ಕುರಿತ ರಾಜ್ಯ ಸರ್ಕಾರದ ನೀತಿಯ ಪ್ರಕಾರ ಘನತ್ಯಾಜ್ಯ ಸಂಗ್ರಹದ ಸಂದರ್ಭದಲ್ಲಿ ಮತ್ತೊಮ್ಮೆ ಜನರ ತಲೆಯ ಮೇಲೆ ಹೊಸ ಶುಲ್ಕ ವಿಧಿಸಲಿರುವ ಪ್ರಸ್ತಾವನೆಗೆ ತುಮಕೂರು ಮಹಾನಗರ ಪಾಲಿಕೆ ನಡೆಸಿದ ಸಾರ್ವಜನಿಕ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.
     ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ಘನತ್ಯಾಜ್ಯ ನಿರ್ವಹಣೆ ಕುರಿತ ರಾಜ್ಯದ ನೀತಿ ಕುರಿತ ಪಾಲುದಾರರ ಸಭೆ ಮಹಾನಗರ ಪಾಲಿಕೆ ವತಿಯಿಂದ ಏರ್ಪಟ್ಟಿತ್ತು. ಈ ಸಭೆಯಲ್ಲಿ ಹೊಸ ನೀತಿ ಪ್ರಕಾರ, ಮನೆ-ಮನೆಯಿಂದ ಕಸ ಸಂಗ್ರಹಿಸಿದರೆ ಅವರಿಗೆ ಹೊಸದಾಗಿ ಶುಲ್ಕ ವಿಧಿಸುವ ಪ್ರಸ್ತಾಪದ ಬಗ್ಗೆ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಿದ ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಈ ವಿಷಯದತ್ತ ಎಲ್ಲರ ಗಮನ ಸೆಳೆದು, ಹೊಸ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಪ್ರಬಲ ವಿರೋಧ ಸೂಚಿಸಿದರು.
      ಮನೆ-ಮನೆಯಿಂದ ಕಸವನ್ನು ಪಾಲಿಕೆಗೆ ಕೊಡುವುದಾದರೆ ಅದಕ್ಕಾಗಿ ಜನರು ಹೊಸ ಶುಲ್ಕ ಪಾವತಿಸಲೇಬೇಕು. ಅದಿಲ್ಲದೆ ಆ ಕಸವನ್ನು ಅವರೇ ಗೊಬ್ಬರ ಇತ್ಯಾದಿಯಾಗಿ ಸ್ವಂತ ಉಪಯೋಗಕ್ಕಾಗಿ ಮಾರ್ಪಡಿಸಿಕೊಳ್ಳುವುದಾದರೆ ಅಂತಹವರಿಗೆ ಯಾವುದೇ ಶುಲ್ಕ ಇರದು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದುದನ್ನು ಮುಜೀಬ್ ಪ್ರಸ್ತಾಪಿಸಿದರು. ಮಹಾನಗರ ಪಾಲಿಕೆಯ ಈಗಿನ ತೆರಿಗೆ ನೀತಿಯ ಬಗೆಗೇ ಸಾರ್ವಜನಿಕರಲ್ಲಿ ಈಗಾಗಲೇ ಅಸಮಾಧಾನ ಇದೆ. ಅದರ ಜೊತೆಗೆ ಈಗಾಗಲೇ ಸ್ವಚ್ಛಭಾರತ್ ಯೋಜನೆಗೆ ಸಂಬಂಧಿಸಿದಂತೆಯೂ ಸಾರ್ವಜನಿಕರಿಂದ ತೆರಿಗೆ ಪಡೆಯಲಾಗುತ್ತಿದೆ. ಆದರೆ ಈಗ ಇವೆಲ್ಲದರ ಜೊತೆಗೆ ಕಸವನ್ನು ಕೊಡುವುದಾದರೆ ಹೊಸದಾಗಿ ಶುಲ್ಕ ತೆರಬೇಕು ಎಂದರೆ ಅದು ಜನರಿಗೆ ಭಾರವಾಗುತ್ತದೆ. ಇದನ್ನು ಪಾವತಿಸುವುದು ಅಸಾಧ್ಯವಾಗಲಿದೆ ಎಂದು ವಾದಿಸಿದರು. 
ಮೊದಲು ವಾರ್ಡ್ ಸಮಿತಿ
     ಘನತ್ಯಾಜ್ಯ ವಿಲೇವಾರಿ ಬಗ್ಗೆ ಯಾರು ಎಷ್ಟೇ ಮಾತನಾಡಿದರೂ ಏನೂ ಪ್ರಯೋಜನ ಆಗದು. ಮೊದಲಿಗೆ ನಗರದ 35 ವಾರ್ಡ್‍ಗಳಲ್ಲೂ ವಾರ್ಡ್ ಸಮಿತಿ ರಚಿಸಬೇಕು. ಆ ಸಮಿತಿ ಮೂಲಕ ಸಾರ್ವಜನಿಕ ಸಹಭಾಗಿತ್ವ ಪಡೆದು, ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಸೈಯದ್ ಮುಜೀಬ್ ಪಾಲಿಕೆಗೆ ನೇರವಾದ ಸಲಹೆಯಿತ್ತರು.
    ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯ ಹಂತದಲ್ಲೇ ಅವುಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ವೈಜ್ಞಾನಿಕವಾಗಿ ಕಸಸಂಗ್ರಹ-ವಿಲೇವಾರಿ ಬಗ್ಗೆ ನಗರದಲ್ಲಿರುವ ತಜ್ಞ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳ ಮತ್ತು ನಗರದ ಇಂಜಿನಿಯರಿಂಗ್ ಕಾಲೇಜುಗಳ ಪರಿಸರ ಇಂಜಿನಿಯರಿಂಗ್ ವಿಭಾಗದ ಸಹಕಾರ-ಸಲಹೆ ಪಡೆಯಬೇಕು.
 
   ಕಳೆದ ಒಂದು ವರ್ಷದ ಅವಧಿಯಲ್ಲಿ ಏಳೆಂಟು ಜನ ಪೌರಕಾರ್ಮಿಕರು ಅಸುನೀಗಿದ್ದು, ಅವರೆಲ್ಲರೂ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದರೆಂಬುದನ್ನು ಗಮನಿಸಿದಾಗ, ಕಸವಿಲೇವಾರಿ ಕಾರ್ಮಿಕರ ಸಂಕಷ್ಟ ಎಂತಹುದೆಂಬುದು ಅರಿವಿಗೆ ಬರುತ್ತದೆ. ಮಿಗಿಲಾಗಿ ಮುಂದಿನ ಪೀಳಿಗೆಯವರು ಕಸವಿಲೇವಾರಿಯಂತಹ ಕೆಲಸಕ್ಕೆ ಬರುವ ಸಂಭವ ಕಡಿಮೆಯಿರುವುದರಿಂದ, ಕಸ ವಿಂಗಡಣೆ/ವಿಲೇವಾರಿ ಇತ್ಯಾದಿ ಬಗ್ಗೆ ಜನರು ಪಾಲ್ಗೊಳ್ಳುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಈಗಾಗಲೇ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರು ಇಲ್ಲವೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿರುವುದರಿಂದ, ನಿಯಮಾನುಸಾರ 500 ಜನರಿಗೊಬ್ಬ ಪೌರಕಾರ್ಮಿಕರಂತೆ ನೇಮಕಾತಿ ಆಗಬೇಕು ಎಂಬ ಸಲಹೆಗಳನ್ನು ಸೈಯದ್ ಮುಜೀಬ್ ಮುಂದಿಟ್ಟರು. 
ಕಲ್ಯಾಣ ಮಂಟಪದ ಸಂಕಷ್ಟ
    ಕಲ್ಯಾಣ ಮಂಟಪಗಳಲ್ಲಿ ಮೇಲ್ವಿಚಾರಕರು ಅನುಭವಿಸುವ ಸಂಕಷ್ಟಗಳನ್ನು ಬಸವಭವನದ ಮೇಲ್ವಿಚಾರಕ ರಾಮಸ್ವಾಮಿ ಮನಮುಟ್ಟುವಂತೆ ವಿವರಿಸಿ ಎಲ್ಲರ ಗಮನ ಸೆಳೆದರು. ಕಲ್ಯಾಣ ಮಂಟಪದಲ್ಲಿ ಒಂದು ಸಮಾರಂಭ ನಡೆದರೆ, ಹೂವಿನ ಅಲಂಕಾರದ ಪ್ಲಾಸ್ಟಿಕ್ ಕವರ್‍ಗಳು, ಬಳಕೆಯಾದ ಹೂವುಗಳು, ಐಸ್ ಕ್ರೀಂ ಕಪ್‍ಗಳು, ಉಳಿಕೆ ಆಹಾರ ಪದಾರ್ಥಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದೇ ಪ್ರತಿದಿನವೂ ಸಮಸ್ಯೆಯಾಗುತ್ತಿದೆ.
   ಕಸ ಸಂಗ್ರಹಕ್ಕೆ ಬರುವವರನ್ನು ನಿರ್ವಹಿಸುವುದೂ ಕಷ್ಟವಾಗುತ್ತದೆ. ಸ್ವಚ್ಛತೆ ಬಗ್ಗೆ ಪಾಲಿಕೆ ಹೇಳುವ ಮಾತುಗಳನ್ನು ಒಪ್ಪಬಹುದು. ಆದರೆ ಅದನ್ನು ಜಾರಿಗೊಳಿಸುವ ನಮ್ಮಂತಹ ಕಟ್ಟಕಡೆಯ ವ್ಯಕ್ತಿಯ ಕಷ್ಟವನ್ನು ಕೇಳುವವರು ಯಾರಿದ್ದಾರೆ? ಎಂದು ಅವರು ಉದ್ಗರಿಸಿದಾಗ, ಸಭಿಕರಿಂದ ಕರತಾಡನದ ಬೆಂಬಲ ವ್ಯಕ್ತವಾಯಿತು. 
    ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯ ಅಧ್ಯಕ್ಷ ಬಾಬಾ ಮಾತನಾಡಿ, ಬೀದಿಬದಿ ವ್ಯಾಪಾರ ಮಾಡುವವರು ಕಸವನ್ನು ವಿಲೇವಾರಿ ಮಾಡಲು ಅನುಕೂಲವಾಗುವಂತೆ ಪಾಲಿಕೆ ವತಿಯಿಂದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಲ್ಲದೆ ದಿಬ್ಬೂರಿನ 1200 ಮನೆಗಳ ಸಂಕೀರ್ಣದಲ್ಲಿನ ಅನೈರ್ಮಲ್ಯ ಸಮಸ್ಯೆ, ಹಂದಿ ಹಾವಳಿ ಬಗ್ಗೆ ಏರಿದ ದನಿಯಲ್ಲಿ ಗಮನ ಸೆಳೆದು ಕ್ರಮಕ್ಕೆ ಆಗ್ರಹಿಸಿದರು. 
   30ನೇ ವಾರ್ಡ್‍ನ ನಾಗರಿಕ ಜಗದೀಶ್ ಮಾತನಾಡುತ್ತ, ಸ್ವಚ್ಛತಾ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು. ಖಾಲಿ ನಿವೇಶನಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಕೋಳಿ ಅಂಗಡಿಗಳಿಗೆ ನಿಗದಿತ ಸ್ಥಳವನ್ನು ಸೂಚಿಸಬೇಕು. ಮಹಿಳೆಯರು ಬಳಸುವ ಪ್ಯಾಡ್‍ಗಳ ಸಂಗ್ರಹಕ್ಕೆ ಪ್ರತ್ಯೇಕ ಬಾಕ್ಸ್ ವ್ಯವಸ್ಥೆ ಮಾಡಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಿದರು. 
    ಕಾರ್ಮಿಕ ನಾಯಕ ಎನ್.ಕೆ.ಸುಬ್ರಹ್ಮಣ್ಯ, ನಗರದ ಆರ್.ಟಿ.ಓ. ಕಚೇರಿ ಬಳಿಯ ಫುಡ್ ಜಂಕ್ಷನ್‍ನಲ್ಲಿ ಉತ್ತಮ ರೀತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗುತ್ತಿದೆ. ಅದೇ ರೀತಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲೆಡೆ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. 
   ಪಾಲಿಕೆಯವರು ಮನೆ-ಮನೆಗಳಿಂದ ಒಣಕಸ-ಹಸಿಕಸವನ್ನು ಈಗ ಪ್ರತಿನಿತ್ಯ ಸಂಗ್ರಹಿಸುತ್ತಿರುವುದು ಸರಿಯಷ್ಟೇ. ಆದರೆ ಇದು ತೃಪ್ತಿಕರವಾಗಿ ಅನುಷ್ಠಾನವಾಗುತ್ತಿಲ್ಲ.  ಒಣಕಸ ಹಾಗೂ ಪ್ಲಾಸ್ಟಿಕ್ ಕಸ ಪ್ರತಿನಿತ್ಯ ಇಲ್ಲದಿರುವುದರಿಂದ ನಿರ್ದಿಷ್ಟ ದಿನಗಳಂದು ಮಾತ್ರ ಒಣಕಸ-ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸುವುದಾಗಿ ಪಾಲಿಕೆ ಪ್ರಕಟಿಸಿದರೆ, ಅಂತಹ ದಿನಗಳಂದು ಮಾತ್ರ ಒಣಕಸ-ಪ್ಲಾಸ್ಟಿಕ್ ಕಸವನ್ನು ಪ್ರತ್ಯೇಕವಾಗಿ ಕೊಡುವುದು ಜನತೆಗೆ ಸುಲಭವಾಗುತ್ತದೆ. ಕಸ ವಿಂಗಡಣೆ ಕಾರ್ಯವೂ ಸುಗಮವಾಗುತ್ತದೆ ಎಂದು ಕುವೆಂಪು ನಗರದ ಹಿರಿಯ ನಾಗರಿಕರೊಬ್ಬರು ಸಲಹೆ ನೀಡಿದರು. 
    ಮತ್ತೋರ್ವ ತಜ್ಞರು ಮಾತನಾಡುತ್ತ, ಕಸಸಂಗ್ರಹಕ್ಕೆ ಸಂಬಂಧಿಸಿದಂತೆ ಈಗಿರುವ ವ್ಯವಸ್ಥೆ ಸಂಪೂರ್ಣ ಬದಲಾಗದಿದ್ದರೆ, ಬೇರೆ ಯಾವುದೇ ಕ್ರಮ ಕೈಗೊಂಡರೂ ಪ್ರಯೋಜನವಾಗುವುದಿಲ್ಲ ಎಂದು ಪಾಲಿಕೆಗೆ ಕಿವಿಮಾತು ಹೇಳಿದರು. ಉತ್ತಮವಾಗಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಕನ್ನಡ ಪರ ಸಂಘಟನೆಯ ಪ್ರಮುಖರೊಬ್ಬರು ಸಲಹೆಯಿತ್ತರು. ಬೇಕರಿ ಮಾಲೀಕ ನೂರ್‍ಅಹಮದ್, ಪ್ಲಾಸ್ಟಿಕ್ ಬಳಸದೆ ಬೇಕರಿಯಲ್ಲಿ ಕೆಲವೊಂದು ಪದಾರ್ಥಗಳನ್ನು ತಯಾರಿಸುವುದು ಕಷ್ಟವಾಗಿದ್ದು, ಈ ಬಗ್ಗೆ ಸೂಕ್ತ ಮಾಹಿತಿ ಕೊಟ್ಟರೆ ಅದನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದರು. 
     ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಮೇಯರ್ ಲಲಿತಾ ರವೀಶ್, ತುಮಕೂರು ನಗರದ ಸ್ವಚ್ಚತೆ ಉಳಿಸುವಲ್ಲಿ ನಾಗರಿಕರ ಸಹಕಾರ ಅತ್ಯಂತ ಮಹತ್ವದ್ದು ಎಂದರು. ಸಾರ್ವಜನಿಕರು ಕಸವನ್ನು ವಿಂಗಡಿಸಿಕೊಟ್ಟರೆ, ಕಸ ವಿಲೇವಾರಿಯ ಮುಂದಿನ ಪ್ರಕ್ರಿಯೆ ಸುಲಲಿತವಾಗುತ್ತದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. 
    ಪಾಲಿಕೆಯ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಮಾತನಾಡಿ, ನಗರದಲ್ಲಿ ಮನೆ-ಮನೆ ಕಸ ಸಂಗ್ರಹಕ್ಕೆ 93 ಆಟೋಟಿಪ್ಪರ್‍ಗಳ ವ್ಯವಸ್ಥೆ ಮಾಡಲಾಗಿದ್ದರೂ, ಅದಕ್ಕೆ ಕಸ ನೀಡದೆ ಚರಂಡಿ, ಪಾರ್ಕ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವ ಪ್ರವೃತ್ತಿ ಇನ್ನೂ ಸಹ ಇದೆಯೆಂದು ವಿಷಾದಿಸಿದರು.
    ಕೋಳಿ ಅಂಗಡಿಗಳಿಂದಲೂ ನಗರದ ಸ್ವಚ್ಛತೆಗೆ ಸಮಸ್ಯೆ ಆಗುತ್ತಿದೆಯೆಂದು ಆಕ್ಷೇಪಿಸಿದರು. ಹಂದಿ ಮತ್ತು ಬೀದಿನಾಯಿಗಳಿಂದ ಸಹ ಅನೈರ್ಮಲ್ಯ ಉಂಟಾಗುತ್ತಿದ್ದು, ಪ್ರಾಣಿದಯಾ ಸಂಘದವರು ಪಾಲಿಕೆಗೆ ಸಹಕರಿಸಬೇಕಾಗಿದೆ ಎಂದರಲ್ಲದೆ, ಹಂದಿ ಸಾಕಾಣಿಕೆದಾರರಿಗೆ ಅಣ್ಣೇನಹಳ್ಳಿಯಲ್ಲಿ ಜಾಗವನ್ನು ನಿಗದಿಪಡಿಸಿದ್ದರೂ, ಹಂದಿ ಸಾಕಾಣಿಕೆದಾರರು ಅಲ್ಲಿಗೆ ಸ್ಥಳಾಂತರಗೊಳ್ಳದಿರುವ ಬಗ್ಗೆ ವಿಷಾದಿಸಿದರು. ಒಳಚರಂಡಿಯಲ್ಲಿ ಪ್ಲಾಸ್ಟಿಕ್, ಬಟ್ಟೆ ಮತ್ತಿತರ ಪದಾರ್ಥಗಳನ್ನು ಹಾಕಬಾರದೆಂದು ಸೈಯದ್ ನಯಾಜ್ ಮನವಿ ಮಾಡಿಕೊಂಡರು. ಉಪಮೇಯರ್ ಬಿ.ಎಸ್.ರೂಪಶ್ರೀ ಸಭೆಯಲ್ಲಿ ಭಾಗವಹಿಸಿದ್ದರು. ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಸ್ವಾಗತಿಸಿದರು. ವಿವಿಧ ಸಂಘ ಸಂಸ್ಥೆಗಳವರು ಪಾಲ್ಗೊಂಡಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link