ಹೊನ್ನಾಳಿ:
ಸರಕಾರಿ ನೌಕರರ ಹಿತರಕ್ಷಣೆಯೇ ನೌಕರರ ಸಂಘಗಳ ಧ್ಯೇಯವಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಹೇಳಿದರು.
ಇಲ್ಲಿನ ಟಿ.ಬಿ. ವೃತ್ತದಲ್ಲಿನ ರಾಜ್ಯ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಸರಕಾರಿ ನೌಕರರ ಸಂಘದ ನೂತನ ನ್ಯಾಮತಿ ತಾಲೂಕು ಘಟಕ ರಚನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಸದಸ್ಯರ ಹಿತರಕ್ಷಣೆಯ ಉದ್ದೇಶದಿಂದಲೇ ಸಂಘಗಳು ರಚನೆಯಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕೂಡ ತನ್ನ ಎಲ್ಲಾ ಸದಸ್ಯರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ತಿಳಿಸಿದರು.
ಸರಕಾರಿ ನೌಕರರ ಸಂಘದ ನೂತನ ನ್ಯಾಮತಿ ತಾಲೂಕು ಘಟಕದ ರಚನೆ ಪ್ರಕ್ರಿಯೆ ಆರಂಭಿಸಲಾಗಿದೆ. ಹಾಗಾಗಿ, ನೂತನ ಸಂಘದ ಪದಾಧಿಕಾರಿಗಳಾಗಲು ಹಾಗೂ ಸದಸ್ಯತ್ವ ಪಡೆಯಲು ಆಸಕ್ತಿ ಹೊಂದಿರುವ ನೌಕರರು ಅ.12ರೊಳಗೆ ಸಂಘದ ಕಚೇರಿಯನ್ನು ಸಂಪರ್ಕಿಸಬಹುದು. ಈ ಅವಧಿಯನ್ನು ಮತ್ತೆ ವಿಸ್ತರಿಸಲಾಗುವುದಿಲ್ಲ. ಆದ್ದರಿಂದ, ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಸಹಕರಿಸಬೇಕು ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹೊನ್ನಾಳಿ ತಾಲೂಕು ಘಟಕದ ಗೌರವಾಧ್ಯಕ್ಷ ನ್ಯಾಮತಿ ನಾಗರಾಜ್ ಮಾತನಾಡಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಕಾರ್ಯದರ್ಶಿ ಪರಶುರಾಮ್, ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷ ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್ ಮಾಳಗಿ, ಖಜಾಂಚಿ ಎಚ್.ಕೆ. ರಮೇಶ್, ಮಾಜಿ ಅಧ್ಯಕ್ಷರಾದ ಡಾ.ವಿಶ್ವನಟೇಶ್, ರವಿ ಗಾಳಿ, ಶಿವಪದ್ಮ, ಸಿದ್ಧಪ್ಪ, ಕೆ.ಎಲ್. ಜಗದೀಶ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ