ಕುಣಿಗಲ್
ಕುಡಿಯುವ ನೀರು ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ಸಾರ್ವಜನಿಕರ ಟೀಕೆಗೆ ಗುರಿಯಾಗಬೆಕಾಗಿದೆ. ನೀರು ಪೂರೈಕೆ ಮಾಡುವ ಮೋಟಾರು ಪಂಪ್ಸೆಟ್ಗಳ ದುರಸ್ಥಿ ಸೇರಿದಂತೆ ಸೋರಿಕೆಯಾಗುತ್ತಿರುವ ಓವರ್ ಹೆಡ್ ಟ್ಯಾಂಕ್ಗಳ ರಿಪೇರಿ ಹಾಗೂ ಟ್ಯಾಂಕ್ ನಿರ್ಮಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಸದಸ್ಯರು ಆಗ್ರಹಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಹರೀಶ್ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ತಾ.ಪಂ. ಸದಸ್ಯರಾದ ದಿನೇಶ್ಕುಮಾರ್, ಬಲರಾಂ ಹಾಗೂ ಐ.ಎ.ವಿಶ್ವನಾಥ್ ಮತ್ತು ಕೆಂಪೇಗೌಡ ಇವರು ಕುಡಿಯುವ ನೀರು ಪೂರೈಕೆ ಮಾಡುವ ಸಂಬಂಧ ಕುಡಿಯುವ ನೀರು ಪೂರೈಕೆ ಮಾಡುವ ಎಇಇ ಅವರನ್ನ ಪ್ರಶ್ನಿಸಿದರು.
ಆದರೆ ಇವರ ಪರವಾಗಿ ಕಿರಿಯ ಇಂಜಿನಿಯರ್ ಆಗಮಿಸಿದ್ದು ಅವರ ಹೇಳಿಕೆಯಿಂದ ಬೇಸರ ಗೊಂಡ ಸದಸ್ಯರು ಕಿರಿಯ ಇಂಜಿನಿಯರ್ ಕಿರಣ್ ಎಂಬುವರನ್ನ ತರಾಟೆಗೆ ತೆಗೆದುಕೊಂಡು ನಾವು ಹೊಸ ಯೋಜನೆ ರೂಪಿಸಿ ಸರ್ಕಾರದಿಂದ ಅನುದಾನ ತರುವಂತೆ ಕೇಳುತ್ತಿಲ್ಲ. ಈಗಾಗಲೇ ಕೊಳವೆ ಬಾವಿ ಕೊರೆದು ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಕೆಟ್ಟು ಹೋದ ಮೋಟಾರು ಪಂಪ್ಸೆಟ್ ಹಾಗೂ ಇತರೆ ಸಮಸ್ಯಗಳನ್ನ ಶೀಘ್ರವಾಗಿ ಬಗೆಹರಿಸಿ ಜನರಿಗೆ ಕುಡಿಯುವ ನೀರು ಪೂರೈಸಿ ಎಂದು ಆಗ್ರಹಿಸಿದರು.
ಇದೇ ವಿಚಾರವಾಗಿ ಮುಂದುವರೆಸಿದ ಸದಸ್ಯರು ಎಡೆಯೂರು, ಅಮೃತೂರು, ಮಾರ್ಕೋನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ದೂರುಗಳಿದ್ದು ಸದರಿ ಪಂಪ್ಸೆಟ್ ಬದಲಾಯಿಸಿ ಸರಿಪಡಿಸುವಂತೆ ತಿಳಿಸಿದ್ದರೂ ಸಹ ಸಂಬಂಧಪಟ್ಟ ಇಂಜಿನಿಯರ್ ಮಾಡದ ಕಾರಣ ಅವರ ವಿರುದ್ಧ ಸೂಕ್ತಶಿಸ್ತು ಕ್ರಮ ಜರುಗಿಸುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲು ಆಗ್ರಹಿಸಿ ಠರಾವು ಪುಸ್ತಕದಲ್ಲಿ ಸದಸ್ಯ ಬಲರಾಂ ಬರೆಸಿದರು.
ಸದಸ್ಯ ಕೆಂಪೇಗೌಡ ಮಧ್ಯಪ್ರವೇಶಿಸಿ ಪರಿಸರ ಹಾಳಾಗಿ ಹೋಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿರುವ ಇಂಡೋಸ್ ಪ್ಯಾನಿಷ್ ಕಂಪನಿಯವರು ಬಿಡುವ ರಾಸಾಯಿನಿಕ ನೀರಿನಿಂದ ಸುತ್ತಮುತ್ತಲ ಪರಿಸರ ಹಾಳಾಗಿದ್ದು ಮುಂದಿನ ಪೀಳಿಗೆಯ ಜನರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆಗ್ರಹಿಸಿ ಕ್ರಮಕೈಗೊಳ್ಳಲು ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ.
ಅಲ್ಲದೆ ರಾಸಾಯಿನಿಕ ಬಿಡುವ ಲಾರಿಯನ್ನ ಖುದ್ದು ಪೊಲೀಸರಿಗೆ ಹಿಡಿದು ಕೊಟ್ಟರೆ ಬರಿ ಸಬೂಬು ಹೇಳಿ ಲಾರಿ ಬಿಟ್ಟು ಕಳಿಸುವ ಕೆಲಸವನ್ನ ಪೊಲೀಸರು ಮಾಡುತ್ತಿರುವುದು ಯಾಕೋ ಅನುಮಾನ ಮೂಡಿಸಿದೆ ಎಂದು ಕಟುವಾಗಿ ಟೀಕಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನ ಇಒ ಮತ್ತು ಅಧ್ಯಕ್ಷರು ನೀಡಿದರು.
ಹೋಬಳಿಗೊಂದು ಎಂಎಸ್ಐಎಲ್ ನೀಡಿ ಎಂದು ಸದಸ್ಯ ದಿನೇಶ್ ಕುಮಾರ್ ಆಗ್ರಹಿಸುವ ಮೂಲಕ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತವಾಗಿ ಮಧ್ಯದ ವ್ಯಾಪಾರ ಮಾಡುತ್ತಿರುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಅದಕ್ಕಾಗಿ ಹೋಲ್ಸೇಲ್ ದರದಲ್ಲಿ ನಿಗದಿತ ವೇಳೆಯಲ್ಲಿ ದೊರೆಯುವ ಮದ್ಯಪಾನೀಯಗಳಿಂದ ತೊಂದರೆ ಆಗುವುದಿಲ್ಲ. ಆದರೆ ಅಕ್ರಮವಾಗಿ ಮಾರಾಟ ಮಾಡುವುದರಿಂದ ಯುವಕರು ಹಾಳಾಗುತ್ತಿದ್ದಾರೆ ಎಂದು ವಾದ ಮಂಡಿಸುವ ಮೂಲಕ ಎಂಎಸ್ಐಎಲ್ಗೆ ಒತ್ತು ಕೊಡುವಂತೆ ಆಗ್ರಹಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನ ಅಧ್ಯಕ್ಷರು ಮತ್ತು ಅಬಕಾರಿ ಇಲಾಖೆಯವರು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಇಂದ ಸರ್ಕಾರಿ ಆಸ್ಪತ್ರೆಗಳು ಇಂದು ತಾಲ್ಲೂಕಿನಲ್ಲಿ ಇದ್ದರೂ ಪ್ರಯೋಜನವಿಲ್ಲ ಎಂದು ಸದಸ್ಯ ಬಲರಾಂ ಟೀಕಿಸುವ ಮೂಲಕ ಸರ್ಕಾರಿ ವೈದ್ಯರ ನಿರ್ಲಕ್ಷ್ಯದಿಂದ ಗ್ರಾಮೀಣ ಪ್ರದೇಶದ ರೋಗಿಗಳು ಪರಿತಪಿಸುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿಗೆ ಎಚ್ಚರಿಕೆ ನೀಡಿದರು. ಅಲ್ಲದೆ ಹೇರೂರು ಗ್ರಾಮದಲ್ಲಿದ್ದ ಹಳೆಯ ಓವರ್ ಹೆಡ್ ಟ್ಯಾಂಕ್ ಕೆಡವಿ ಅದೇ ಸ್ಥಳದಲ್ಲಿ ಹೊಸ ಟ್ಯಾಂಕ್ ನಿರ್ಮಿಸಲು ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಠರಾವು ಪುಸ್ತಕದಲ್ಲಿ ಬರೆಸಿದರು.
ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆಂಪರಾಜಶ್ರೀಹನುಮಂತು,ಇ.ಒ. ಶಿವರಾಜಯ್ಯ, ಸದಸ್ಯರಾದ ಐ.ಎ.ವಿಶ್ವನಾಥ್, ಡಿ.ಗೊಲ್ಲರಹಟ್ಟಿ ಕೃಷ್ಣ, ಸೇರಿದಂತೆ ವಿವಿಧ ಗ್ರಾ.ಪಂ.ಗಳ ಅಧ್ಯಕ್ಷರು ತಾ.ಪಂ. ಸದಸ್ಯರುಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








