ದಾವಣಗೆರೆ:
ಹರಿಹರ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀದೇವಿ ಮಂಜುನಾಥ್ ವಿರುದ್ಧ ಅವಿಶ್ವಾಸ ಮಂಡಿಸದೇ, ಅವರನ್ನೇ ಪೂರ್ಣಾವಧಿಯ ವರೆಗೆ ಮುಂದುವರೆಸಬೇಕೆಂದು ತಾಲೂಕು ಮಾದಿಗ ಸಮಾಜದ ಮುಖಂಡ ಡಿ.ಹನುಮಂತಪ್ಪ ಒತ್ತಾಯಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯವು ಹರಿಹರ ತಾಲೂಕಿನಲ್ಲಿ 25 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಆದರೂ ನಮ್ಮ ಸಮುದಾಯಕ್ಕೆ ಅಷ್ಟಾಗಿ ರಾಜಕೀಯ ಪ್ರಾತಿನಿಧ್ಯ ದೊರೆತ್ತಿಲ್ಲ.
ಮೊದ ಮೊದಲು ಎಸ್ಸಿ ಮೀಸಲು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮಾದಿಗ ಸಮುದಾಯದವರಿಗೆ ಟಿಕೆಟ್ ನೀಡಲಾಗುತಿತ್ತು. ಆದರೆ, ಇತ್ತೀಚೆಗೆ ಆ ಕ್ಷೇತ್ರದಲ್ಲಿ ಭೋವಿ ಸಮುದಾಯದವರಿಗೆ ಟಿಕೆಟ್ ನೀಡುವ ಮೂಲಕ ಜಿ.ಪಂ. ಸದಸ್ಯರ ಸ್ಥಾನವನ್ನು ರಾಜಕೀಯ ಪಕ್ಷಗಳು ನಮ್ಮ ಸಮುದಾಯದಿಂದ ಕಿತ್ತು ಕೊಂಡಿವೆ. ಈಗ ಹರಿಹರ ತಾಲೂಕು ಪಂಚಾಯತ್ ಅಧ್ಯಕ್ಷರ ಸ್ಥಾನವನ್ನು ನಮ್ಮಿಂದ ಕಿತ್ತುಕೊಳ್ಳಲು ರಾಜಕೀಯ ಪಕ್ಷಗಳು ವ್ಯವಸ್ಥಿತ ಪಿತೂರಿ ನಡೆಸಿವೆ ಎಂದು ಆರೋಪಿಸಿದರು.
ಎಸ್ಸಿ ಮೀಸಲು ಜಿ.ಪಂ. ಕ್ಷೇತ್ರ ಹಾಗೂ ಪುರಸಭೆ ಅಧ್ಯಕ್ಷರ ಸ್ಥಾನವನ್ನು ಭೋವಿ ಸಮಾಜದವರಿಗೆ ನೀಡುವ ಮೂಲಕ ಮಾದಿಗ ಜನಾಂಗಕ್ಕೆ ರಾಜಕೀಯ ಪಕ್ಷಗಳು ಅನ್ಯಾಯ ಮಾಡಿವೆ ಎಂದು ದೂರಿದ ಅವರು, ನಮ್ಮ ಸಮುದಾಯದ ಶ್ರೀದೇವಿ ಮಂಜುನಾಥ್ ಪ್ರಸ್ತುತ ಹರಿಹರ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಈಗ ಕಾಂಗ್ರೆಸ್-ಜೆಡಿಎಸ್ ಪಕ್ಷದ ಸದಸ್ಯರು ಶ್ರೀದೇವಿ ಮಂಜುನಾಥ್ ವಿರುದ್ಧ ಅವಿಶ್ವಾಸ ಮಂಡಿಸುವ ಮೂಲಕ ತಾ.ಪಂ. ಅಧ್ಯಕ್ಷ ಸ್ಥಾನವನ್ನೂ ಸಹ ಭೋವಿ ಸಮಾಜದವರಿಗೆ ನೀಡಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾದಿಗ ಸಮುದಾಯಕ್ಕೆ ಸೇರಿರುವ ಹರಿಹರ ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜುನಾಥ್ ವಿರುದ್ಧ ಅವಿಶ್ವಾಸ ಮಂಡಿಸಿ, ಅಧಿಕಾರದಿಂದ ಕೆಳಗಿಳಿಸಲು ಪಿತೂರಿ ನಡೆಸಿರುವುದು ಮಾದಿಗ ಸಮಾಜದವರಿಗೆ ಸಾಕಷ್ಟು ನೋವು ಉಂಟು ಮಾಡಿದೆ. ಯಾವುದೇ ಕಾರಣಕ್ಕೂ ಯಾವುದೇ ರಾಜಕೀಯ ಪಕ್ಷಗಳು ನಮ್ಮ ಸಮುದಾಯಕ್ಕೆ ರಾಜಕೀಯವಾಗಿ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದರು.
ಅವಿಶ್ವಾಸ ಮಂಡಿಸಿ ಹರಿಹರ ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜುನಾಥ್ ಅವರನ್ನು ಅಧಿಕಾರದಿಂದ ಇಳಿಸುವ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಿ, ಅಧಿಕಾರ ಪೂರ್ಣಗೊಳಿಸಲು ಎಲ್ಲ ಪಕ್ಷಗಳ ಸದಸ್ಯರು ಸಹಕರಿಸಬೇಕು. ಅಕಸ್ಮಾತ್ ಇವರಿಂದ ಯಾವುದಾದರೂ ಪಕ್ಷದವರು ಅಧಿಕಾರ ಕಿತ್ತುಕೊಂಡರೇ, ಮುಂಬರುವ ಚುನಾವಣೆಯಲ್ಲಿ ಆ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮಾಜದ ಮುಖಂಡರಾದ ಅಡಿವೆಪ್ಪ.ಎಸ್, ಕೇಶವ.ಎಸ್, ವಾಗೀಶ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
