- ಬೆಂಗಳೂರು
ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದರಿಂದ ಅಪಘಾತಗಳನ್ನು ತಪ್ಪಿಸಲು ವಿಶೇಷ ವ್ಯವಸ್ಥೆ ಜಾರಿಗೆ ಬರಲಿವೆ ಎಂದು ಸಾರಿಗೆ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈಗ ಪ್ರಾಯೋಗಿಕ ಹಂತದಲ್ಲಿರುವ ಈ ಕ್ರಮಗಳು ಅನುಷ್ಠಾನಗೊಂಡರೆ ಬಸ್ಸುಗಳ ಎದುರು ಆಕಸ್ಮಿಕವಾಗಿ ಇತರ ವಾಹನಗಳು ಅಥವಾ ವ್ಯಕ್ತಿಗಳು ಅಡ್ಡ ಬಂದಲ್ಲಿ ಚಾಲಕರಿಗೆ ಎಚ್ಚರಿಕೆಯ ಸೂಚನೆ ನೀಡುವ ಮತ್ತು ಸ್ವಯಂಚಾಲಿತವಾಗಿಯೇ ಬ್ರೇಕ್ ಹಾಕಿ ಅಪಘಾತ ತಪ್ಪಿಸಲು ಸಹಾಯವಾಗುವ ತಂತ್ರಜ್ಞಾನ ಅಡಕಗೊಳಿಸಲಾಗುತ್ತಿದೆ ಎಂದಿದ್ದಾರೆ.
ನಗರದಲ್ಲಿಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಅಪಘಾತಗಳ ಪರಿಹಾರವಾಗಿ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 100 ಕೋಟಿ ರೂಪಾಯಿಗಿಂತ ಹೆಚ್ಚು ಹಣ ನಮ್ಮ ಸಾರಿಗೆ ಸಂಸ್ಥೆಗಳಿಂದ ವ್ಯಯವಾಗುತ್ತಿದೆ. ಅಷ್ಟೇಅಲ್ಲ, ಅನೇಕ ಸಾವು-ನೋವುಗಳಿಗೂ ಈ ಅಪಘಾತಗಳು ಕಾರಣವಾಗುತ್ತಿವೆ. ಹಲವು ಸಂದರ್ಭಗಳಲ್ಲಿ ಇತರ ವಾಹನ ಚಾಲಕರು ನಡೆಸುವ ನಿರ್ಲಕ್ಷ್ಯದ ಚಾಲನೆಯಿಂದಾಗಿ ಉಂಟಾಗುವ ಅಪಘಾತಗಳಲ್ಲಿ ವಿನಾಕಾರಣ ನಮ್ಮ ಸರ್ಕಾರಿ ಸಾರಿಗೆ ಸಂಸ್ಥೆಗಳು ಪರಿಹಾರ ನೀಡುವಂತಹ ಸಂದರ್ಭಗಳೂ ಎದುರಾಗಿವೆ. ಇವುಗಳನ್ನು ತಪ್ಪಿಸಲು ಅಪಘಾತಗಳ ಮುನ್ಸೂಚನೆ ನೀಡುವಂಥ ಉಪಕರಣಗಳನ್ನು ಬಸ್ಸುಗಳಲ್ಲಿ ಅಳವಡಿಸಲು ಸೂಚಿಸಲಾಗಿತ್ತು ಎಂದರು.
ಈಗಾಗಲೇ ಕೆಲವು ಹೈಟೆಕ್ ಸಂಸ್ಥೆಗಳೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಪ್ರಯೋಗಿಕವಾಗಿ ನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೇ ಇಂತಹ ಉಪಕರಣಗಳನ್ನು ಅಭಿವೃದ್ಧಿಪಡಿಸಿದ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸವದಿ ಸ್ಪಷ್ಟಪಡಿಸಿದರು.
ಕೆಲವು ದುಬಾರಿ ಖಾಸಗಿ ಕಾರುಗಳಲ್ಲಿ ಇಂತಹ ತಂತ್ರಜ್ಞಾನ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಒಂದು ವೇಳೆ ಚಾಲಕರಿಗೆ ನಿದ್ದೆಯ ಮಂಪರು ಕವಿದಂತಾದರೆ ತಕ್ಷಣವೇ ಎಚ್ಚರಿಕೆಯ ಸೂಚನೆ ನೀಡುವಂತಹ ಮತ್ತು ಆಕಸ್ಮಿಕವಾಗಿ ವಾಹನಗಳು ಅಥವಾ ವ್ಯಕ್ತಿಗಳು ಎದುರಿಗೆ ಅಡ್ಡಬಂದರೆ ತಂತಾನಾಗಿಯೇ ಬ್ರೇಕ್ ಹಾಕುವಂತಹ ವ್ಯವಸ್ಥೆ ಜಾರಿಗೆ ಬಂದಿದೆ. ಇಂತಹ ಆಧುನಿಕ ಪ್ರಯೋಗ ನಮ್ಮ ಸರ್ಕಾರಿ ಸಾರಿಗೆ ಬಸ್ಸುಗಳಲ್ಲೂ ಯಶಸ್ವಿಯಾದರೆ ಹಲವು ರೀತಿಯ ಅನುಕೂಲ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಲಾಕ್‍ಡೌನ್ ನಂತರದಲ್ಲಿ ಶೇ 60 ರಷ್ಟು ಬಸ್ ಸಂಚಾರಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ತಿಂಗಳು ಕೊರಿಯರ್ ಸೇವೆಯನ್ನೂ ನಮ್ಮ ಸಾರಿಗೆ ಸಂಸ್ಥೆಗಳ ಮೂಲಕ ಪ್ರಾರಂಭಿಸಲಾಗುವುದು. ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿ ಉಳಿತಾಯದ ಕ್ರಮವಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ. ಹೊಸ ಸಿಬ್ಬಂದಿ ನೇಮಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸವದಿ ವಿವರಿಸಿದರು.
ಇಂದಿನ ಸಭೆಯಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಅಂಜುಂ ಪರ್ವೇಜ್, ಕ.ರಾ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಭದ್ರತಾ ಮತ್ತು ಜಾಗೃತಾ ನಿರ್ದೇಶಕರಾದ ಡಾ. ಅರುಣ್, ಈ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೂರ್ಮಾರಾವ್, ವಾ.ಕ.ರ.ಸಾ.ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ