ತುಮಕೂರು
ಕೆಲವೇ ಭಾಗಗಳಲ್ಲಿ ಸೀಮಿತವಾಗಿದ್ದ ರಸ್ತೆ ಬದಿಯ ತಿಂಡಿ ಗಾಡಿಗಳು ಈಗ ಎಲ್ಲೆಂದರಲ್ಲಿ ತಲೆಎತ್ತಿವೆ. ಹಸಿದವರ ಹೊಟ್ಟೆ ತುಂಬಿಸಲು ನಾ ರೆಡಿ ಎನ್ನುವಂತೆ ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಸ್ಮಾರ್ಟ್‍ಸಿಟಿಯಾಗುತ್ತಿರುವ ತುಮಕೂರು ನಗರವನ್ನು ಒಮ್ಮೆ ಸುತ್ತಾಡಿಕೊಂಡು ಬಂದರೆ ಹೋಟೆಲ್‍ಗಳಿಗಿಂತ ಬೀದಿಬದಿ ತಿಂಡಿ ವ್ಯವಹಾರವೇ ಹೆಚ್ಚು ಕಂಡುಬರುತ್ತದೆ.
ಒಂದು ಕಡೆ ಹೆಚ್ಚುತ್ತಿರುವ ಬೇಸಿಗೆ ತಾಪ, ಮತ್ತೊಂದು ಕಡೆ ಧೂಳು, ಮಗದೊಂದು ಕಡೆ ಅಲ್ಲಲ್ಲಿ ಅಗೆದು ಬಾಯ್ತೆರೆದುಕೊಂಡಿರುವ ರಸ್ತೆಗಳು. ಅದರ ಮಗ್ಗುಲಲ್ಲೇ ಆಹಾರದ ಗಾಡಿಗಳು, ತಿಂಡಿ ತಿನಿಸುಗಳು. ಧೂಳನ್ನೂ ಲೆಕ್ಕಿಸದೆ, ಮೇಲ್ಭಾಗ ಹಾಕಿರುವ ತೆಳು ಟಾರ್ಪಾಲ್ ಕೆಳಗೆ ನಿಂತು ತಿನ್ನುವವರಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಬಿಸಿಲಿನ ಝಳಕ್ಕೆ ಸೆಕೆಯ ನೀರು ಮೈಮೇಲೆ ಹರಿಯುತ್ತಿದ್ದರೂ ಲೆಕ್ಕಿಸದೆ ಗಾಬರಿಯಿಂದ ಗಬಗಬನೆ ತಿಂದು ಹೋಗುವವರು, ತಕ್ಷಣದ ಹಸಿವು ನೀಗಿಸಿಕೊಳ್ಳುವವರು, ಏನೋ ಒಂದಿಷ್ಟು ಹೊಟ್ಟೆಗೆ ಬಿದ್ದರೆ ಸಾಕು ಎನ್ನುವವರು ಇಲ್ಲೆಲ್ಲಾ ಹೇರಳವಾಗಿ ಸಿಗುತ್ತಾರೆ. ಇದು ತುಮಕೂರಿನ ಚಿತ್ರಣ ಮಾತ್ರವಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ, ತಾಲ್ಲೂಕುಗಳಲ್ಲಿ, ಪಟ್ಟಣಗಳಲ್ಲಿ ಎಲ್ಲೆಲ್ಲೂ ಕಂಡುಬರುವ ದೃಶ್ಯ.
ದಿನ ಕಳೆದಂತೆ ಬದುಕಿನ ಒತ್ತಡದಲ್ಲಿ ಸಿಲುಕಿ ಹೋಗುತ್ತಿರುವ ಬಹುಪಾಲು ಉದ್ಯೋಗಿಗಳಿಗೆ ರಸ್ತೆಬದಿಯ ಗಾಡಿಗಳಲ್ಲಿ ದೊರಕುವ ಆಹಾರವೇ ಆಸರೆ. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಅವಿವಾಹಿತರು ಸೇರಿದಂತೆ ಬಹಳಷ್ಟು ಮಂದಿ ಈ ಆಹಾರವನ್ನೇ ಅವಲಂಬಿಸಿದಂತಿದೆ. ಹೋಟೆಲ್‍ಗಳಲ್ಲಿ ದುಬಾರಿ ದರ ಎಂತಲೋ, ಅಲ್ಲಿಗಿಂತ ಇಲ್ಲಿ ರುಚಿ ಎಂತಲೋ… ಅಂತೂ ಒಂದಷ್ಟು ವರ್ಗದ ಜನರನ್ನು ರಸ್ತೆ ಬದಿಯ ಗಾಡಿಗಳು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಜನಸಂಖ್ಯೆ ಹೆಚ್ಚಿದಂತೆ, ಗ್ರಾಮೀಣ ಜನರ ವಲಸೆ ಹೆಚ್ಚಿ ನಗರಗಳು ವಿಸ್ತಾರವಾದಂತೆ, ಕಂಪನಿ -ಕಾರ್ಖಾನೆಗಳು ವೃದ್ಧಿಯಾದಂತೆ ಹೋಟೆಲ್‍ಗಳ ಸಂಖ್ಯೆಯೂ ವೃದ್ಧಿಯಾಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಆಹಾರ ಒದಗಿಸುವ ವ್ಯವಸ್ಥೆಗಳು ನಿರ್ಮಾಣವಾಗಬೇಕು. ಹೋಟೆಲ್‍ಗಳ ಸಂಖ್ಯೆ ಕಡಿಮೆ ಇರುವುದು, ಅಲ್ಲಿ ದರ ದುಬಾರಿ ಎಂದೆನ್ನಿಸುವುದು… ಇತ್ಯಾದಿ ಹಲವು ಕಾರಣಗಳಿಂದಾಗಿ ರಸ್ತೆ ಬದಿ ಆಹಾರ ಒದಗಿಸುವ ಗಾಡಿಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಜನರಿಗೂ ಅನಿವಾರ್ಯ ಎನ್ನುವಂತಾಗಿದೆ.
ಹಿಂದೆಲ್ಲಾ ತುಮಕೂರು ನಗರದಲ್ಲಿ ರಾತ್ರಿ ವೇಳೆಯಾಗಿ ಊಟ ಸಿಗಲಿಲ್ಲವೆಂದರೆ ಬಸ್ ನಿಲ್ದಾಣದ ನೈಟ್ ಕ್ಯಾಂಟೀನ್‍ಗಳು ಖಾತ್ರಿಯಾಗಿದ್ದವು. ರಾತ್ರಿ 12 ಗಂಟೆಯತನಕವೂ ಅಲ್ಲಿ ಉಪಹಾರ ಲಭ್ಯವಿರುತ್ತಿತ್ತು. ಕಾಲ ಕ್ರಮೇಣ ದಿನಗಳು ಉರುಳಿದಂತೆ ಇಂತಹ ಕ್ಯಾಂಟೀನ್‍ಗಳು ಇತರೆ ಪ್ರದೇಶಗಳಲ್ಲಿಯೂ ಆರಂಭವಾದವು. ಆದರೆ ತುಮಕೂರು ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯ ನಂತರ ಇಂತಹ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಲಾಯಿತು. ಇತ್ತೀಚಿನ ವರ್ಷಗಳಲ್ಲಿನ ಈ ನಿರ್ಬಂಧದಿಂದಾಗಿ ರಾತ್ರಿ 11ರ ನಂತರವೂ ಕಾರ್ಯನಿರ್ವಹಿಸುತ್ತಿದ್ದ ಈ ಕ್ಯಾಂಟೀನ್‍ಗಳು ಈಗ ಇಲ್ಲ. ನಿಗದಿತ ಕೆಲವು ಕಡೆಗಳಲ್ಲಿ ಇವುಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿವೆ. ರಾತ್ರಿ 10.30ರ ತನಕ ಈ ವಹಿವಾಟು ನಡೆಯುತ್ತಿದ್ದು, ಬಹಳಷ್ಟು ಜನ ಇವುಗಳನ್ನೇ ಅವಲಂಬಿಸಿದ್ದಾರೆ.
ಔದ್ಯೋಗಿಕ ವಲಯಗಳಲ್ಲಿ (ವಿಶೇಷವಾಗಿ ಕಾರ್ಮಿಕ ವರ್ಗ) ದುಡಿಯುವವರಿಗೆ ಹೋಟೆಲ್‍ಗಳಿಗಿಂತ ರಸ್ತೆ ಬದಿಯ ಆಹಾರ, ನೈಟ್ ಕ್ಯಾಂಟೀನ್‍ಗಳು ಹೆಚ್ಚು ಆಕರ್ಷಕ. ಚಹಾದಿಂದ ಹಿಡಿದು ಬಿರಿಯಾನಿಯವರೆಗೆ ಎಲ್ಲವೂ ಸಿಗುವಾಗ, ರುಚಿಯೂ ಇರುವಾಗ ದೊಡ್ಡ ದೊಡ್ಡ ಹೋಟೆಲ್‍ಗಳು ಏಕೆ ಬೇಕು?
ಕಾರ್ಮಿಕರು, ಉದ್ಯೋಗಿಗಳಷ್ಟೇ ಅಲ್ಲ, ಕುಟುಂಬ ಸಮೇತ ಅಲ್ಲಿಗೆ ತೆರಳಿ ತಿಂಡಿ ಸೇವಿಸಿ ಬರುವ ಕುಟುಂಬಸ್ಥರ ಸಂಖ್ಯೆಯೂ ಸಾಕಷ್ಟಿದೆ. ಅಲ್ಲೆಲ್ಲ ನಿಂತು ತಿನ್ನುವ ಬದಲಿಗೆ ಪಾರ್ಸೆಲ್ ಕೊಂಡೊಯ್ಯುವವರ ಸಂಖ್ಯೆ ಅಧಿಕ. ಕಂಪನಿ, ಕಾರ್ಖಾನೆ, ಕಚೇರಿಗಳಲ್ಲಿ ಪಾಳೆಯ ಮೇಲೆ ಕರ್ತವ್ಯ ನಿರ್ವಹಿಸುವವ ಉದ್ಯೋಗಿಗಳು ಸಾಮಾನ್ಯವಾಗಿ ಇವುಗಳನ್ನೇ ಅವಲಂಬಿಸಿರುತ್ತಾರೆ. ತಾವು ಕೆಲಸ ಮಾಡುವ ಉದ್ಯೋಗ ಸ್ಥಳದ ಸಮೀಪದಲ್ಲಿ ಅಥವಾ ಎಲ್ಲೆಲ್ಲಿ ಇಂತಹ ಊಟ, ತಿಂಡಿ ಸಿಗುತ್ತದೆಂಬುದು ಉದ್ಯೋಗಿಗಳಿಗೆ ಗೊತ್ತು.
ಇವರಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಿಂದ ಕೆಲಸ ಕಾರ್ಯಗಳಿಗಾಗಿ ನಗರಗಳಿಗೆ ಬರುವ ರೈತಾಪಿ ವರ್ಗ, ಕೂಲಿ ಕಾರ್ಮಿಕರು ಸಾಮಾನ್ಯವಾಗಿ ಇಂತಹ ಆಹಾರದ ಮೊರೆ ಹೋಗುತ್ತಾರೆ. ಬೆಳಗಿನ ತಿಂಡಿಯಿಂದ ಹಿಡಿದು ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲವೂ ಈಗ ರಸ್ತೆ ಬದಿಗಳಲ್ಲೇ ಸಿಗುತ್ತಿದೆ.
ಬೀದಿಬದಿಯ ಗಾಡಿಗಳು ಹೋಟೆಲ್‍ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಇಲ್ಲಿನ ದರವು ಕೊಂಚ ಕಡಿಮೆ ಇರುತ್ತದೆ. ಇವರ್ಯಾರೂ ಸಾವಿರಾರು ರೂ.ಗಳ ಬಾಡಿಗೆ ಕಟ್ಟಬೇಕಾಗಿಲ್ಲ. ತೆರಿಗೆ, ವಿದ್ಯುತ್ ಬಿಲ್, ನೌಕರರಿಗೆ ಸಂಬಳ ಇತ್ಯಾದಿಗಳ ಸಮಸ್ಯೆ ಇಲ್ಲ. ದೊಡ್ಡ ದೊಡ್ಡ ಹೋಟೆಲ್‍ಗಳನ್ನು ಮಾಡಿಕೊಂಡು ಎದುರಿಸುತ್ತಿರುವ ಕಷ್ಟಕಾರ್ಪಣ್ಯಗಳು ಇವರಲಿಲ್ಲ, ನಷ್ಟದ ಆತಂಕವೂ ಇಲ್ಲ. ಸಣ್ಣ ಮೊತ್ತದಲ್ಲೇ ವ್ಯವಹಾರ ಆರಂಭಿಸಿ ಲಾಭ ಮಾಡಿಕೊಳ್ಳುವ ವ್ಯವಹಾರ ಇವರದ್ದು. ಅದೆಷ್ಟೋ ನಿರುದ್ಯೋಗಿಗಳು ತಮ್ಮ ಬದುಕು ಕಟ್ಟಿಕೊಳ್ಳಲು ಈ ವ್ಯವಹಾರ ಸಹಕಾರಿಯೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಹುಪಾಲು ಜನರಿಗೆ ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ, ಒಂದಷ್ಟು ಮಂದಿ ಸ್ವಯಂ ಉದ್ಯೋಗದ ಬದುಕು ಕಟ್ಟಿಕೊಂಡಿದ್ದಾರೆ ಇವೆಲ್ಲವೂ ಸ್ವಾಗತಾರ್ಹ.
ಎಲ್ಲಿಯೂ ಉದ್ಯೋಗ ಸಿಗದವರು, ಹೆಚ್ಚು ಓದದವರು, ಈಗಾಗಲೇ ಹೋಟೆಲ್‍ಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿ ಅನುಭವ ಇರುವವರು ಹೀಗೆ ಅನೇಕರಿಗೆ ಈ ಉದ್ಯಮ ಮಾರ್ಗ ತೋರಿಸಿಕೊಟ್ಟಿದೆ. ಹಲವರ ಬದುಕಿಗೆ ಇದು ದಾರಿದೀಪವಾಗಿದೆ. ಆದರೆ ಅವರಿಗಷ್ಟೇ ಅನುಕೂಲವಾದರೆ ಸಾಕೆ? ಶುಚಿತ್ವ ಮತ್ತಿತರ ಅಂಶಗಳ ಕಡೆಗೆ ಗಮನ ಹರಿಸಬೇಕಲ್ಲವೆ? ಇವರ್ಯಾರೂ ಕೌಶಲ್ಯಭರಿತ, ಅನುಭವಿ ವೃತ್ತಿಪರತೆ ಹೊಂದಿದವರಲ್ಲ. ಆ ಕ್ಷಣಕ್ಕೆ ಬದುಕಿನ ಮಾರ್ಗ ಕಂಡುಕೊಳ್ಳಲು ಒಂದೊಂದು ಗಾಡಿ ಹೊಂಚಿಕೊಂಡವರು. ಇವರಲ್ಲಿ ಅದೆಷ್ಟೋ ಮಂದಿ ಕುಟುಂಬದ ಯಜಮಾನ ಮರಣಿಸಿದ ಮಹಿಳೆಯರೂ ಸೇರಿದ್ದಾರೆ. ಇವರೆಲ್ಲರ ಮುಖ್ಯ ಗುರಿ ಜೀವನ ಸಾಗಿಸುವುದು. ಆ ಮೂಲಕ ಸಂಪಾದನೆ.
ಆಹಾರ ತಯಾರಿಸಿ ಗ್ರಾಹಕರಿಗೆ ನೀಡಲು ಎಷ್ಟು ಬೇಕೋ ಆ ಎಲ್ಲ ಸಿದ್ಧತೆಗಳನ್ನೂ ಇವರು ಮಾಡಿಕೊಳ್ಳುತ್ತಾರೆ. ರುಚಿ ರುಚಿಯಾದ ತಿಂಡಿ, ಪದಾರ್ಥಗಳನ್ನು ನೀಡುತ್ತಾರೆ. ಅವರಿಗೆ ಅಷ್ಟು ಮಾತ್ರ ಗೊತ್ತು. ಆದರೆ ಆ ತಿಂಡಿಗೆ ಬಳಸುವ ಪೂರಕ ವಸ್ತುಗಳು ಎಷ್ಟು ಸೇಫ್ ಎಂಬ ಬಗ್ಗೆ ಅವರಿಗೇನು ಗೊತ್ತು? ಯಾವುದು ಹಾನಿಕಾರಕ, ಹಾನಿಕಾರಕವಲ್ಲದ ಉತ್ಪನ್ನ ಯಾವುದು… ಈ ಯಾವ ವಿಷಯಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಲಾರರು. ಕಡಿಮೆ ದರಕ್ಕೆ ಯಾವುದು ಸಿಗುವುದೋ ಅದನ್ನೆಲ್ಲ ತರುತ್ತಾರೆ. ಅಡುಗೆ ರುಚಿಯಾಗಿರಲು ಯಾವುದು ಬೇಕೋ ಅದನ್ನು ಬಳಸುತ್ತಾರೆ. ಹೊಟ್ಟೆ ತುಂಬಿಸಿಕೊಳ್ಳಲು ಇವರು ತಿನ್ನುತ್ತಾರೆ.
ಮುಂದುವರೆಯುವುದು……………
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ