ಬೆಂಗಳೂರು
ಅತ್ತೂ ಕರೆದು ಸಚಿವ ಸಂಪುಟದಲ್ಲಿ ಕೊನೆಗೂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಶಾಸಕರಾದ ಆರ್. ಶಂಕರ್ ಮತ್ತು ಹೆಚ್. ನಾಗೇಶ್ ಅವರಿಗೆ ಹತ್ತು ದಿನ ಕಳೆದರೂ ಖಾತೆ ಹಂಚಿಕೆ ಮಾಡದಿರುವುದು ಅಸಮಾಧಾನ ಅತೃಪ್ತಿಗೆ ಕಾರಣವಾಗಿದೆ. ಸಚಿವರಾಗಿ ನೇಮಕಗೊಂಡವರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಖಾತೆ ಹಂಚಿಕೆ ಮಾಡದೆ ಸತಾಯಿಸುತ್ತಿರುವುದು ದೋಸ್ತಿ ನಾಯಕರಲ್ಲೂ ಅಸಮಾಧಾನಕ್ಕೆಡೆ ಮಾಡಿಕೊಟ್ಟಿದೆ.
ಜೆಡಿಎಸ್ ಅಧ್ಯಕ್ಷ ಹೆಚ್. ವಿಶ್ವನಾಥ್ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡದಿರುವುದು ಬೇಸರದ ಸಂಗತಿ ಎಂದು ಬಹಿರಂಗವಾಗಿಯೇ ಮುಖ್ಯಮಂತ್ರಿಗಳ ವಿರುದ್ಧ ಅತೃಪ್ತಿ-ಅಸಹನೆ ವ್ಯಕ್ತಪಡಿಸಿ, ವಾರಕಳೆದರೂ ಇನ್ನೂ ಯಾವುದೇ ಖಾತೆ ಹಂಚಿಕೆ ಯಾಗದಿರುವುದು ನೂತನ ಸಚಿವರಾದ ಆರ್. ಶಂಕರ್ ಮತ್ತು ಹೆಚ್. ನಾಗೇಶ್ ಅವರಲ್ಲಿ ಸಿಟ್ಟು ತರುವಂತಾಗಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಈವರೆಗೆ ದಿನ ಕಳೆದರೂ ಖಾತೆ ಹಂಚಿಕೆಯಾಗದಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಪ್ರಥಮ ಎನ್ನಲಾಗಿದೆ.
ನೂತನ ಸಚಿವರಾದ ಆರ್. ಶಂಕರ್ ಮತ್ತು ಹೆಚ್. ನಾಗೇಶ್ ಅವರಿಗೆ ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಖಾತೆ ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ತಿಂಗಳ 14ರಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಏಳೆಂಟು ದಿನಗಳು ಕಳೆದರೂ ಇನ್ನೂ ಖಾತೆ ಹಂಚಿಕೆಯಾಗದಿರುವುದು ರಾಜ್ಯದ ಇತಿಹಾಸದಲ್ಲಿ ಪ್ರಥಮ ಎನ್ನಲಾಗಿದೆ.