ಕೊರಟಗೆರ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಶೇ.79.69ರಷ್ಟು ಮತದಾನ

ಕೊರಟಗೆರೆ

       ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 242 ಮತಗಟ್ಟೆ ಕೇಂದ್ರದಲ್ಲಿ ಮತದಾನ ಪ್ರಾರಂಭಕ್ಕೂ ಮುನ್ನ 11 ಮತಗಟ್ಟೆ ಕೇಂದ್ರದಲ್ಲಿ ಕೈಕೊಟ್ಟ ಕಂಟ್ರೋಲ್ ಯೂನಿಟ್, ವಿವಿ ಪ್ಯಾಟ್ ಬದಲಾವಣೆ ಮತ್ತು ಮತದಾನ ಪ್ರಾರಂಭವಾದ ನಂತರ 15 ಮತಗಟ್ಟೆ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದ ವಿವಿ ಪ್ಯಾಟ್ ಬದಲಾವಣೆ ಮಾಡಿದ ನಂತರ ಮತದಾನ ತಡವಾಗಿ ಆರಂಭವಾದರೂ ಸಹ ದಾಖಲೆಯ ಶೇ.79.67ರಷ್ಟು ಮತದಾನ ನಡೆದಿದೆ.

         ಲೋಕಸಭಾ ಚುನಾವಣೆ ಪ್ರಯುಕ್ತ ನೂತನ ಅಂಕಿಅಂಶದ ಪ್ರಕಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಆರು ಹೋಬಳಿ ವ್ಯಾಪ್ತಿಯಲ್ಲಿ ಮಹಿಳೆಯರು-79,193, ಪುರುಷರು-81,476 ಸೇರಿ ಒಟ್ಟು 1,60,669 ಮತದಾರರು ಸೇರಿ ಒಟ್ಟು ಶೇ.79.67ರಷ್ಟು ಜನ ತಮ್ಮ ಮತವನ್ನು ಚಲಾಯಿಸಿದ್ದಾರೆ. ಹಲವಾರು ತಾಂತ್ರಿಕ ದೋಷದ ನಡುವೆಯು ಸಹ ಮತದಾರರು ಶಾಂತಿಯುತವಾಗಿ ಮತಗಟ್ಟೆಗೆ ಬಂದು ದಾಖಲೆಯ ಮತದಾನ ಮಾಡಿ ಮತದಾನದಲ್ಲಿ ಒಟ್ಟಾರೆ ಪುರುಷರು ಮೇಲುಗೈ ಸಾಧಿಸಿದ್ದಾರೆ.
ಮತದಾನಕ್ಕಿಂತ ಮೊದಲು ಸ್ಥಗಿತ:

        ಮತಗಟ್ಟೆ ಕೇಂದ್ರದಲ್ಲಿ ಮುಂಜಾನೆ 7ಗಂಟೆಗೆ ಮತದಾನ ಪ್ರಾರಂಭಕ್ಕೂ ಮುನ್ನವೆ ಕೋಡಗದಾಲ, ಹೊಳವನಹಳ್ಳಿ, ಗೊಂದಿಹಳ್ಳಿ, ಬುಡ್ಡೇನಹಳ್ಳಿ, ಮಾರನಾಯಕನಹಳ್ಳಿ ಮತಗಟ್ಟೆಯಲ್ಲಿ ಕಂಟ್ರೋಲ್ ಯುನಿಟ್ ಬದಲಾವಣೆ. ಬರಕ, ಹೊಳವನಹಳ್ಳಿ, ದೊಡ್ಡಹೊಸಹಳ್ಳಿ, ಕಾಶಪುರ, ಚೀಲಗಾನಹಳ್ಳಿ, ಗೊಂದಿಹಳ್ಳಿ, ಮಾದೇನಹಳ್ಳಿ ಮತಗಟ್ಟೆ ಕೇಂದ್ರದ ವಿವಿ ಪ್ಯಾಟ್‍ನ್ನು ತಾಂತ್ರಿಕ ದೋಷದಿಂದ ಬದಲಾವಣೆ ಮಾಡಲಾಗಿದೆ.

ಮತದಾನದ ವೇಳೆ ಕಾರ್ಯ ಸ್ಥಗಿತ:

       ಮತದಾನ ಪ್ರಾರಂಭವಾದ ನಂತರ ದೊಡ್ಡನರಸಯ್ಯನಪಾಳ್ಯ, ಕೊರಟಗೆರೆ, ಪಾತಗಾನಹಳ್ಳಿ, ಚಿಕ್ಕನಹಳ್ಳಿ, ಹರಿಹರಪ್ಪನಪಾಳ್ಯ, ಮಲ್ಲೇಕಾವು, ಕ್ಯಾಶವಾರ, ಮಾದೇನಹಳ್ಳಿ, ಮಳೇನಹಳ್ಳಿ, ಮಣುವಿನಕುರಿಕೆ, ಹಿರೇತೊಟ್ಲುಕೆರೆ, ಹೊಸಕೋಟೆ, ಚಿಕ್ಕರಸನಹಳ್ಳಿ, ಚಿನ್ನಹಳ್ಳಿ, ಮಲ್ಲೇಕಾವು ಗ್ರಾಮದ ಮತಗಟ್ಟಿ ಕೇಂದ್ರದಲ್ಲಿ ವಿವಿಧ ರೀತಿಯ ತಾಂತ್ರಿಕ ದೋಷದಿಂದ ವಿವಿ ಪ್ಯಾಟ್‍ನ್ನು ಬದಲಾವಣೆ ಮಾಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

6 ಗಂಟೆ ನಂತರ ಮತದಾನಕ್ಕೆ ಅವಕಾಶ:

         ಕೊರಟಗೆರೆ ವಿಧಾನಸಭಾ ಕ್ಷೇತ್ರದ 242ಮತಗಟ್ಟೆ ಕೇಂದ್ರದ ಪೈಕಿ ಮತದಾನ ಪ್ರಕ್ರಿಯೆ ಮುಕ್ತಾಯದ ಸಮಯ ಸಂಜೆ 6ಗಂಟೆಯ ನಂತರ ಸುಮಾರು 40 ಮತಗಟ್ಟಿ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಜೆ 6.30ಕ್ಕೆ ಮತದಾನ ಆಗುತ್ತಿರುವ ಮತಗಟ್ಟೆಗಳ ಸಂಖ್ಯೆ 25ಕ್ಕೆ ಇಳಿದಿದೆ. ಸಂಜೆ 6.45ಕ್ಕೆ ಮತಗಟ್ಟೆ ಕೇಂದ್ರದ ಸಂಖ್ಯೆ 12ಕ್ಕೆ ಇಳಿದಿದೆ. ಸಂಜೆ 7ಗಂಟೆ ವೇಳೆಗೆ 242ಮತಗಟ್ಟೆ ಕೇಂದ್ರದಲ್ಲಿ ಮತದಾನ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ಪೂರ್ಣಗೊಂಡಿದೆ.

ಹೆಸರಿಲ್ಲದೆ ನೂರಾರು ಮತದಾರರ ಪರದಾಟ:

      ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 2018ನೇ ಸಾಲಿನ ಅಕ್ಟೋಬರ್ ತಿಂಗಳಿಂದ 2019ನೇ ಏಪ್ರೀಲ್ 10ರೊಳಗೆ ಮಾಡಿದ ತಿದ್ದುಪಡಿಯಲ್ಲಿ 2601ಜನ ಮತದಾರರ ಹೆಸರನ್ನು ಕೈಬಿಡಲಾಗಿದೆ. ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಕಾರಣ ಮಾಹಿತಿಯು ಸಹ ಲಭ್ಯವಿಲ್ಲ. ಗೊಡ್ರಹಳ್ಳಿ ಮತ್ತು ಬೈಚಾಪುರ ಮತಗಟ್ಟಿ ಕೇಂದ್ರದಲ್ಲಿ 90ಕ್ಕೂ ಹೆಚ್ಚು ಮತದಾರರ ಹೆಸರು ಕಾಣೆಯಾಗಿದೆ. ಇನ್ನೂಳಿದಂತೆ ಕೊರಟಗೆರೆ ಪಟ್ಟಣ ಮತ್ತು ತಾಲೂಕಿನ ವಿವಿಧ ಕಡೆಗಳಲ್ಲಿ ನೂರಾರು ಜನ ಮತದಾರರ ಹೆಸರು ಇಲ್ಲದಾಗಿ ಮತದಾನದಿಂದ ವಂಚಿತರಾಗಿದ್ದಾರೆ.

     ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 242ಮತಗಟ್ಟಿ ಕೇಂದ್ರಗಳಿಗೆ ಒಟ್ಟು 1164ಚುನಾವಣಾ ಅಧಿಕಾರಿಗಳ ತಂಡ ಗ್ರಾಮೀಣ ಪ್ರದೇಶದಲ್ಲಿ 40ಬಸ್ಸು ಮತ್ತು ಪಟ್ಟಣದಲ್ಲಿ 10ಜೀಪಿನ ಮೂಲಕ ಪೋಲಿಸ್ ಇಲಾಖೆಯ ಬಿಗಿ ಭದ್ರತೆಯಲ್ಲಿ ಎವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಮತದಾನವಾದ ನಂತರ ಪದವಿಪೂರ್ವ ಕಾಲೇಜು ಆವರಣಕ್ಕೆ ತರಲಾಗಿದೆ. ಪೊಲೀಸ್ ಇಲಾಖೆಯಿಂದ ಭದ್ರತೆಗಾಗಿ ಡಿವೈಎಸ್ಪಿ-1, ಸಿಪಿಐ-3, ಪಿಎಸೈ-7, ಎಎಸೈ-17, ಪೊಲೀಸ್ ಸಿಬ್ಬಂದಿ-330 ಮತ್ತು ಹೋಂಗಾರ್ಡ್ ಸಿಬ್ಬಂದಿ-100 ನಿಯೋಜನೆ ಮಾಡಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap