2 ವರ್ಷವಾದರೂ ದೊರಕದ ಬೆಳೆ ವಿಮೆ ಪರಿಹಾರ

ಚಿಕ್ಕನಾಯಕನಹಳ್ಳಿ

      ಇದು ಕಥೆಯಲ್ಲ ರೈತರ ವ್ಯಥೆ, ಬಡರೈತರ ಹಣದಿಂದ ವಿಮಾ ಕಂಪನಿಗಳು ಶ್ರೀಮಂತಗೊಳ್ಳುತ್ತಿವೆ ಹೊರತು ರೈತರಿಗೆ ಮಾತ್ರ ವಿಮಾ ಹಣ ಬರುತ್ತಿಲ್ಲ. ಎರಡು ವರ್ಷಗಳಿಂದ ರೈತರಿಗೆ ವಿಮೆ ಪಾವತಿಯಾಗದೆ, ಇತ್ತ ಬೆಳೆಯೂ ಬರದೆ ಅನ್ನದಾತ ಕಣ್ಣೀರಿಡುತ್ತಿದ್ದಾನೆ.

    ಬೆಳೆ ವಿಮೆ ಕಂತು ಪಾವತಿಸಿದ ರೈತರಿಗೆ ಎರಡು ವರ್ಷಗಳಿಂದ ಬೆಳೆಯ ವಿಮೆ ಹಣ ಬಂದಿಲ್ಲ. ಬರ ಹಾಗೂ ಬೆಳೆ ನಷ್ಟದಿಂದ ರೈತರು ನಲುಗಿದರೂ ಸರ್ಕಾರ ಹಾಗೂ ವಿಮಾ ಕಂಪನಿಗಳು ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ವಿಮಾ ಯೋಜನೆಗೆ ಹೆಸರು ನೋಂದಾಯಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ.

     ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಪ್ರತಿ ಹಂಗಾಮಿನಲ್ಲೂ ಸಾವಿರಾರು ರೈತರು ವಿಮಾ ಕಂತು ಪಾವತಿ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಸತತ ಬರಗಾಲ ಕಾಡುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯ ರೈತರು ವಿಮಾ ಯೋಜನೆಗಳಿಗೆ ನೋಂದಾವಣಿ ಮಾಡಿಕೊಂಡಿದ್ದಾರೆ. 2016ರಲ್ಲಿ ತಾಲ್ಲೂಕಿನಲ್ಲಿ 3567 ಎಕರೆಗೆ 6104 ರೈತರು ಫಸಲ್ ಬೀಮಾ ಯೋಜನೆಗೆ ಹಣ ಕಟ್ಟಿದ್ದಾರೆ.

      2017ರಲ್ಲಿ ವಿಮೆಗೆ ಅರ್ಜಿ ಸಲ್ಲಿಸಿದ ರೈತರ ಸಂಖ್ಯೆ ಹೆಚ್ಚಾಗಿದೆ, ರೈತರು ಕೃಷಿ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಬ್ಯಾಂಕ್‍ನಲ್ಲಿ ವಿಮೆಗೆ ಹಣ ಪಾವತಿ ಮಾಡಿದ್ದಾರೆ. 2016-17ನೇ ಸಾಲಿನಲ್ಲಿ ವಿಮೆಗೆ ಹೆಸರು ನೋಂದಾಯಿಸಿಕೊಂಡಿದ್ದ ರೈತರ 3567 ಹೆಕ್ಟೇರ್ ಪ್ರದೇಶದ ಬೆಳೆ ನಾಶಕ್ಕೆ ಸರ್ಕಾರ 3ಕೋಟಿ 72ಲಕ್ಷ ಹಣ ಬಿಡುಗಡೆ ಮಾಡಿ ವಿತರಿಸಿತ್ತು. ಆದರೆ ಬಹಳಷ್ಟು ರೈತರಿಗೆ ಇನ್ನೂ ಸಹ ಹಣ ದೊರಕಿಲ್ಲ. ಹಲವು ರೈತರಿಗೆ ಎರಡು ವರ್ಷಗಳ ವಿಮೆಯ ಹಣ ಬರಬೇಕಾಗಿದೆ.

      ಮಳೆ ಹಾಗೂ ಬೆಳೆ ನಾಶವಾದಂತಹ ರೈತರಿಗೆ ಪ್ರಧಾನಮಂತ್ರಿ ಜಾರಿಗೊಳಿಸಿದ ಫಸಲ್ ಬೀಮಾ ಯೋಜನೆ ರೈತರ ಆರ್ಥಿಕ ಸಂಕಷ್ಟಕ್ಕೆ ನೆರವಾಗಬೇಕಾಗಿತ್ತು. ಆದರೆ ವಿಮಾ ಕಂಪನಿಯವರು ರೈತರಿಗೆ ಮಾತ್ರ ಹಣ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಬರಗಾಲದಿಂದ ಬೆಳೆಯೂ ದೊರಕದೆ, ಬೆಳೆ ಕೈಕೊಟ್ಟ ಕಾರಣ ಕಟ್ಟಿದ ವಿಮೆಯ ಹಣವೂ ದೊರಕದೆ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.

       ತಾಲ್ಲೂಕಿನಲ್ಲಿ ತೆಂಗು, ಅಡಿಕೆ, ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರವೇ ಘೋಷಿಸಿದೆ. ಇಲ್ಲಿ ಅಂತರ್ಜಲ ಮಟ್ಟವೂ ಕುಸಿತಗೊಂಡಿದೆ. ಕೊಳವೆ ಬಾವಿ ವೈಫಲ್ಯವಾಗಿ ನೀರಿನ ಅಭಾವ ಹೆಚ್ಚಾಗಿದೆ. ಇದರಿಂದ ತಾಲ್ಲೂಕಿನಲ್ಲಿ ರೈತ ಬೆಳೆದಿರುವ ಬೆಳೆಗಳು ನಾಶಗೊಂಡಿವೆ. ಸರಿಯಾಗಿ ಬೆಳೆ ದೊರಕದೆ ಅನ್ನದಾತರ ಕೈ ಹಿಡಿಯಬೇಕಾದ ಬೆಳೆವಿಮೆಯೂ ದೊರಕದೆ ಪರದಾಡುತ್ತಿರುವ ರೈತರು ನಮ್ಮ ನೆರವಿಗೆ ಯಾರು ಬರುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

       2018-19ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ(ವಿಮಾ) ಯೋಜನೆ ಅಡಿಯಲ್ಲಿ ತಾಲ್ಲೂಕಿನ ಕಸಬಾ, ಶೆಟ್ಟಿಕೆರೆ, ಕಂದಿಕೆರೆ, ಹಂದನಕೆರೆ, ಹುಳಿಯಾರು ಹೋಬಳಿಗಳಲ್ಲಿ ರಾಗಿ, ಹುರಳಿ, ಹೆಸರು, ಅಲಸಂದೆ, ಸಾವೆ, ಕೆಂಪು ಮೆಣಸಿನಕಾಯಿ, ನವಣೆ, ಸಜ್ಜೆ, ಟೊಮ್ಯಾಟೊ, ಈರುಳ್ಳಿ, ತೊಗರಿ ಬೆಳೆಗಳಿಗೆ ವಿಮೆ ಕಟ್ಟಲು ಇಲಾಖೆ ವತಿಯಿಂದ ರೈತರಿಗೆ ಮಾಹಿತಿ ನೀಡಲಾಗಿತ್ತು. ರೈತರು ಸರ್ಕಾರದ ಮಾಹಿತಿಯಂತೆ ವಿಮಾ ಕಂತನ್ನೂ ಸಹ ಕಟ್ಟಿದ್ದರು, ಆದರೆ ಇದೂವರೆವಿಗೂ ವಿಮಾ ಕಂಪನಿಗಳಿಂದ ವಿಮೆಯ ಹಣ ಮಾತ್ರ ವರ್ಷಗಳು ಕಳೆದರೂ ದೊರಕಿಲ್ಲ ಎಂದು ರೈತರು ದೂರುತ್ತಿದ್ದಾರೆ.  

      ಪರಿಹಾರ ಪಡೆಯುವ ವೇಳೆಗೆ ಉರುಳಿದ ವರ್ಷ : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆವಿಮೆಯ 2016ನೇ ವರ್ಷದಲ್ಲಿ ಹಣ ಕಟ್ಟಿದ ರೈತರು, ವಿಮೆ ಹಣ ಬರದಿದ್ದರೂ ಮತ್ತೊಮ್ಮೆ 2017 ನೇ ವರ್ಷವೂ ವಿಮೆ ಕಂತಿನ ಹಣ ಕಟ್ಟಿದ್ದಾರೆ. ಆದರೂ ಇದೂವರೆವಿಗೂ ವಿಮಾ ಪರಿಹಾರದ ಹಣ ಬಂದಿಲ್ಲ. ಈಗ ಪುನಃ 2018 ನೇ ವರ್ಷದ ವಿಮೆಗೆ ಕಂತು ಕಟ್ಟಲು ರೈತರಿಗೆ ತಿಳಿಸಲಾಗಿದೆ. ಎರಡು ವರ್ಷಗಳಿಂದ ಈಗಾಗಲೇ ರೈತರು ವಿಮೆಯ ಹಣವನ್ನು ಕಟ್ಟುತ್ತಿದ್ದೇವೆ. ಆ ಹಣವೇ ಬಂದಿಲ್ಲ ಪುನಃ ವಿಮೆ ಹಣ ಕಟ್ಟುವುದಿಲ್ಲ. ಈಗಲೇ ಮಳೆ-ಬೆಳೆ ಎರಡೂ ಇಲ್ಲದೆ ನೊಂದಿರುವ ನಾವು ವಿಮಾ ಕಂಪನಿಗೆ ಹಣ ಕಟ್ಟಿ ಆ ಹಣವನ್ನು ಕಳೆದುಕೊಳ್ಳುವುದಿಲ್ಲ ಎಂದು ಹಲವು ರೈತರು ವಿಮಾ ಹಣ ಕಟ್ಟಲು ಹಿಂದೇಟು ಹಾಕಿದ್ದಾರೆ.

        ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ : ಬೆಳೆ ನಷ್ಟಗೊಂಡ ರೈತರ ಕೈ ಹಿಡಿಯಲು ಸರ್ಕಾರ ಫಸಲ್ ಭಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು ತಿಳಿಸಿದರೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

        ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರಷ್ಟು ಬೆಳೆ ವಿಮಾ ಪರಿಹಾರ ನೀಡಲು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಠ ಪರಿಹಾರದಲ್ಲಿ ಶೇ.25ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು.

      ಅಲ್ಲದೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗೆ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ನೀಡುತ್ತದೆ.

     ಬೆಳೆ ವಿಮೆ ಪಾಲಿಸಿದಾರರ ವೇದಿಕೆ ಆರಂಭ : 2016-17, 2017-18ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ರೈತರು ಬೆಳೆವಿಮೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ರೈತರುಗಳಿಗೆ ಇದೂವರೆವಿಗೂ ಬೆಳೆ ವಿಮೆಯ ಪರಿಹಾರದ ಹಣ ಸಮರ್ಪಕವಾಗಿ ದೊರಕಿಲ್ಲ. ಹೀಗಾಗಿ ತಾಲ್ಲೂಕಿನಲ್ಲಿ ನೂತನವಾಗಿ ರಚನೆಯಾಗಿರುವ ಬೆಳೆ ವಿಮೆ ಪಾಲಿಸಿದಾರರ ವೇದಿಕೆಯಿಂದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿರುವ ರೈತರೊಂದಿಗೆ ಈ ವೇದಿಕೆ ಜೊತೆಯಾಗಿದ್ದು ವಿಮೆ ಪಡೆಯುವ ಬಗ್ಗೆ ಸಲಹೆ, ಸೂಚನೆಗಳನ್ನು ನೀಡುತ್ತದೆ ಎಂದು ವೇದಿಕೆಯ ಘಟಕ ಆರಂಭವಾಗಿದೆ.

      ಈ ವೇದಿಕೆ ಮೂಲಕ ಸರ್ಕಾರ ನಿಗದಿಪಡಿಸಿರುವ ಬೆಳೆಗೆ ರೈತರು ವಿಮೆ ಕಟ್ಟಿ, ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿಯೂ ಬೆಳೆ ವಿಮೆ ದೊರಕದ ರೈತರು ಜಿಲ್ಲಾ ಗ್ರಾಹಕರ ವೇದಿಕೆಯ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಮೂಲಕ ಕಾನೂನಿನ ಹೋರಾಟ ಪ್ರಾರಂಭಿಸಲಾಗುವುದೆಂದು ಘಟಕ ತಿಳಿಸಿದೆ.

       ಗ್ರಾಹಕರ ವೇದಿಕೆಯ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರೆ, ವಿಮೆ ಹಣ ಬರುವ ಜೊತೆಗೆ, ವಕೀಲರಿಗೆ ಕೊಡುವ ಫೀಜಿನ ಹಣವೂ ಹಾಗೂ ಗ್ರಾಹಕರ ವೇದಿಕೆಯು ವಿಮೆ ಕಂಪನಿಗೆ ದಂಡ ವಿಧಿಸಿದಾಗ ಬರುವ ಹಣವೂ ರೈತರಿಗೆ ಬರಲಿದೆ. ಹೆಚ್ಚು ದಿನ ಪ್ರಕರಣ ನಡೆದರೆ 9%ರಷ್ಟು ಬಡ್ಡಿ ರೈತರಿಗೆ ದೊರಕುತ್ತದೆ. ಇದಕ್ಕೆ ಹೆಚ್ಚಿನ ಹಣ ವ್ಯಯ ಮಾಡಬೇಕಾಗುವುದಿಲ್ಲ, ನ್ಯಾಯಾಲಯಕ್ಕೆ ದೂರು ನೀಡಿದ 5 ಅಥವಾ 6 ತಿಂಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಹಾಗಾಗಿ ಬೆಳೆ ವಿಮೆ ಸಮರ್ಪಕವಾಗಿ ಪಡೆಯದ ರೈತರು ಪರಿಹಾರಕ್ಕಾಗಿ ಈ ವೇದಿಕೆಗೆ ನೋಂದಾಯಿಸಿಕೊಳ್ಳಿ ಎಂದು ವೇದಿಕೆ ಸಂಘಟನೆ ತಿಳಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link