ಬೆಂಗಳೂರು
ಲಕ್ಷಣ ರಹಿತ ಕೊರೋನಾ ಸೋಂಕಿತರನ್ನು ಎ- ಸೋಂಕಿತರೆಂದು ಗುರುತಿಸಲಾಗಿದ್ದು, ಅವರನ್ನು ಮನೆ ಆರೈಕೆ – ಹೋಮ್ ಐಸೋಲೇಷನ್ ಮಾಡುವ ಸಂಬಂಧ, ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ತಜ್ಞರ ಸಲಹೆಯಂತೆ ಕೋವಿಡ್ ಆರೈಕೆ ಕೇಂದ್ರದ ಬದಲು, ಮನೆಯಲ್ಲೇ ಐಸೋಲೇಶನ್ ಗೆ ಒಳಪಡಿಸಿ, ಆರೈಕೆ ಮಾಡುವ ವಿಧಾನಗಳನ್ನು ಸೂಚಿಸಿದೆ.
ಎ ಸೋಂಕಿತರು ಮನೆಯಲ್ಲಿ 17 ದಿನಗಳ ಕಾಲ ಆರೈಕೆಯಲ್ಲಿ ಇರಬೇಕಾಗುತ್ತದೆ. ಲಕ್ಷಣ ರಹಿತ ಅಥವಾ ಅತಿ ಕಡಿಮೆ ಲಕ್ಷಣ ಹೊಂದಿರುವವರು ಮಾತ್ರ, ಮನೆ ಆರೈಕೆಗೆ ಒಳಪಡಬೇಕು. 50 ವರ್ಷದ ವಯಸ್ಸಿನ ಒಳಗಿನವರಾಗಿರಬೇಕು. ಹೃದಯ , ಮೂತ್ರಪಿಂಡ, ಸೇರಿ ಮೊದಲಾದ ವಯೋ ಸಹಜ ಸಮಸ್ಯೆಗಳಿರಬಾರದು ಎಂದು ತಿಳಿಸಲಾಗಿದೆ.
ಬಿಬಿಎಂಪಿ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗಳು ಸೋಂಕಿತರ ಮನೆಗೆ ತೆರಳಿ, ಐಸೋಲೇಶನ್ ಗೆ ಮನೆ ಸೂಕ್ತವೇ ಎಂಬುದನ್ನು ಪರೀಕ್ಷಿಸಬೇಕು. ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ , ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ದೂರ ಸಂಪರ್ಕ ವ್ಯವಸ್ಥೆಯ ಮೂಲಕ ಸೋಂಕಿತರೊಂದಿಗೆ ವೈದ್ಯರು ಮಾತನಾಡುವ ವ್ಯವಸ್ಥೆ ಇರಬೇಕು. ಪ್ರತಿ ದಿನ, ಆರೋಗ್ಯ ಇಲಾಖೆಗೆ ವರದಿ ನೀಡುವ ಜೊತೆಗೆ, ಸೋಂಕಿತರ ನಾಡಿ ಪತ್ತೆ ಉಪಕರಣ, ಡಿಜಿಟಲ್ ಥರ್ಮಾಮೀಟರ್, ಫೇಸ್ ಮಾಸ್ಕ್, ಕೈಗವಸು ಹೊಂದಿರಬೇಕು.
ಇ-ಟ್ಯಾಗ್ ಬ್ಯಾಂಡ್ ಅನ್ನು ಕೈಗೆ ಕಟ್ಟಿ , ಅವರ ಚಲನವಲನ ಗಮನಿಸಬೇಕು. ಮನೆಯ ಮುಂಭಾಗ ಐಸೋಲೇಶನ್ ನೋಟಿಸ್ ಅಂಟಿಸಬೇಕು. ನೆರೆಮನೆಯ ಇಬ್ಬರಿಗೆ ಈ ಬಗ್ಗೆ ಮಾಹಿತಿ ನೀಡಿ , ನಿಯಮ ಉಲ್ಲಂಘಿಸಿದರೆ, ಎಫ್ ಐಆರ್ ದಾಖಲಿಸಿ, ಕೋವಿಡ್ ಕೇರ್ ಕೇಂದ್ರಕ್ಕೆ ರವಾನಿಸಬೇಕು ಎಂದು ಸೂಚಿಸಲಾಗಿದೆ.
ಸೋಂಕಿನ ಲಕ್ಷಣ ಇಲ್ಲದಿದ್ದರೆ, ಜ್ವರ ಇಲ್ಲದಿದ್ದರೆ , ಗುಣಮುಖ ಎಂದು ಪರಿಗಣಿಸಬಹುದು. 17 ದಿನಗಳ ಬಳಿಕ ಹಾಗೂ 10 ದಿನಗಳ ಕಾಲ ಜ್ವರ ರಹಿತವಾಗಿದ್ದರೆ, ಗುಣಮುಖರಾಗಿದ್ದಾರೆ ಎಂದು ಪರಿಗಣಿಸಬಹುದು ಎಂದು ಮಾರ್ಗಸೂಚಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ