ಚಿತ್ರದುರ್ಗ
ಕಳೆದ 3-4 ತಿಂಗಳಿನಿಂದಲೂ ಕುಡಿಯುವ ನೀರಿಗೆ ಭೀಕರ ಸಮಸ್ಯೆ ಎದುರಾಗಿದ್ದರು ಲಾರಿ ಮತ್ತು ಟ್ಯಾಂಕರ್‍ಗಳಲ್ಲಿ ನೀರು ಮಾರಾಟ ಮಾಡಿ ಹಣ ಗಳಿಸುವ ದಂದೆ ಮಾಡಿಕೊಂಡಿರುವವರ ವಿರುದ್ಧ ಮದೇಹಳ್ಳಿ ಗ್ರಾಮಸ್ಥರು ಭಾನುವಾರ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪ ಟ್ಯಾಂಕರ್ ಮತ್ತು ಲಾರಿಗಳನ್ನು ತಡೆದು ಸುಮಾರು ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಮೆದೇಹಳ್ಳಿ ಹಾಗೂ ಮರುಳಪ್ಪ ಬಡಾವಣೆಯಲ್ಲಿ ಅಂರ್ತಜಲ ಬತ್ತಿಹೋಗಿದ್ದು, ಕುಡಿಯುವ ನೀರಿಗೆ ಪರದಾಟ ನಡೆಸುತ್ತಿದ್ದರು. ಟ್ಯಾಂಕರ್ ಮತ್ತು ಟ್ರಾಕ್ಟರ್‍ಗಳಲ್ಲಿ ಖಾಸಗಿ ಬೋರ್‍ವೆಲ್‍ಗಳಿಂದ ನೀರು ತುಂಬಿಕೊಂಡು ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಹಾಗೂ ಮೆದೇಹಳ್ಳಿ ಗ್ರಾಮ ಪಂಚಾಯಿತಿಗೆ ನೀರಿನ ಸಮಸ್ಯೆ ನಿವಾರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗದ ಕಾರಣ ಕುಪಿತಗೊಂಡ ಗ್ರಾಮಸ್ಥರು ರಸ್ತೆ ಮಧ್ಯೆದಲ್ಲಿ ಪ್ರತಿಭಟನೆ ನಡೆಸಿದಾಗ ಕೆಲವು ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಲಾರಿ ಟ್ಯಾಂಕರ್ 1ಕ್ಕೆ 700 ರೂ. ಹಾಗೂ ಟ್ರಾಕ್ಟರ್ 1ಕ್ಕೆ 450 ರಿಂದ 500 ರೂ.ಗಳನ್ನು ನಿಗಧಿಪಡಿಸಿ ಮನಸೋಇಚ್ಚೆ ದಿನಕ್ಕೆ ನೂರಾರು ಲೋಡ್ ನೀರು ಮಾರಾಟ ಮಾಡುತ್ತಿದ್ದರು ಯಾರು ಕೇಳದಂತಾಗಿದ್ದಾರೆ. ಜಿಲ್ಲಾಡಳಿತ ಇಲ್ಲವೇ ಜಿಲ್ಲಾ ಪಂಚಾಯತಿ ಇತ್ತ ಗಮನ ಹರಿಸಿ ಅಕ್ರಮವಾಗಿ ನೀರು ಮಾರಾಟ ದಂದೆಯಲ್ಲಿ ತೊಡಗಿರುವವರಿಗೆ ಕಡಿವಾಣ ಹಾಕುವಂತೆ ಮೆದೇಹಳ್ಳಿ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು ಬಗದ ಮೆದೇಹಳ್ಳಿ ಗ್ರಾಮಸ್ಥರು ಲಾರಿ ಟ್ಯಾಂಕರ್ ಮತ್ತು ಟ್ರಾಕ್ಟರ್ ಮಾಲೀಕರುಗಳನ್ನು ತರಾಟೆ ತೆಗೆದುಕೊಂಡು ವಾಹನಗಳು ಚಲಿಸದಂತೆ ಅಡ್ಡಿಪಡಿಸಿದರು.ಮೆದೇಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ 500 ರಿಂದ 1000 ಅಡಿ ಬೋರ್ ಕೊರೆಸಿದರು ನೀರು ಸಿಗುತ್ತಿಲ್ಲ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರು ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸುವಂತೆ ಪಟ್ಟು ಹಿಡಿದರು. ಆದರೆ ಭಾನುವಾರದ ರಜೆ ಇರುವ ಕಾರಣ ಯಾವ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ.