ದಾವಣಗೆರೆ:
ಹೊಸ ಕೈಗಾರಿಕೋದ್ಯಮಿಗಳಿಗಾಗಿ ಸರ್ಕಾರ ‘ಕಾಯಕ ಆಧಾರ’ ಯೋಜನೆ ಜಾರಿಗೆ ತರುವ ಮೂಲಕ ಕೌಶಲ್ಯಯುತ ಉದ್ಯಮಿಗಳನ್ನು ತಯಾರು ಮಾಡುವಂತಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸತ್ಯನಾರಾಯಣ ಭಟ್ ಆಶಯ ವ್ಯಕ್ತಪಡಿಸಿದರು.
ನಗರದ ಬಿಐಟಿ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕೋದ್ಯಮಿಗಳ ಸಂಘ, ದಾವಣಗೆರೆ ಟೆಕ್ಸ್ಟೈಲ್ ಪಾರ್ಕ್ ಪ್ರೈವೇಟ್ ಲಿಮಿಟೆಡ್, ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್, ಜಿಲ್ಲಾ ಮುದ್ರಣಕಾರರ ಸಂಘ ಹಾಗೂ ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘ ಇವುಗಳ ಸಹಯೋಗದಲ್ಲಿ ನಡೆದ ಕೈಗಾರಿಕಾ ನೀತಿ 2014-19 ಹಾಗೂ ಉದ್ದೇಶಿತ ಹೊಸ ಕೈಗಾರಿಕಾ ನೀತಿ ಮತ್ತು ಸುಗಮ ವಾಣಿಜ್ಯ-ವ್ಯವಹಾರ ನಡೆಸುವಿಕೆಗಾಗಿ ಸಲಹೆಗಳ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸರ್ಕಾರವು ಕೌಶಲ್ಯಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಕಾಯಕ ಆಧಾರ ಯೋಜನೆ ಆರಂಭಿಸಬೇಕು. ಇದರ ಅಡಿಯಲ್ಲಿ ನೋಂದಣಿಯಾದ ಅಭ್ಯರ್ಥಿಗಳಿಗೆ ಆರು ತಿಂಗಳ ಸ್ಟೈಫಂಡ್ ಹಾಗೂ 1 ವರ್ಷದ ವೇತನ ನೀಡಿ, ಕೌಶಲ್ಯಯುತ ಉದ್ಯೋಗಿಗಳನ್ನು ಸೃಷ್ಟಿಸಬೇಕು. ಹೀಗೆ ಕೌಶಲ್ಯವನ್ನು ಪಡೆದ ಯುವಕರು ನವ ಉದ್ಯಮಿಗಳಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದರು.
ಹೊಸ ಉದ್ಯಮಿಗಳ ಎದುರು ಕೆಲ ಸಮಸ್ಯೆಗಳಿದ್ದು, ಅದರಲ್ಲಿ ಕೈಗಾರಿಕೆ ಸ್ಥಾಪಿಸಲುಬೇಕಾದ ಭೂಮಿ ಯ ಸಮಸ್ಯೆಯೂ ಒಂದಾಗಿದೆ. ಕೃಷಿ ಭೂಮಿಯನ್ನು ಖರೀದಿಸಿ ಹಾಗೂ ಕೈಗಾರಿಕಾ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡುವುದು ಒಂದು ಸವಾಲಾಗಿ ಪರಿಣಮಿಸಿರುವ ಕಾರಣಕ್ಕೆ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಬಹುತೇಕರು ಮುಂದಾಗುತ್ತಿಲ್ಲ. ಆದ್ದರಿಂದ ಪ್ರತಿ ರೈತರಿಗೆ ಹತ್ತನೇ ಒಂದು ಭಾಗ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಹಕ್ಕು ಸಿಗಬೇಕು. ಇದಾದರೆ, ಸಣ್ಣ ರೈತರು ಕೈಗಾರಿಕೋದ್ಯಮಿಗಳಾಗಿ ಹೊರಹೊಮ್ಮಿ, ಸಣ್ಣ ಕೈಗಾರಿಕೆಗಳ ಬೆಳವಣಿ ಆಗಲು ಸಹ ಸಾಧ್ಯವಾಗಲಿದೆ ಎಂದು ಪ್ರತಿಪಾದಿಸಿದರು.
ಪ್ರಸ್ತುತ ಕೈಗಾರಿಕೆ ಆರಂಭಿಸಲು ಮುಂದಾಗುವವರಿಗೆ ಹಣಕಾಸಿನ ಸಮಸ್ಯೆ ಇಲ್ಲವಾಗಿದೆ. ಏಕೆಂದರೆ, ಸರ್ಕಾರವು ಕೈಗಾರಿಕೆಗಳ ಬೆಳವಣಿಗೆಗಾಗಿ ಸಬ್ಸಿಡಿ ಸಹಿತ ಸಾಲಸೌಲಭ್ಯವನ್ನು ನೀಡುತ್ತಿದೆ. ಆದರೆ, ಸಾಲ ಕೊಡುವ ಪ್ರಕ್ರಿಯೆ ವಿಳಂಬವಾಗಿ, ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವವರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿಯೂ ಕೈಗಾರಿಕೆಗಳ ಆರಂಭಕ್ಕೆ ಬಹುತೇಕರು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕೈಗಾರಿಕಾ ಉದ್ದೇಶಕ್ಕಾಗಿ ಸಾಲ ಕೋರಿ ಅರ್ಜಿ ಸಲ್ಲಿಸಿರುವವರು ಬ್ಯಾಂಕ್ಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕಾದರೆ, ಸರ್ಕಾರವೇ ಒಂದು ಆ್ಯಪ್ ಅಭಿವೃದ್ಧಿ ಪಡಿಸಬೇಕು. ಆ ಆ್ಯಪ್ನಲ್ಲಿ ತುಂಬಿದ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ನಡೆಸಿ, ಬ್ಯಾಂಕ್ಗಳಿಗೆ ಕಳುಹಿಸುವ ವಾತಾವರಣ ಸೃಷ್ಟಿಯಾಗಬೇಕು. ಇದರಿಂದ ಬ್ಯಾಂಕ್ನವರು ಪ್ರತಿ ಬಾರಿಯೂ ಅರ್ಜಿದಾರರಿಂದ ದಾಖಲೆ ಕೇಳುವುದನ್ನು ಹಾಗೂ ಅನಗತ್ಯವಾಗಿ ಅಲೆದಾಡಿಸುವುದನ್ನು ತಡೆಯಬಹುದಾಗಿದೆ.
ಜಿಪಿಎಸ್ ತಂತ್ರಾಂಶದ ಬದಲು, ವಿಪಿಎಸ್ ತಂತ್ರಾಂಶವನ್ನು ಮೊಬೈಲ್ನಲ್ಲಿ ಅಳವಡಿಸಿಕೊಂಡರೆ, ಆ ಭಾಗದಲ್ಲಿರುವ ಕೈಗಾರಿಕೆಗಳ ಮಾಹಿತಿ ಬ್ಯಾಂಕ್ ಅಧಿಕಾರಿಗಳಿಗೆ ಅಂಗೈಯಲ್ಲಿಯೇ ಲಭ್ಯವಾಗಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಕಾಸಿಯಾ ಹಾಗೂ ಬ್ಯಾಂಕ್ಗಳು ಕಾರ್ಯಪ್ರವೃತ್ತವಾಗಬೇಕಾಗಿವೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಸಿಯಾ ಅಧ್ಯಕ್ಷ ಬಸವರಾಜ ಎಸ್. ಜವಳಿ ಮಾತನಾಡಿ, 1983ರಲ್ಲಿ ಕೈಗಾರಿಕಾ ನೀತಿ ಜಾರಿಗೆ ಬಂದ ಸಂದರ್ಭದಲ್ಲಿ ಭೂಮಿಯನ್ನು ಕಡಿಮೆ ದರದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಪಡೆದು, ಭೂಮಿಯ ದರ ಹೆಚ್ಚಾದಾಗ ಬೇರೆಯವರಿಗೆ ಮಾರಾಟ ಮಾಡುತ್ತಾರೆಂಬ ಉದ್ದೇಶದಿಂದ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ಖರೀದಿಸುವುದಕ್ಕೆ ಹಾಗೂ ಭೂಪರಿವರ್ತನೆಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ. ಆದರೆ, ಸಣ್ಣ ಉದ್ಯಮಿಗಳಿಗೆ ಈ ನಿರ್ಬಂಧಗಳಿಲ್ಲ. ಸುಮಾರು ಎರಡು ಎಕರೆಯ ವರೆಗೆ ಭೂಮಿ ಪರಿವರ್ತನೆ ಮಾಡಿಕೊಳ್ಳಲು ಅವಕಾಶಗಳಿವೆ ಎಂದರು.
ಇಂದು ಕೇಂದ್ರ ಸರ್ಕಾರ ಡಿಜಿಟಿಯಲ್ ಇಂಡಿಯಾ ಎಂಬುದಾಗಿ ಹೇಳಿಕೊಳ್ಳುತ್ತಿದೆ. ನಾವು ಈ ಹಿಂದೆಯೇ ಕೈಗಾರಿಕಾ ಉದ್ದೇಶಕ್ಕಾಗಿ ದೇಶಾದ್ಯಂತ ಆ್ಯಪ್ ಒಂದನ್ನು ಅಭಿವೃದ್ಧಿ ಪಡೆಸುವಂತೆ ಮನವಿ ಮಾಡಿದ್ದೇವು. ಆದರೆ, ಸರ್ಕಾರ ನಮ್ಮ ಬೇಡಿಕೆಯನ್ನು ಮಾನ್ಯ ಮಾಡಲಿಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಎಸ್ಎಫ್ಸಿ ಅಪರ ನಿರ್ದೇಶಕ ಹಾಗೂ ಸದಸ್ಯ ಕಾರ್ಯದರ್ಶಿ ಹೆಚ್.ಎಂ.ಶ್ರೀನಿವಾಸ್, ಪ್ರತಿ ಐದು ವರ್ಷಗಳಿಗೊಮ್ಮೆ ಕೈಗಾರಿಕಾ ನೀತಿಗಳು ಬದಲಾಗುತ್ತಿರುತ್ತವೆ. 2019ರಿಂದ 2024ರ ವರೆಗೆ ಹೊಸ ಕೈಗಾರಿಕಾ ನೀತಿಯನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.
ಕೈಗಾರಿಕಾ ನೀತಿಗಳನ್ನು ರೂಪಿಸುವ ಹಾಗೂ ಆ ನೀತಿಯನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಭಾರತದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. 2014-19ರ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ 36 ಅಂಶ(ನೀತಿ)ಗಳನ್ನು ನಿಗದಿಪಡಿಸಲಾಗಿತ್ತು. ಮುಂದಿನ ಐದು ವರ್ಷಗಳ ಹೊಸ ಕೈಗಾರಿಕಾ ನೀತಿಯಲ್ಲಿ ಈ 36 ಅಂಶಗಳ ಜೊತೆಗೆ ಇನ್ನಷ್ಟು ನೀತಿಗಳನ್ನು ಸೇರಿಸಲಾಗುವುದು ಎಂದರು.
25 ಲಕ್ಷ ರೂ. ವರೆಗೆ ಬಂಡವಾಳ ಹೂಡುವವರನ್ನು ಅತಿ ಸಣ್ಣ ಕೈಗಾರಿಕೆ, 5 ಕೋಟಿ ರೂ. ವರೆಗೆ ಬಂಡವಾಳ ಹೊಡಿರುವುದಕ್ಕೆ ಸಣ್ಣ, 10 ಕೋಟಿ ರೂ.ಗಳ ವರೆಗೆ ಬಂಡವಾಳ ವಿನಿಯೋಗಿಸಿರುವ ಘಟಕಗಳಿಗೆ ಮಧ್ಯಮ ಹಾಗೂ 250 ಕೋಟಿ ರೂ. ಬಂಡವಾಳ ಹೂಡಿರುವ ಘಟಕಗಳಿಗೆ ಬೃಹತ್ ಕೈಗಾರಿಕೆಗಳನ್ನಾಗಿ ವರ್ಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿರೆ, ವಿದ್ಯುತ್ ದರ ಹೆಚ್ಚಿದೆ ಹಾಗೂ ಕನಿಷ್ಠ ಕೂಲಿಯೂ ಸ್ವಲ್ಪ ಹೆಚ್ಚಾಗಿಯೇ ಇದೆ. ಆದ್ದರಿಂದ ಬಂಡವಾಳ ಹೂಡಿಕೆದಾರರು ಬೇರೆ ರಾಜ್ಯಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಆಸಕ್ತಿ ತೊರುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರವು ಕೈಗಾರಿಕಾ ಉದ್ದೇಶಕ್ಕೆ ಬಳಸುವ ವಿದ್ಯುತ್ಗೆ ಪ್ರತ್ಯೇಕ ದರ ನಿಗದಿ ಮಾಡಬೇಕು. ಬಫರ್ ಜೋನ್ ಅಭಿವೃದ್ಧಿ ಪಡಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಸಫಾರೆ ಶ್ರೀನಿವಾಸ್, ದಾವಣಗೆರೆ ಟೆಕ್ಸ್ಟೈಲ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವೈ.ವೃಷಬೇಂದ್ರಪ್ಪ, ಸುರೇಶ್ ಎನ್. ಸಾಗರ್, ಎಸ್.ವಿಶ್ವೇಶ್ವರಯ್ಯ, ಶೇಷಾಚಲ ದುಗ್ಗಾವತ್ತಿ ಮತ್ತಿತರರು ಹಾಜರಿದ್ದರು.