ನಿರಾಶ್ರೀತರಿಗೆ ಪುಸ್ತಕ ವಿತರಣೆ

ಚಿತ್ರದುರ್ಗ:

     ಸರ್ಕಾರದಿಂದ ನೂರಾರು ಸೌಲಭ್ಯಗಳನ್ನು ಪಡೆಯಬಹುದು. ಆದರೆ ಸಿಕ್ಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದರಲ್ಲಿ ಮಹತ್ವ ಅಡಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ದಿಂಡಲಕೊಪ್ಪ ನಿರಾಶ್ರಿತರಿಗೆ ತಿಳಿಸಿದರು.

       ಗೋನೂರು ಸಮೀಪ ಮುತ್ತಯ್ಯನಹಟ್ಟಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಬುಧವಾರ ನಿರಾಶ್ರಿತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

      ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಸ್ವಚ್ಚತೆ ಗುಣಮಟ್ಟದ ಆಹಾರ ಸೇರಿದಂತೆ ಎಲ್ಲವೂ ವ್ಯವಸ್ಥಿತ ರೀತಿಯಲ್ಲಿ ನೀಡಲಾಗುತ್ತಿದೆ. ಇದಕ್ಕೆ ಇಲ್ಲಿನ ಅಧೀಕ್ಷಕ ಮಹದೇವಯ್ಯನವರು ನಿಮ್ಮ ಮೇಲೆ ಇಟ್ಟಿರುವ ಕಾಳಜಿ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

        ಪುಸ್ತಕ ಓದುವ ಹವ್ಯಾಸ ತುಂಬಾ ಒಳ್ಳೆಯದು. ನಿಮಗೆ ಪುಸ್ತಕ ಓದುವ ಆಸಕ್ತಿಯಿದ್ದರೆ ಓದಿ. ಇಲ್ಲವೇ ಬೆರೆಯವರು ಓದಿ ಎಲ್ಲರಿಗೂ ವಿಚಾರಗಳನ್ನು ತಿಳಿಸಬಹುದು. ಜ್ಞಾನಾರ್ಜನೆಯಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲಿನ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ ಎಂದು ನಿರಾಶ್ರಿತರಿಗೆ ಹೇಳಿದರು.

      ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡುತ್ತ ಗೋನೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ ಸವಲತ್ತು ನಿಜವಾಗಿಯೂ ಯಾವ ಅಧಿಕಾರಿಗಳಿಗೂ ಇಲ್ಲ ಎನ್ನುವುದು ಇಲ್ಲಿ ಬಂದು ನೋಡಿದಾಗ ತಿಳಿಯುತ್ತದೆ. ಸರ್ಕಾರ ಇಷ್ಟೊಂದು ಸೌಲಭ್ಯಗಳನ್ನು ನೀಡಿರುವುದು ನಿಮ್ಮ ಅದೃಷ್ಟ. ನಾನಾ ಕಾರಣಗಳಿಂದ ಕೆಲವರು ಇಲ್ಲಿ ಬಂದು ನಿರಾಶ್ರಿತರಂತೆ ಜೀವನ ಮಾಡುತ್ತಿರಬಹುದು. ಮನಸ್ಸಿನಲ್ಲಿರುವ ಕಲ್ಮಶವನ್ನು ತೆಗೆದು ಹಾಕಿ ಸಮಾಜದಲ್ಲಿ ಎಲ್ಲರಂತೆ ನೀವು ಗುರುತಿಸಿಕೊಂಡು ಜೀವನ ಮಾಡಿ ಎಂದರು.

       ಚಿತ್ರದುರ್ಗ ವಕೀಲರ ಸಂಘದ ಕಾರ್ಯದರ್ಶಿ ಅನಿಲ್‍ಕುಮಾರ್ ಮಾತನಾಡಿ ಪುಸ್ತಕ ಎಂದರೆ ಬಹುದೊಡ್ಡ ಸಂಪತ್ತು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದಷ್ಟು ಜ್ಞಾನ ವೃದ್ದಿಯಾಗುತ್ತದೆ. ನಾನಾ ವಿಚಾರಗಳನ್ನು ತಿಳಿದುಕೊಳ್ಳಬಹುದು. ನಿರಾಶ್ರಿತರೆಂಬುದನ್ನು ಮರೆತು ಇಲ್ಲಿಂದ ಹೊರಹೋಗಿ ಸಮಾಜಮುಖಿಯಾಗಿ ಬಾಳಿರಿ ಎಂದು ನಿರಾಶ್ರಿತರಿಗೆ ಹಾರೈಸಿದರು.

         ಯುವ ವಕೀಲ ಪ್ರತಾಪ್‍ಜೋಗಿ ಮಾತನಾಡುತ್ತ ಪುಸ್ತಕಗಳನ್ನು ಓದುವುದರಿಂದ ಮಾನಸಿಕವಾಗಿ ಸ್ಥೈರ್ಯ ಹೆಚ್ಚಿಸಿಕೊಂಡು ಮನಸ್ಸಿನ ನೋವನ್ನು ನಿವಾರಿಸಿಕೊಳ್ಳಬಹುದು. ಮಹಾನ್ ನಾಯಕರುಗಳ ಪುಸ್ತಕಗಳನ್ನು ಓದುವುದರಿಂದ ಅವರ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಹಾಗಾಗಿ ನಿರಾಶ್ರಿತರೆಂಬ ಕೊರಗನ್ನು ಮನಸ್ಸಿನಿಂದ ತೆಗೆದು ಹಾಕಿ ಎಂದು ನಿರಾಶ್ರಿತರಲ್ಲಿ ಮನವಿ ಮಾಡಿದರು.ಗೋನೂರು ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವಯ್ಯ, ಜೈಲು ಅಧೀಕ್ಷಕಿ ಅಪೇಕ್ಷ ಎಸ್. ಪವಾರ್ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link