ದಾವಣಗೆರೆ:
ಎಲ್ಲಾ ಶಾಲೆಗಳಲ್ಲಿ ಭಾರತ ಸೇವಾದಳದ ಶಾಖೆಗಳನ್ನು ತೆರೆಯುವ ಮೂಲಕ ಸಕ್ರಿಯಗೊಳಿಸಿ, ಸೇವಾದಳದ ಕಾರ್ಯಚಟುವಟಿಕೆ ನಡೆಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸಬೇಕೆಂದು ಶಿಕ್ಷಣಾಧಿಕಾರಿ ನಿರಂಜನಮೂರ್ತಿ ತಿಳಿಸಿದರು.
ನಗರದ ಸೇವಾದಳ ಭವನದಲ್ಲಿ ಭಾರತ ಸೇವಾದಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸೇವಾದಳ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೇವಾದಳವು ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಾರ್ವಭೌಮತ್ವಯನ್ನು ಬೆಳೆಸುವ ಮೂಲಕ ಸೇವೆ ಮಾಡುವ ಗುಣಗಳನ್ನು ಕಲಿಸಿಕೊಡಲಿದೆ. ಆದ್ದರಿಂದ ಎಲ್ಲಾ ಶಾಲೆಗಳಲ್ಲೂ ಸೇವಾದಳದ ಶಾಖೆಗಳನ್ನು ಆರಂಭಿಸಬೇಕಿದೆ ಎಂದರು.
ಪರೋಪಕಾರ ಮತ್ತು ಮತ್ತೊಬ್ಬರನ್ನು ಗೌರವಿಸುವುದನ್ನು ಸೇವಾದಳ ಕಲಿಸಿಕೊಡಲಿದ್ದು, ರಾಷ್ಟ್ರೀಯ ಭಾವೈಕ್ಯವನ್ನು ಅನುಷ್ಠಾನಕ್ಕೆ ತರಲಿಕ್ಕಾಗಿ, ದೇಶದ ಎಲ್ಲಾ ಶಾಲೆಗಳಲ್ಲೂ ಸೇವಾದಳದ ಶಾಖೆಗಳನ್ನು ತೆರೆಯಲು ಈಗಾಗಲೇ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ ಎಂದ ಅವರು, ಇದು ಶಿಸ್ತು ಹಾಗೂ ರಾಷ್ಟ್ರ ಪ್ರೇಮವನ್ನು ಬೆಳೆಸುತ್ತದೆ ಎಂದು ನುಡಿದರು.
ಶಿಕ್ಷಕರು ರಾಷ್ಟ್ರ ಧ್ವಜ, ರಾಷ್ಟ್ರೀಯ ಚಿಹ್ನೆಗಳನ್ನು ಸಂರಕ್ಷಿಸುವ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಮೂಲಕ ಸೇವಾ ಮನೋಭಾವ ಬೆಳೆಸಬೇಕು. ನೈತಿಕ ಶಿಕ್ಷಣವನ್ನು ನೀಡಬೇಕೆಂದು ಸಲಹೆ ನೀಡಿದರು.
ಭಾರತ ಸೇವಾದಳದ ಕ್ಯಾಲೆಂಡರ್ ಕೈಪಿಡಿಯನ್ನು ಮುದ್ರಿಸಿಕೊಟ್ಟಿರುವ ಎಸ್.ಟಿ. ಕುಸಮಾಶ್ರೇಷ್ಠಿ ಮಾತನಾಡಿ, ಸೇವಾದಳವು ಸಂಯಮ, ಶಿಸ್ತು ಬೆಳೆಸಲು ಸಹಕಾರಿಯಾಗಿದೆ. ಇದಲ್ಲಿರುವ ಕಾರ್ಯಕರ್ತರು ಸೇವೆಗಾಗಿ ಬದುಕುತ್ತಿದ್ದಾರೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್. ಜಯದೇವಪ್ಪ, ನಿಸ್ವಾರ್ಥ ಸೇವೆಗೆ ಭಾರತ ಸೇವಾದಳ ಹೆಸರಾಗಿದೆ. ಗಾಂಧೀಜಿ ಆಶಯದಂತೆ ನಾ.ಸು. ಹರ್ಡೀಕರ್ ಅವರು ಹಿಂದೂಸ್ಥಾನ್ ಸೇವಾ ದಳವನ್ನು ಆರಂಭಿಸಿ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯಾ ನಂತರ ಇದು ಭಾರತ ಸೇವಾದಳ ಎಂದು ಹೆಸರು ಪಡೆದುಕೊಂಡಿದೆ ಎಂದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಎಂ.ಅಣ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, 1923ರ ಡಿಸೆಂಬರ್ 28ರಂದು ಹಿಂದೂಸ್ಥಾನ್ ಸೇವಾ ದಳವನ್ನು ಆರಂಭಿಸಲಾಗಿತ್ತು. ಹೀಗಾಗಿ ಡಿಸೆಂಬರ್ ತಿಂಗಳ ಕೊನೆಯ ವಾರವನ್ನು ಸೇವಾದಳ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಬಳ್ಳಾರಿಯಲ್ಲಿ ಜ.18 ಹಾಗೂ 19ರಂದು ರಾಜ್ಯ ಮಟ್ಟದ ಮಕ್ಕಳ ರಾಷ್ಟ್ರೀಯ ಭಾವ್ಯಕ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಜ.30ರಂದು ಹುತಾತ್ಮ ದಿನಾಚರಣೆ ಅಂಗವಾಗಿ ಮಲೇಬೆನ್ನೂರಿನಲ್ಲಿ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ಭಾವೈಕ್ಯ ಮೇಳ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಯು.ಹನುಮಂತಪ್ಪ, ಕೋಶಾಧ್ಯಕ್ಷೆ ಉಮಾ ವೀರಭದ್ರಪ್ಪ, ಭೂಸೇನಾ ನಿಗಮದ ಕಾರ್ಯನಿರ್ವಹಣಾಧಿಕಾರಿ ಬಿ.ಚಂದ್ರಶೇಖರ್, ಕ್ಯಾಪ್ ಇಂಡಿಯಾ ಕನ್‍ಸ್ಟ್ರಕ್ಷನ್ ಜನರಲ್ ಮ್ಯಾನೇಜರ್ ಪವಿತ್ರನ್ ಮತ್ತಿತರರು ಉಪಸ್ಥಿತರಿದ್ದರು. ಕೆ.ಟಿ. ಜಯಪ್ಪ ಸ್ವಾಗತಿಸಿದರು. ಟಿ.ಎಸ್. ಕುಮಾರಸ್ವಾಮಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ