ನಿರ್ಮಾಣಗೊಂಡ ನಾಲ್ಕು ವರ್ಷಕ್ಕೆ ಕುಸಿದು ಬಿದ್ದ ನೀರಿನ ಟ್ಯಾಂಕ್

ಶಿರಾ:

     ಇತ್ತೀಚೆಗೆ ಕಳಪೆ ಕಾಮಗಾರಿಗಳನ್ನು ಕೈಗೊಳ್ಳುವ ಗುತ್ತಿಗೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರದ ಅನುದಾನವನ್ನು ಅತಿ ಬೇಗ ಖರ್ಚು ಮಾಡಿ ಜೇಬು ತುಂಬಿಸಿಕೊಳ್ಳಲು ತವಕಿಸುವ ಗುತ್ತಿಗೆದಾರರಿಂದ ಎಂತಹ ಅನಾಹುತಗಳು ಹಾಗೂ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂಬುದಕ್ಕೆ ಕಳ್ಳಂಬೆಳ್ಳ ಹೋಬಳಿಯ ಜೋಡಿ ದೇವರಹಳ್ಳಿಯ ಓವರ್ ಹೆಡ್ ಟ್ಯಾಂಕ್ ಜ್ವಲಂತ ಸಾಕ್ಷಿಯಾಗಿದೆ.

      ಕಳ್ಳಂಬೆಳ್ಳ ಹೋಬಳಿಯ ಚಿನ್ನೇನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಜೋಡಿ ದೇವರಹಳ್ಳಿ ಗ್ರಾಮದಲ್ಲಿ ಕಳೆದ 2014ರಲ್ಲಿ ಲಕ್ಷಾಂತರ ರೂಗಳಲ್ಲಿ ಗ್ರಾಮದ ಕುಡಿಯುವ ನೀರಿನ ಬವಣೆ ನೀಗಿಸಲೆಂದು ಜಿ.ಪಂ. ಇಂಜಿನಿಯರಿಂಗ್ ವಿಭಾಗದಿಂದ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು.

     ಸದರಿ ಟ್ಯಾಂಕ್ ನಿರ್ಮಾಣ ಮಾಡುವಾಗ ಕಳಪೆ ಕಾಮಗಾರಿ ನಡೆಯುವುದನ್ನು ಕಂಡು ಗ್ರಾಮಸ್ಥರೇ ಮುಂದೆ ನಿಂತು ಕಳಪೆ ಕಾಮಗಾರಿ ಮಾಡಬೇಡಿ ಎಂದು ಇಂಜಿನಿಯರ್‍ಗೆ ತಾಕೀತು ಮಾಡಿದ್ದರು. ಇದನ್ನು ಲೆಕ್ಕಿಸದೆ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಸರಿಯಾಗಿ ಕ್ಯೂರಿಂಗ್ ಕೂಡ ಮಾಡದ ಪರಿಣಾಮ ಲಕ್ಷಾಂತರ ರೂಗಳ ಈ ನೀರಿನ ಟ್ಯಾಂಕ್ ನಿನ್ನೆಯಷ್ಟೇ ಏಕಾಏಕಿ ಕುಸಿದಿದೆ ಎನ್ನಲಾಗಿದೆ. ಕಟ್ಟಿದ ಕೇವಲ ನಾಲ್ಕು ವರ್ಷಕ್ಕೆ ಟ್ಯಾಂಕ್ ಕುಸಿದುಬಿದ್ದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

      ಈ ಸಂಬಂಧ ಇಲ್ಲಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲವಲ್ಲದೆ. ಜಿ.ಪಂ. ಇಂಜಿಯರಿಂಗ್ ವಿಭಾಗದ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಆರೋಪಿಸಲಾಗಿದೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಸದರಿ ನೀರಿನ ಟ್ಯಾಂಕ್ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು ಈ ಕೂಡಲೇ ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಅಧಿಕಾರಿಗಳು ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap