ಹೊನ್ನಾಳಿ:
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಜಿ.ಎಂ. ಸಿದ್ಧೇಶ್ವರ್ ಹಾಗೂ ಎನ್‍ಡಿಎ ಮೈತ್ರಿಕೂಟದ ಅಭೂತಪೂರ್ವ ವಿಜಯದ ಹಿನ್ನೆಲೆಯಲ್ಲಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಸಿದ ಬಳಿಕ ಅವರು ಮಾತನಾಡಿದರು.
ಇಡೀ ರಾಷ್ಟ್ರದಲ್ಲಿ ಬಿಜೆಪಿ ಏಕಾಂಗಿಯಾಗಿ ಮೂರು ನೂರಕ್ಕೂ ಅಧಿಕ ಸ್ಥಾನಗಳನ್ನು ಹಾಗೂ ಎನ್‍ಡಿಎ ಮೈತ್ರಿಕೂಟ 352ರಷ್ಟು ಸ್ಥಾನಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ 70 ವರ್ಷಗಳ ಭ್ರಷ್ಟ ಆಡಳಿತದಿಂದ ರೋಸಿಹೋಗಿದ್ದ ದೇಶದ ಜನತೆ ಇಂದು ನರೇಂದ್ರ ಮೋದಿ ಅವರ ಆಡಳಿತಕ್ಕೆ ಮನಸೋತು ಮಹಾಘಟಬಂಧನ್‍ನ್ನು ಧಿಕ್ಕರಿಸಿದ್ದಾರೆ. ಆ ಮೂಲಕ ದೇಶದ ಸ್ವಾಭಿಮಾನ ಎತ್ತಿಹಿಡಿಯುವ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ತಮ್ಮ ಬೆಂಬಲವನ್ನು ಮತದಾರರು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕೂಡ ಬಿಜೆಪಿ 28 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ತನ್ನಾಗಿಸಿಕೊಂಡಿದೆ. ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತ್ರ ಅಭ್ಯರ್ಥಿ ಸುಮಲತಾ ಜಯ ಗಳಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಮುಖಭಂಗವಾಗಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ಇದೇ ರೀತಿ ದುರಹಂಕಾರದ ಮಾತುಗಳನ್ನಾಡುತ್ತಿದ್ದ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮತ್ತೆ ಬಿಜೆಪಿ ಸರಕಾರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರ ಪ್ರಭುಗಳು ಸ್ಪಷ್ಟ ಸಂದೇಶ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಸಂಭ್ರಮಾಚರಣೆ ವೇಳೆ ತಾಪಂ, ಪಪಂ ಚುನಾಯಿತ ಪ್ರತಿನಿಧಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.