ಹೊನ್ನಾಳಿ:
ಚುನಾವಣಾ ಪ್ರಕ್ರಿಯೆಯಲ್ಲಿ ಹತ್ತು ಹಲವಾರು ಅಂಶಗಳಲ್ಲಿ ಬಹು ಮುಖ್ಯವಾದದ್ದು ಮತ ಚಲಾಯಿಸುವುದು ಮತ್ತು ಮತದಾನ ಮಾಡಲು ಮತಗಟ್ಟೆ ಕೇಂದ್ರ ಸರ್ವ ರೀತಿಯಲ್ಲಿ ಸುಸ್ಥಿತಿಯಲ್ಲಿರಬೇಕಾದುದಾಗಿದೆ ಎಂದು ಸೆಕ್ಟರ್ ಅಧಿಕಾರಿ ಎಚ್. ಮಹೇಂದ್ರ ಅಭಿಪ್ರಾಯಪಟ್ಟರು.
ಗುರುವಾರ ಇಲ್ಲಿನ ದೇವನಾಯ್ಕನಹಳ್ಳಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ರ್ಯಾಂಪ್ ಮತ್ತು ಮತಗಟ್ಟೆ ಕೇಂದ್ರ ಪರಿಶೀಲಿಸಿದ ನಂತರ ಅವರು ಮಾತನಾಡಿದರು.ಮತಗಟ್ಟೆ ಕೇಂದ್ರಕ್ಕೆ ಮತದಾನ ಮಾಡಲು ದೈಹಿಕ ಆರೋಗ್ಯವಂತರು, ವಯೋವೃದ್ಧರು ಹಾಗೂ ವಿಶೇಷಚೇತನರು ಬರುವುದರಿಂದ ಎಲ್ಲಾ ಮತಗಟ್ಟೆ ಕೇಂದ್ರಗಳಿಗೂ ರ್ಯಾಂಪ್ ಅವಶ್ಯ ಎಂದು ಹೇಳಿದರು.
ಕಾಲಿಲ್ಲದ ವಿಶೇಷ ಚೇತನರು ವೀಲ್ಚೇರ್ನಲ್ಲಿ ಮತಗಟ್ಟೆ ಕೇಂದ್ರಕ್ಕೆ ಬರುವುದರಿಂದ ರ್ಯಾಂಪ್ ಇದ್ದರೆ ಮಾತ್ರ ಸುಲಲಿತವಾಗಿ ಮತಗಟ್ಟೆ ಕೇಂದ್ರದ ಕೊಠಡಿಯೊಳಗೆ ಹೋಗಲು ಸಾಧ್ಯ. ಈ ಕಾರಣದಿಂದ ಚುನಾವಣಾ ಆಯೋಗ ನಿರ್ದಿಷ್ಟ ಆದೇಶ ಹೊರಡಿಸಿ ಮತಗಟ್ಟೆ ಕೇಂದ್ರಗಳಲ್ಲಿ ರ್ಯಾಂಪ್ ಇರಲೇಬೇಕು. ರ್ಯಾಂಪ್ ಇಲ್ಲದ ಮತಗಟ್ಟೆ ಕೇಂದ್ರಗಳಲ್ಲಿ ತಕ್ಷಣ ರ್ಯಾಂಪ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದೆ ಎಂದು ತಿಳಿಸಿದರು.
ದೇವನಾಯ್ಕನಹಳ್ಳಿಯ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪಿ.ಎಸ್. ಸಂಖ್ಯೆ 103ರ ಮತಗಟ್ಟೆ ಕೇಂದ್ರದಲ್ಲಿ ರ್ಯಾಂಪ್ ಇಲ್ಲದ್ದನ್ನು ಗಮನಿಸಿ ಮುಖ್ಯ ಶಿಕ್ಷಕರ ಗಮನಕ್ಕೆ ತಂದು ರ್ಯಾಂಪ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ದೇವನಾಯ್ಕನಹಳ್ಳಿಯ ಮತ್ತೊಂದು ಮತಗಟ್ಟೆ ಕೇಂದ್ರವಾದ ಸರಕಾರಿ ಪ್ರೌಢಶಾಲೆಯ ಮತಗಟ್ಟೆ ಕೇಂದ್ರಕ್ಕೆ ದೂರದಲ್ಲಿ ರ್ಯಾಂಪ್ ಇದ್ದುದನ್ನು ಗಮನಿಸಿ ವಿಶೇಷ ಚೇತನರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಮತಗಟ್ಟೆ ಕೇಂದ್ರ ಕೊಠಡಿ ಎದುರೇ ರ್ಯಾಂಪ್ ರಚನೆಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/D29-HLRP2.gif)