ನೂತನ ಈಶ್ವರ ದೇವಸ್ಥಾನದ ಉದ್ಘಾಟನೆ

ಹರಪನಹಳ್ಳಿ:

        ನಾಡಿನ ದೇವಾಲಯಗಳು ಶಾಂತಿ ಸಾಮರಸ್ಯ ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ದೇವರಿಗೆ ಅನೇಕ ಹೆಸರುಗಳಿದ್ದರೂ ಶಕ್ತಿ ಮೂಲ ಒಂದೇಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

         ತಾಲೂಕಿನ ಶಿಂಗ್ರಿಹಳ್ಳಿಯಲ್ಲಿ ಭಾನುವಾರ ನೂತನ ಈಶ್ವರ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ, ಸಾಮೂಹಿಕ ವಿವಾಹ, ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

          ಧರ್ಮ ಭೂಮಿ ಎನಿಸಿದ ಭಾರತದಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದು ಬಂದಿವೆ. ಸತ್ಯ ಸಂಸ್ಕೃತಿ ಮತ್ತು ಆದರ್ಶಗಳನ್ನು ಎತ್ತಿ ಹಿಡಿಯಲು ಈ ನಾಡಿನ ಮಠ ಮಂದಿರಗಳು ಕಾರ್ಯ ಮಾಡುತ್ತಾ ಬಂದಿವೆ. ದೇವಾಲಯಗಳ ಮೇಲಿರುವ ನಂಬಿಗೆ ದೇವರಲ್ಲಿಟ್ಟಿರುವ ಶೃದ್ಧೆ ಅಪಾರ. ಆಧುನಿಕತೆಯ ಹೆಸರಿನಲ್ಲಿ ಜನರ ಭಾವನೆಗಳನ್ನು ಕಲುಷಿತಗೊಳಿಸಬಾರದು ಎಂದು ಹೇಳಿದರು.
ವೀರಶೈವ ಧರ್ಮದ ಪಂಚಪೀಠಗಳು ಧರ್ಮ ಸಮನ್ವಯತೆಯ ಸಂದೇಶ ಸಾರುತ್ತಾ ಬಂದಿವೆ. ದೇವಾಲಯ ನಿರ್ಮಿಸುವುದರ ಜೊತೆಗೆ ಸಾಮೂಹಿಕ ವಿವಾಹ ಹಮ್ಮಿಕೊಂಡಿರುವುದು ದೂರದೃಷ್ಟಿ ಮತ್ತು ಸಾಮಾಜಿಕ ಚಿಂತನೆಗೆ ಸಾಕ್ಷಿಯಾಗಿದೆ. ಸತಿ-ಪತಿಗಳು ಪರಸ್ಪರ ನಂಬಿಗೆ ವಿಶ್ವಾಸದಿಂದ ಆದರ್ಶ ಬದುಕು ಕಟ್ಟಿಕೊಳ್ಳಬೇಕು ಎಂದರು.

         ಮನುಷ್ಯನಿಗೆ ಧರ್ಮ ಅವಶ್ಯವಾಗಿದೆ. ಹರಿಯುವ ನೀರಿಗೆ, ಬೀಸುವ ಗಾಳಿಗೆ, ಭೂಮಿ ತಾಯಿಗೆ ಒಂದು ಧರ್ಮವಿದೆ. ಧರ್ಮದಿಂದ ವಿಮುಖರಾದರೆ ಬದುಕಿ ಬಾಳಲು ಸಾಧ್ಯವಾಗುವುದಿಲ್ಲ. ಧರ್ಮದ ಪರಿಪಾಲನೆ ಮನುಷ್ಯನಿಗೆ ಅಗತ್ಯವಾಗಿದೆ. ಎಷ್ಟೊ ಜನರು ಧರ್ಮ ಎಂದರೇ ವೇದಿಕೆ ಮೇಲೆ ಮಾತನಾಡುವುದು ಎಂದು ತಿಳಿದಿದ್ದಾರೆ ಎಂದು ಹೇಳಿದರು.

          ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳು. ದೇಹಕ್ಕಿಂತ ದೇವಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರು ಭಾರತೀಯರು. ದೇವರು ಎಲ್ಲೆಡೆ ತುಂಬಿದ್ದರೂ ನಾವು ಗುರುತಿಸಲು ಅಸಮರ್ಥರಾಗುತ್ತಿದ್ದೇವೆ. ದೇವರಲ್ಲಿರುವ ತಾಳ್ಮೆ ಸಹನೆ ಗುಣ ಮನುಷ್ಯರಲ್ಲಿ ಬೆಳೆದು ಬರುವ ಅಗತ್ಯವಿದೆ ಎಂದರು.

           ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ನೂತನಾವಾಗಿ ನಿರ್ಮಿಸಲಾಗಿರುವ ಈಶ್ವರ ದೇವಸ್ಥಾನ ಗ್ರಾಮದ ಶೃದ್ಧಾ-ಭಕ್ತಿಗೆ ಸಾಕ್ಷಿಯಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವ ದಂಪತಿಗಳು ಒಬ್ಬರನ್ನೊಬ್ಬರು ಅರಿತು ಬಾಳಬೇಕು. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪಂಚಪೀಠಗಳು ಸದಾ ಶ್ರಮಿಸುತ್ತಿವೆ ಎಂದರು. 

           ಗ್ರಾಮದಲ್ಲಿ ಆರು ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪನೆ ಮಾಡಿದರು. ದೇವಾಲಯ ಸಮಿತಿ ಅಧ್ಯಕ್ಷ ಜಯಪ್ರಕಾಶ ದಂಪತಿಗೆ ಹಾಗೂ ಗೌರಜ್ಜನವರ ಮಠದ ಕೊಟ್ರಯ್ಯ ಅವರಿಗೆ ಉಭಯ ಜಗದ್ಗುರುಗಳು ಪ್ರಶಸ್ತಿ ವಿತರಿಸಿದರು. ನುಗ್ಗೇಹಳ್ಳಿ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.

            ಈಶ್ವರ ಮೂರ್ತಿಯೊಂದಿಗೆ ನಂದೀಶ್ವರ, ಗಣಪತಿ, ನವಗ್ರಹ ಮೂರ್ತಿಗಳು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲ್ಪಟ್ಟವು. ಹಂಪಸಾಗರದ ಅಭಿನವ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ನೀಲಗುಂದ ವಿರಕ್ತಮಠದ ಚನ್ನಬಸವ ಸ್ವಾಮಿಗಳು, ದುಗ್ಗಾವತಿ ವೀರಭದ್ರ ಸ್ವಾಮಿಗಳು ಮಾತನಾಡಿದರು.

           ಎಲ್.ಎಂ.ಆರ್. ಬಸವರಾಜಯ್ಯ, ಚಿರಸ್ತಹಳ್ಳಿ ಮಲ್ಲಕಾರ್ಜುನಸ್ವಾಮಿ ಕಲ್ಮಠ, ರಮೇಶ್, ತಾಪಂ ಸದಸ್ಯರು, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link