ಚಳ್ಳಕೆರೆ
ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಒಂದಾದ ನಗರಂಗೆರೆ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷ ಬಿ.ಸಿ.ಸತೀಶ್‍ಕುಮಾರ್ ಶುಕ್ರವಾರ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು, ಗ್ರಾಮದ ಮುಖಂಡರು ಹಾಗೂ ಹಲವಾರು ಹಿತೈಷಿಗಳ ಶುಭ ಹಾರೈಕೆಗಳೊಂದಿಗೆ ಅಧಿಕಾರ ಸ್ವೀಕರಿಸಿದರು.
ಪ್ರಾರಂಭದಲ್ಲಿ ಮಾತನಾಡಿದ ಕಾರ್ಯದರ್ಶಿ ಎಂ.ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ದ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯ ಯಶಸ್ಸಿಯಾಗಿದ್ದು, ರಾಜ್ಯ ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ಸೂಚನೆಯಂತೆ ಪ್ರಸ್ತುತ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಬಿ.ಸಿ.ಸತೀಶ್‍ಕುಮಾರ್‍ರವರು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಅವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರು ಹಾಗೂ ಗ್ರಾಮದ ಮುಖಂಡರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಗಂಗಮ್ಮ ಕೊಂ ಸಣ್ಣ ಬೋರಯ್ಯ ಇವರ ವಿರುದ್ದ 15 ಜನ ಸದಸ್ಯರು ಅವಿಶ್ವಾಸವನ್ನು ಮಂಡಿಸಿದ್ದು, ಈ ಬಗ್ಗೆ ಅಧ್ಯಕ್ಷರಾಗಿದ್ದ ಗಂಗಮ್ಮ ಅವಿಶ್ವಾಸ ನಿರ್ಣಯವನ್ನು ರದ್ದು ಪಡಿಸಿಬೇಕೆಂದು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಮನವಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿ ವಿಶ್ವಾಸ ನಿರ್ಣಯದ ಅಂಗೀಕಾರಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ವರದಿ ನೀಡಿ ಪಂಚಾಯಿತಿ ಕಾಯ್ದೆ 1993 ಕಲಂ 47ರ ರೀತ್ಯ ಉಪಾಧ್ಯಕ್ಷರೇ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅಧಿಕಾರವನ್ನು ಹೊಂದಿದ್ದು, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಬಿ.ಸಿ.ಸತೀಶ್‍ಕುಮಾರ್‍ರವರು ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದು, ಈ ಹಿನ್ನೆಲ್ಲೆಯಲ್ಲಿ ಶುಕ್ರವಾರ ಅವರು ಅಧಿಕಾರ ವಹಿಸಿಕೊಂಡರು ಎಂದರು.
ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಬಿ.ಸಿ.ಸತೀಶ್‍ಕುಮಾರರವರನ್ನು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಆತ್ಮೀಯವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕುಮಾರ್, ಶೇಖರಪ್ಪ, ಬಾಬು, ಲಕ್ಷ್ಮೀಪುರದ ದೊಣಪ್ಪರೆಡ್ಡಿ, ಹೊಟ್ಟೆಪ್ಪನಹಳ್ಳಿ ಕಾಂತರಾಜು ಮುಂತಾದವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತ ಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ