ಜಗಳೂರು
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ, ಕಾರ್ಮಿಕ ಕಾನೂನು ತಿದ್ದುಪಡಿ, ಮೋಟಾರ್ ವಾಹನ ತಿದ್ದುಪಡಿ ಮಸೂದೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ದ ವಿವಿಧ ಸಂಘಟನೆಗಳು ಕರೇ ನೀಡಿದ್ದ ಭಾರತ್ ಬಂದ್ ಮಂಗಳವಾರ ಜಗಳೂರಿನಲ್ಲಿ ನೀರಸವಾಗಿತ್ತು.
ಬೆಳಿಗ್ಗೆ ಅಲ್ಪ ಪ್ರಮಾಣದಲ್ಲಿದ್ದ ಖಾಸಗಿ ಬಸ್‍ಗಳು ಸಂಚಾರ ಮಾಡಿದವು. ಎಮದಿನಂತೆ ಅಂಗಡಿ ಮಗ್ಗಟ್ಟುಗಳು ತೆರೆದಿದ್ದವು. ಆಟೋಗಳ ಸಂಚಾರ ಎಂದಿನಂತಿತ್ತು. ಪಟ್ಟಣದಲ್ಲಿ ಭ್ಯಾಂಕಗಳು ಮಾತ್ರ ಮುಚ್ಚಿದ್ದವು. ಹಲವು ಸರ್ಕಾರಿ ಕಚೇರಿಗಳು ಎಂದಿನಂತೆ ತೆರದಿದ್ದಿದು ಕಂಡು ಬಂದಿತು. ಭಾರತ್ ಬಂದ್ ಇದೆ ಎಂದು ತಿಳಿದಿದ್ದ ಸಾರ್ವಜನಿಕರು ಪಟ್ಟಣಕ್ಕೆ ಬಾರದಿದ್ದರಿಂದ ಜನರ ಓಡಾಟ ಕಡಿಮೆ ಇತ್ತು. ಬಂದ್ ನಿಂದ ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿತ್ತು.
ಪಟ್ಟಣದ ಪ್ರವಾಸಿ ಮಂದಿರದಿಂದ ಎಐಟಿಯುಸಿ, ಐಎನ್‍ಟಿಯುಸಿ, ಎಐಯುಟಿಯುಸಿ, ಸಿಐಟಿಯು ಹಾಗೂ ಎಸ್‍ಎಫ್‍ಐ, ಎಐಎಸ್‍ಎಫ್ ನೇತೃತ್ವದಲ್ಲಿ ಹೊರಟ ಪ್ರತಿಭಟನೆ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಶ್ರೀಧರ್‍ಮೂರ್ತಿಗೆ ಮನವಿ ಸಲ್ಲಿಸಿದರು.
ಈ ವೇಳೆ ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ ಕೃಷಿ ಮಾಡಿ ಬದುಕಲಾಗದೆ ಒಂದು ದಿನಕ್ಕೆ 48 ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕೃಷಿ ಬಿಕ್ಕಟ್ಟಿನ ರಕ್ಷಣೆಗಾಗಿ ಕೃಷಿ ನೀತಿ ಬದಲಾಗಬೇಕು. ಕಂಪನಿಗಳ ಸಾಲ ಮನ್ನಾ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ರೈತರ ಸಾಲ ಮನ್ನಾ ಮಾಡಲು ಏನು ಕಷ್ಟ. ಡಾ|| ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪಾದನಾ ವೆಚ್ಚದ ಮೇಲೆ ಶೇ. 50% ಸೇರಿಸಿ ಬೆಲೆ ನಿಗಧಿ ಮಾಡಲು ಕಾನೂನು ಜಾರಿ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದರು.
ಎಐಎಸ್‍ಎಫ್ ರಾಜ್ಯ ಉಪಾಧ್ಯಕ್ಷೆ ವೀಣಾ ಮಾತನಾಡಿ ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸಂಗ್ರಹವಾಗುತ್ತಿರುವ 49 ಸಾವಿರ ಕೋಟಿ ಹಣವನ್ನು ಸಾಮಾಜಿಕ ಸುರಕ್ಷತಾ ಕಾಯ್ದೆ ರೂಪಿಸುವ ಹೆಸರಿನಲ್ಲಿ ತನ್ನ ಕೈವಶಪಡಿಸಿಕೊಳ್ಳುವ ಹುನ್ನಾರವನ್ನು ನಡೆಸುತ್ತಿದೆ ಎಂದವರು ಆರೋಪಿಸಿದರು.
ಎಐಎಸ್‍ಎಫ್ ರಾಜ್ಯ ಕಾರ್ಯದರ್ಶಿ ಮಾದೀಹಳ್ಳಿ ಮಂಜುನಾಥ್ ಮಾತನಾಡಿ ದೇಶದ ಆರ್ಥಿಕ ಸಾರ್ವಭೌಮತೆಯ ರಕ್ಷಣೆ ಮಾಡುತ್ತಿರುವ ದೇಶೀಯ ಉತ್ಪಾದನಾ ಸಾಮಾಥ್ರ್ಯದಲ್ಲಿ ಹೆಗ್ಗಳಿಕೆ ಗಳಿಸಿರುವ ಸಾರ್ವಜನಿಕ ಕೈಗಾರಿಕೆಗಳಿಂದ 2017-18ನೇ ಸಾಲಿನಲ್ಲಿ 1.57 ಕೋಟಿ ರೂ.ಗಳ ಬಂಡವಾಳವನ್ನು ಹಿಂಪಡೆಯುವ ಮೂಲಕ ಖಾಸಗಿ ಕಂಪನಿಗಳಿಗೆ ಉತ್ಪಾದನೆಯನ್ನು ಹೊರಗುತ್ತಿಗೆ ಕೊಡುವ ಮುಖಾಂತರ ಖಾಸಗೀಕರಣ ಗೊಳಿಸಲಾಗುತ್ತಿದೆ ಎಂದವರು ದೂರಿದರು.
ಎಐಟಿಯುಸಿ ಅಧ್ಯಕ್ಷ ಮಹಮ್ಮದ್‍ಭಾಷಾ ಮಾತನಾಡಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 18 ಸಾವಿರ ರೂ. ಕನಿಷ್ಠ ವೇತನವನ್ನು ಇಎಸ್‍ಐ, ಪಿಎಫ್, ಗ್ರ್ಯಾಚ್ಯುಟಿ ಪಿಂಚಣಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕೂಡದೇ ಕೇಂದ್ರ ಸರ್ಕಾರ ಕೇವಲ 1500 ರೂ. ಕಾರ್ಯಕರ್ತೆಯರಿಗೆ 1300 ರೂ. ಮಿನಿ ಅಂಗನವಾಡಿಯರಿಗೆ ಮತ್ತು 750 ರೂ.ಗಳು ಸಹಾಯಕಿಯರಿಗೆ ಸಂಭಾವನೆ ಹೆಚ್ಚಿಸಿ ದುಡಿಯುವ ಮಹಿಳೆಯರಿಗೆ ವಂಚನೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ವಕೀಲ ಆರ್.ಓಬಳೇಶ್, ಎಸ್‍ಎಫ್‍ಐ ತಾಲೂಕು ಅಧ್ಯಕ್ಷ ಮೈಲೇಶ್, ಎಐಎಸ್‍ಎಫ್ ತಾಲೂಕು ಅಧ್ಯಕ್ಷ ಯುವರಾಜ್, ಸಿಐಟಿಯು ಪದಾಧಿಕಾರಿಗಳಾದ ರೇಣುಕಾರಾಧ್ಯ, ಡಿ.ಮಂಜುನಾಥ್, ವೀರಣ್ಣ, ರೇಣುಕರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.