ನಿರ್ವಹಣೆಯಿಲ್ಲದೆ ಸೊರಗಿದ ಬುಟ್ಟಿಗಳು : ಕ್ರಮ ಕೈಗೊಳ್ಳುತ್ತಾರಾ ಅಧಿಕಾರಿಗಳು ?

ತುಮಕೂರು

ವಿಶೇಷ ವರದಿ: ರಾಕೇಶ್.ವಿ.

     ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ತುಮಕೂರು ನಗರದಲ್ಲಿ ಕಸದ ಸಮಸ್ಯೆ ಪರಿಹಾರ ಮಾಡುವ ದೃಷ್ಠಿಯಿಂದ ಅಳವಡಿಸಲಾದ ಕಸದ ಟ್ವಿನ್‍ಬಿನ್ಸ್‍ಗಳು ಇದೀಗ ಅಲ್ಲಲ್ಲಿ ಕಾಣೆಯಾಗಿವೆ. ಕೆಲವು ಮುರಿದು ಬಿದ್ದರೆ, ಇನ್ನೂ ಕೆಲ ಕಡೆ ಒಣ ಕಸದ ಬುಟ್ಟಿ ಕಾಣೆಯಾಗಿದೆ.
ಸ್ಮಾರ್ಟ್ ಸಿಟಿ ಲಿಮಿಟೆಡ್‍ನಿಂದ ಒಂದು ಜೋಡಿ ಟ್ವಿನ್‍ಬಿನ್ 12 ಸಾವಿರ ರೂ ವೆಚ್ಚದಂತೆ ನಗರದಲ್ಲಿ ಸುಮಾರು 48 ಕಡೆಗಳಲ್ಲಿ ಅಳವಡಿಸಲಾಗಿದೆ.

      ಬಿಎಚ್ ರಸ್ತೆ, ಮಹಾನಗರ ಪಾಲಿಕೆ, ಅಮಾನಿಕೆರೆ ಪಾರ್ಕ್, ಅಮಾನಿಕೆರೆ ಹೊರಭಾಗದ ರಸ್ತೆಯುದ್ದಕ್ಕೂ, ಜಿಲ್ಲಾಧಿಕಾರಿ ಕಚೇರಿ ಪಕ್ಕ, ಪಾಲಿಕೆ, ತುಮಕೂರು ವಿವಿಯ ಮುಂಭಾಗ, ಎಸ್‍ಐಟಿ ಕಾಲೇಜು ಬಳಿ ಸೇರಿದಂತೆ ಒಟ್ಟು ನಲವತ್ತು ಟ್ವಿನ್ ಬಿನ್ಸ್‍ಗಳನ್ನು ಅಳವಡಿಸಲಾಗಿದೆ.

      ಟ್ವಿನ್ ಬಿನ್ಸ್ ಗಳಿಂದ ಕಸದ ಸಮಸ್ಯೆ ಕೊಂಚವಾದರೂ ಪರಿಹಾರ ಆಗಬಹುದು ಎಂಬ ಉದ್ದೇಶ ಅಧಿಕಾರಿಗಳದ್ದಾಗಿದ್ದು, ಆರಂಭದಲ್ಲಿ ಜನ ಕಸವನ್ನು ತಂದು ಈ ಬುಟ್ಟಿಯೊಳಗೆ ಹಾಕುತ್ತಿದ್ದರು. ಆದರೆ ಇತ್ತೀಚೆಗೆ ಕಸದ ಬುಟ್ಟಿಗಳು ನಿರ್ವಹಣೆ ಇಲ್ಲದೆ ಸೊರಗಿದ್ದು, ಕೆಲಕಡೆ ಬುಟ್ಟಿಗಳೇ ಮಂಗಮಾಯವಾಗಿವೆ.

      ನಗರದ ಬಿಎಚ್ ರಸ್ತೆಯ ಸಿದ್ಧಗಂಗಾ ಬಡಾವಣೆಯ ಬಸ್ ನಿಲ್ದಾಣದ ಬಳಿ ಎರಡು ಕಡೆ ಇರುವ ಕಸದ ಬುಟ್ಟಿಯಲ್ಲಿ ಒಂದು ಕಡೆ ಎರಡೂ ಬುಟ್ಟಿಗಳು ಕಾಣೆಯಾದರೆ, ಇನ್ನೊಂದು ಕಡೆ ಒಂದು ಬುಟ್ಟಿ ಕಾಣುತ್ತಿಲ್ಲ. ಅದೇ ರೀತಿ ತುಮಕೂರು ವಿವಿ ಬಸ್ ನಿಲ್ದಾಣದ ಬಳಿ ಅಳವಡಿಸಿದ ಎರಡು ಕಸದ ಬುಟ್ಟಿಯಲ್ಲಿ ಒಂದು ಕಾಣುತ್ತಿಲ್ಲ. ಅಮಾನಿಕೆರೆಯ ಬಳಿ ಒಂದು ಜೋಡಿಯ ಬುಟ್ಟಿಗಳಲ್ಲಿ ಒಂದು ಕಾಣುತ್ತಿಲ್ಲ.

ಒಂದು ಜೋಡಿಗೆ 12 ಸಾವಿರ ವೆಚ್ಚ

      ನಗರದಲ್ಲಿ ಅಳವಡಿಸಲಾದ ಟ್ವಿನ್‍ಬಿನ್ಸ್‍ಗಳ ವೆಚ್ಚ ಒಂದು ಟ್ವಿನ್‍ಬಿನ್‍ಗೆ 12 ಸಾವಿರ ದಂತೆ 48 ಟ್ವಿನ್‍ಬಿನ್‍ಗಳಿಗೆ 5,76,000 ರೂಗಳು ವೆಚ್ಚ ಮಾಡಲಾಗಿದೆ. ನಗರದಲ್ಲಿ ಕಸದ ಎಲ್ಲೆಂದರಲ್ಲಿ ಬೀಸಾಡುತ್ತಿದ್ದು, ಅದನ್ನು ನಿಯಂತ್ರಿಸಬೇಕು ಎಂಬ ಕಾರಣದಿಂದ ಸ್ಮಾರ್ಟ್ ಸಿಟಿಯ ಯೋಜನೆ ಅಡಿಯಲ್ಲಿ ಈ ಬುಟ್ಟಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಒಣಕಸ ಹಾಗೂ ಹಸಿ ಕಸ ಎಂದು ಎರಡು ರೀತಿಯಲ್ಲಿ ಅಳವಡಿಕೆ ಮಾಡಲಾಗಿದ್ದು, ಕಾಣೆಯಾಗಿದ್ದ ಬುಟ್ಟಿಗಳು ಹೆಚ್ಚಿನದಾಗಿ ಒಣ ಕಸದ ಬುಟ್ಟಿಗಳೇ ಆಗಿವೆ.

ಗಮನ ಸೆಳೆದಿದ್ದ ಬುಟ್ಟಿಗಳು

      ಕಸದ ಟ್ವಿನ್‍ಬಿನ್ಸ್‍ಗಳನ್ನು ಅಳವಡಿಸಿ ಸುಮಾರು ಮೂರ್ನಾಲ್ಕು ತಿಂಗಳು ಕಳೆಯುತ್ತಾ ಬಂದಿವೆ. ಆರಂಭದಲ್ಲಿ ಇವುಗಳ ವಿನ್ಯಾಸವು ಜನರನ್ನು ಆಕರ್ಷಿಸಿತ್ತು. ತೂಗು ಕಸದ ಬುಟ್ಟಿಗಳ ಬಗ್ಗೆ ನಾಮಫಲಕಗಳನ್ನು ಹಾಕಲಾಗಿದ್ದು, ಇದರಲ್ಲಿಕಸವನ್ನು ತಂದು ಹಾಕಲಾಗುತಿತ್ತು. ಇದನ್ನು ಪ್ರತಿನಿತ್ಯ ಪಾಲಿಕೆ ನೌಕರರು ಕಸವನ್ನು ತೆಗದುಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಆ ಬುಟ್ಟಿಗಳಲ್ಲಿ ಕಸವು ಹಾಗೇ ಉಳಿದುಕೊಳ್ಳುತ್ತಿರುವುದು ಈ ಯೋಜನೆಗೆ ಕಪ್ಪು ಚುಕ್ಕೆಯಂತಾಗಿದೆ.

32 ಲಕ್ಷ ರೂ. ವೆಚ್ಚದ ಯೋಜನೆ

       ನಗರದಲ್ಲಿ ಸ್ವಚ್ಛತೆಯ ರಕ್ಷಣೆಗಾಗಿ ಒಟ್ಟು 160 “ತೂಗು ಕಸದ ಬುಟ್ಟಿ” ಅಳವಡಿಕೆ ಸೇರಿದಂತೆ 40 ಸಂಚಾರಿ ಕಂಟೈನರ್ ವ್ಯವಸ್ಥೆ ಮಾಡಲು ಒಟ್ಟು 32 ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದ್ದು, ಸದ್ಯದ ಮಟ್ಟಿಗೆ 48 ತೂಗು ಬುಟ್ಟಿಗಳನ್ನು ಅಳವಡಿಸಲಾಗಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಈ “ತೂಗು ಕಸದ ಬುಟ್ಟಿ” ತಯಾರಾಗುತ್ತಿದ್ದು, ಮಂಗಳೂರಿನ ಮಾಸ್ಕೋ ಕನ್ಸ್‍ಟ್ರಕ್ಷನ್ಸ್ ಎಂಬ ಸಂಸ್ಥೆಯು ಈ ಯೋಜನೆಯ ಗುತ್ತಿಗೆ ಪಡೆದು ಅಳವಡಿಸಲಾಗುತ್ತಿದೆ. ಶೀಘ್ರದಲ್ಲೇ ಈ ಬುಟ್ಟಿಗಳು ನಗರದ ಎಲ್ಲಾ ಭಾಗಗಳಲ್ಲಿ ಕಾಣಿಸಿಕೊಳ್ಳಲಿವೆ.

ಮೂರು ಕಡೆಗಳಲ್ಲಿ ಟ್ವಿನ್‍ಬಿನ್ಸ್ ಕಳವು

      ನಗರದಲ್ಲಿ ಕಸ ವಿಲೇವಾರಿ ಆಗದೆ ನಿತ್ಯ ಕಿರಿಕಿರಿ ಉಂಟಾಗುತ್ತಿತ್ತು. ಇದರಿಂದ ಸಾರ್ವಜನಿಕರು ನಿತ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಇದನ್ನು ಅರಿತ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಸದ ಸಂಗ್ರಹಣೆಗೆ ನೂತನ ಯೋಜನೆಯನ್ನು ಜಾರಿ ತಂದಿದ್ದು, ನಗರದ ಹಲವು ಕಡೆಗಳಲ್ಲಿ ಈ ತೂಗು ಬುಟ್ಟಿಗಳನ್ನು ಅಳವಡಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಿದ್ದಗಂಗಾ ಕಾಲೇಜು ಮುಂಭಾಗ, ವಿವಿ ಮುಂಭಾಗ, ಅಮಾನಿಕೆರೆ ಮುಂಭಾಗದಲ್ಲಿ ಟ್ವಿನ್ ಬಿನ್ಸ್‍ಗಳ ಒಂದೊಂದು ಬುಟ್ಟಿಗಳು ಕಳುವಾದ ಸಂಶಯ ವ್ಯಕ್ತವಾಗುತ್ತಿದೆ. ಇನ್ನೂ ಸಿದ್ದಗಂಗಾ ಕಾಲೇಜು ಮುಂಭಾಗದಲ್ಲಿ ಒಂದು ಜೋಡಿಯ ಬುಟ್ಟಿಗಳೇ ಇಲ್ಲವಾಗಿದ್ದು, ಇದು ಕಳ್ಳರ ಕೈಚಳಕೇ ಆಗಿರಬೇಕು ಎಂಬುದು ಸ್ಥಳೀಯರಿಂದ ಕೇಳಿ ಬರುತ್ತಿರುವ ಆರೋಪವಾಗಿದೆ.

ನೆಲಕ್ಕುರುಳಿದ ಟ್ವಿನ್‍ಬಿನ್ಸ್

      ಒಂದೆಡೆ ಟ್ವಿನ್‍ಬಿನ್ಸ್ ಕಳ್ಳರ ಕೈಚಳಕಕ್ಕೆ ಬಲಿಯಾದರೆ, ಮತ್ತೊಂದೆಡೆ ಜೋಡಿ ಕಸದ ಬುಟ್ಟಿಗಳು ನೆಲಕ್ಕುರುಳಿವೆ. ವಿವಿಯಿಂದ ಹಾಗೆ ಬಿಎಚ್ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಕುವೆಂಪು ರಸ್ತೆ ಸಿಗುತ್ತದೆ. ಅಲ್ಲೇ ಮೂಲೆಯಲ್ಲಿ ಕಸ ಸಂಗ್ರಹಣೆಗೆ ಅಳವಡಿಸಿದ್ದ ಟ್ವಿನ್‍ಬಿನ್ಸ್ ಸಾರ್ವಜನಿಕರು ಹಾಕುವ ಕಸ ತಾಳಲಾರದೆಯೇ ನಿಲಕ್ಕುರುಳಿದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಅದರ ಬಳಿ ಹೋದರೆ ವಾಸ್ತವಾಂಶ ತಿಳಿಯುತ್ತದೆ. ಬುಟ್ಟಿಯಲ್ಲಿ ಕಸ ಇಲ್ಲದಿದ್ದರು ಅದು ನೆಲಕ್ಕುರುಳಿದೆ ಎಂದು.

     


ಸ್ಮಾರ್ಟ್ ಸಿಟಿಯಿಂದ ಹಾಕಲಾದ ಕಸದ ತೂಗು ಬುಟ್ಟಿಗಳಲ್ಲಿನ ಕಸವನ್ನು ನಿತ್ಯ ತೆಗೆದುಕೊಂಡು ಹೋಗುವ ಜವಾಬ್ದಾರಿ ಪಾಲಿಕೆಗೆ ನೀಡಲಾಗಿದ್ದು, ಅದರ ಕಳುವಾದರೆ ಪಾಲಿಕೆಯವರು ಏನು ಮಾಡಲು ಸಾಧ್ಯ. ಬುಟ್ಟಿಗಳನ್ನು ಅಳವಡಿಸಿದವರು ಅದನ್ನು ಭದ್ರವಾಗಿರಿಸಲು ಸುಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಜನರ ಅನುಕೂಲಕ್ಕಾಗಿ ಕಸದ ಬುಟ್ಟಿಗಳನ್ನು ಹಾಕಲಾಗಿದೆ. ಆದರೆ ಕೆಲವರು ಇದನ್ನು ಕಳವು ಮಾಡಿಕೊಂಡು ಹೋಗಿರುವುದು ಪಾಠ ಕಲಿತಂತಾಗಿದೆ. ಈ ಬಗ್ಗೆ ಮುಂದೆ ಸೂಕ್ರ ಕ್ರಮ ಕೈಗೊಳ್ಳಲಾಗುವುದು.


ಅಧಿಕಾರಿಗಳಿಗೆ ಕಾಣದ ಹಗಲು ದರೋಡೆ

     ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸುವುದು ಮಾತ್ರ ಅಧಿಕಾರಿಗಳ ಕರ್ತವ್ಯವಾಗಿದೆಯೇ ವಿನಃ ಅದರ ನಿರ್ವಹಣೆ ಅವರ ವ್ಯಾಪ್ತಿಗೆ ಬರುವುದಿಲ್ಲ ಎಂಬಂತೆ ಅಧಿಕಾರಿಗಳ ವರ್ತನೆಯ ಪರಿಣಾಮ ನಗರದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಅಳವಡಿಸಿದ ಕಸದ ಬುಟ್ಟಿಗಳು ಹಗಲು ದರೋಡೆಕೋರರ ಕೈಚಳಕಕ್ಕೆ ಬಲಿಯಾಗಿವೆ. ಇದಕ್ಕೆ ಇಷ್ಟು ಹಣ ವ್ಯಯ ಮಾಡಿದ್ದೇವೆ ಎನ್ನುವ ಅಧಿಕಾರಿಗಳು ಅದರ ಸುರಕ್ಷತೆಗೆ ಏಕೆ ಒತ್ತು ನೀಡುತ್ತಿಲ್ಲ ? ಜೋಡಿ ಕಸದ ಬುಟ್ಟಿಯನ್ನು ಕದ್ದ ಆರೋಪಿಗಳ ಮೇಲೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.   


    ಸ್ಮಾರ್ಟ್‍ಸಿಟಿ ಯೋಜನೆಯಡಿ ಕಸ ವಿಲೇವಾರಿಗೆ ಎಂದು 48 ಕಡೆ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ. ಅದರ ನಿರ್ವಹಣೆ ಪಾಲಿಕೆ ಅಧಿಕಾರಿಗಳು ನೋಡಿಕೊಳ್ಳಬೇಕಿದೆ. ಆದರೆ ಇತ್ತೀಚೆಗೆ ಕೆಲ ಕಡೆಗಳಲ್ಲಿ ಕಳುವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆ ಕಾರಣಕ್ಕಾಗಿ ಹಾಕಬೇಕಿದ್ದ ಕಸದ ಬುಟ್ಟಿಗಳನ್ನು ಹಾಕದೇ ಉಳಿಸಲಾಗಿದೆ. ಸ್ಮಾರ್ಟ್ ರಸ್ತೆ ಕಾಮಗಾರಿ ಪೂರ್ಣಗೊಂಡು, ಸಿಸಿಟಿವಿ ಅಳವಡಿಕೆಯದನಂತರ ಉಳಿದ ಬುಟ್ಟಿಗಳನ್ನು ಹಾಕಲಾಗುತ್ತದೆ. ಕಳುವಾದ ಬಗ್ಗೆ ಪಾಲಿಕೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಬಿ.ಟಿ.ರಂಗಸ್ವಾಮಿ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ     


 ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದಲ್ಲಿ ಅಳವಡಿಸಿರುವ ಕಸದ ಬುಟ್ಟಿ ಕಳುವಿನ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಆನರ ಅನುಕೂಲಕ್ಕಾಗಿ ಕಸದ ಬುಟ್ಟಿಗಳನ್ನು ಅಳವಡಿಸಿದರೆ, ಕೆಲವರು ತಮ್ಮ ಕೈಚಳಕ ತೋರಿ ಈ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಬುಟ್ಟಿಗಳ ಕಳವು ಮಾಡಿದವರ ಮೇಲೆ ಪೊಲೀಸ್ ಠಾಣೆಗೆ ಪ್ರಕರಣ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

     ಡಾ.ಟಿ.ಭೂಬಾಲನ್, ಆಯುಕ್ತರು, ತುಮಕೂರು ಮಹಾನಗರ ಪಾಲಿಕೆ.


ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap