ನಿಧಿಗಳ್ಳರಿಂದ ನಿಡಗಲ್ಲು ದುರ್ಗದ ಅಪರೂಪದ ಐತಿಹಾಸಿಕ ವಿಗ್ರಹ ನಾಶ

ಪಾವಗಡ

   ಐತಿಹಾಸಿಕ ನಿಡಗಲ್ಲು ದುರ್ಗದಲ್ಲಿದ್ದ ಅಪರೂಪದ ಕಾಲಭೈರವೇಶ್ವರ ವಿಗ್ರಹವನ್ನು ದುಷ್ಕರ್ಮಿಗಳು ಇತ್ತೀಚೆಗೆ ಒಡೆದು ಹಾಕಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

     ಇಡೀ ನಿಡಗಲ್ಲು ಸಂಸ್ಥಾನದಲ್ಲೇ ಅತ್ಯಂತ ಸುಂದರವಾಗಿದ್ದ ಮತ್ತು ಶಿಲ್ಪಿಯ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದ್ದ ಕಾಲಭೈರವೇಶ್ವರ ವಿಗ್ರಹವನ್ನು ಅಮಾವಾಸ್ಯೆಯ ದಿನ ನಿಧಿಗಳ್ಳರು ಒಡೆದು ಹಾಕಿರಬಹುದಾಗಿ ಅನುಮಾನಿಸಲಾಗಿದೆ.

      ಏಳು ಸುತ್ತಿನ ಕೋಟೆಯಲ್ಲಿನ ಭೈರವನ ಕೋಟೆ ಬಾಗಿಲಿನಲ್ಲಿದ್ದ ಭೈರವನ ಗುಡಿಯಲ್ಲಿ ಈ ವಿಗ್ರಹ ಇತ್ತು. ಹಲವು ವರ್ಷಗಳ ಹಿಂದೆ ಕೆಲವರು ಈ ವಿಗ್ರಹವನ್ನು ರಾತ್ರೋರಾತ್ರಿ ವಾಹನದಲ್ಲಿ ಮತ್ತೊಂದು ಊರಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಗ್ರಾಮಸ್ಥರು ತಡೆದು ಅವರನ್ನು ಓಡಿಸಿದ್ದರು. ನಂತರ ಆ ವಿಗ್ರಹವನ್ನು ಮೊದಲ ಕೋಟೆ ಬಾಗಿಲು ಮುಂದಿರುವ ಕೃಷ್ಣಪ್ಪನ ಮಠದ ಮಂಟಪದಲ್ಲಿ ಇಡಲಾಗಿತ್ತು. ಅದು ನಿರ್ಜನ ಪ್ರದೇಶವಾದ್ದರಿಂದ ಈ ಘಟನೆ ಸಂಭವಿಸಿದೆ.

      ನಿಡಗಲ್ಲು ದುರ್ಗ ಆನೇಕ ರಾಜವಂಶಗಳ ರಾಜಧಾನಿಯಾಗಿದ್ದ ಸ್ಥಳ. 25 ಸಾವಿರಕ್ಕೂ ಹೆಚ್ಚು ಮನೆಗಳಿದ್ದ ಪಟ್ಟಣವಾಗಿತ್ತು. ಇಂದಿಗೂ ಅಸಂಖ್ಯಾತ ಐತಿಹಾಸಿಕ ಪಳಯುಳಿಕೆಗಳು, ಸ್ಮಾರಕಗಳು, ವೀರಗಲ್ಲುಗಳು, ಕೋಟೆ ಕೊತ್ತಲುಗಳು, ಗುಡಿಗೋಪುರಗಳು ಕಂಡುಬರುತ್ತವೆ. ಹಾಗಾಗಿ ಇಲ್ಲಿ ನಿಧಿ ಸಿಗಬಹುದು ಎಂಬ ಆಸೆಯಿಂದ ನಿಧಿಗಳ್ಳರ ಹಾವಳಿ ನಿರಂತರವಾಗಿದೆ.

      ಹಲವಾರು ಬಾರಿ ಗ್ರಾಮಸ್ಥರು ನಿಧಿಗಳ್ಳರನ್ನು ಹಿಡಿದು ಥಳಿಸಿ ಓಡಿಸಿರುವ, ಪೋಲೀಸ್ ಇಲಾಖೆಗೆ ಒಪ್ಪಿಸಿರುವ ಉದಾಹರಣೆಗಳೂ ಇವೆ. ಆದಾಗ್ಯೂ ಸ್ಮಾರಕಗಳ ನಾಶದ ಕಾರ್ಯ ನಿಂತಿಲ್ಲ. ರಾತ್ರಿ-ಹಗಲು ನಿಗಾ ಇಟ್ಟಿದ್ದರೂ ಕಣ್ಣು ತಪ್ಪಿಸಿ ಇಂತಹ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಇಲ್ಲಿಗೆ ನಿಧಿಗಾಗಿ ಬರುತ್ತಾರೆ. ಗ್ರಾಮಸ್ಥರಿಂದ ಎಷ್ಟೇ ಪ್ರಯತ್ನ ಪಟ್ಟರು ತಡೆಯಲಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link