ಚಿಕ್ಕನಾಯಕನಹಳ್ಳಿ
ತಾಲ್ಲೂಕು ಹಾಗೂ ಶಿರಾ ತಾಲ್ಲೂಕಿನಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಸಣ್ಣ ನೀರಾವರಿ ಇಲಾಖೆಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಗಂಗಾಕಲ್ಯಾಣ ಇಲಾಖೆಯ ಒಟ್ಟು 61 ಜನ ಫಲಾನುಭವಿಗಳಲ್ಲಿ ತಾಲ್ಲೂಕಿನ 22 ಜನ ಫಲಾನುಭವಿಗಳಿಗೆ ಏಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಸಣ್ಣ ನೀರಾವರಿ ಇಲಾಖಾ ಅಧಿಕಾರಿ ಪ್ರಭಾಕರ್‍ರವರನ್ನು ಪ್ರಶ್ನಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಶಾಸಕ ಜೆ.ಸಿಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಮಾತನಾಡಿದರು. ಸಣ್ಣ ನೀರಾವರಿ ಇಲಾಖಾ ಅಧಿಕಾರಿ ಪ್ರಭಾಕರ್ ಮಾತನಾಡಿ, ಬೆಸ್ಕಾಂ ಇಲಾಖೆಗೆ ಅಪ್ಲೀಕೇಷನ್ ರಿಜಿಸ್ಟ್ರೇಷನ್ ಮಾಡಿದ್ದೇವೆ. ಇಲಾಖಾ ವತಿಯಿಂದ ಬೆಸ್ಕಾಂ ಇಲಾಖೆಗೆ ಹಣ ಕಟ್ಟಬೇಕು ಎಂದಾಗ, ಹೀಗಾದರೆ ಹೇಗೆ?, 2 ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದೀರಿ. ಅವುಗಳಲ್ಲಿ ನೀರು ಇದೆಯೋ, ಇಲ್ಲವೋ ನೋಡಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದರು. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆದೇಶಿಸಿದರು.
ಸಭೆಯಲ್ಲಿದ್ದ ಎ.ಇ.ಇ ಗವಿರಂಗಯ್ಯನವರನ್ನು ಪ್ರಶ್ನಿಸಿದ ಶಾಸಕರು, ಗಂಗಾಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಏಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲವೆಂದು ಪ್ರಶ್ನಿಸಿದಾಗ, ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳು ಅರ್ಜಿ ಸಲ್ಲಿಸಿ ನೋಂದಣಿ ಮಾಡಿದ್ದಾರೆ. ಬೆಸ್ಕಾಂ ಇಲಾಖೆ ಅಂದಾಜು ಪಟ್ಟಿಯನ್ನು ಸಣ್ಣ ನೀರಾವರಿ ಇಲಾಖೆಗೆ ನೀಡಿದ್ದೇವೆ. ಸಣ್ಣ ನೀರಾವರಿ ಇಲಾಖೆಯಿಂದ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ತಂತಿಯನ್ನು ಅಳವಡಿಸಿಕೊಂಡಿಲ್ಲ ಎಂಬ ಕಾರಣದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ ಎಂದರು.
ಶಾಸಕರು ಇಲಾಖಾವಾರು ಪ್ರಗತಿಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಸರಿಯಾದ ಉತ್ತರ ನೀಡದೇ ಇರುವುದರಿಂದ ನಿಮಗೆ ಏನು ಎನ್ನಬೇಕೋ ತಿಳಿಯುತ್ತಿಲ್ಲ, ಅಧಿಕಾರಿಗಳು ಅಂಕಿ ಅಂಶಗಳನ್ನು ನೀಡುತ್ತೀರಾ, ನಾವು, ನೀವು ನೀಡಿದ ಅಂಕಿ ಅಂಶಗಳನ್ನು ಓದಿಕೊಂಡು ಹೋಗಬೇಕೆ ಎಂದು ಪ್ರಶ್ನಿಸಿ, ಮುಂದಿನ ಕೆ.ಡಿ.ಪಿ ಸಭೆಗೆ ಬರುವಾಗ ಸರಿಯಾದ ಅಂಕಿ ಅಂಶಗಳನ್ನು ತರಬೇಕು. ಯಾವ ಯಾವ ಯೋಜನೆಗೆ ಎಷ್ಟು ಹಣ ಖರ್ಚಾಗಿದೆ ಎಂಬುದರ ಬಗ್ಗೆ ಮಾಹಿತಿ ತರುವಂತೆ ತಿಳಿಸಿದರು.
ಸದಸ್ಯ ರುದ್ರೇಶ್ ಮಾತನಾಡಿ, ಪಟ್ಟಣದಲ್ಲಿರುವ ಹಾಗೂ ಹುಳಿಯಾರು ಅಂಬೇಡ್ಕರ್ ಭವನದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಎಂದು ಹೇಳಿದರು. ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತಾಲ್ಲೂಕಿನ ಹುಳಿಯಾರು ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಲು ಉಪವಿಭಾಗಾಧಿಕಾರಿಗಳು ತೆರಳಿದಾಗ ಮೇಲ್ಛಾವಣಿ ಕಾಂಕ್ರೀಟ್ ಕುಸಿಯುತ್ತಿದೆ. ಹಾಗಾಗಿ ಅಂಬೇಡ್ಕರ್ ಭವನ ಹಾಳಾಗಿರುವುದರಿಂದ ಇದನ್ನು ರೀಪೇರಿ ಮಾಡದೆ ಕೆಡವಿ ಹಾಕಿದರೆ ಒಳ್ಳೆಯದು. ಭವನದಲ್ಲಿ ಬರುತ್ತಿರುವ ದುರ್ನಾತದಿಂದ ಸಭೆ ಸಮಾರಂಭಗಳು ಮಾಡುವ ಸ್ಥಿತಿಯಲ್ಲಿಲ್ಲ ಎಂದರು.
ತೋಟಗಾರಿಕಾ ಇಲಾಖೆಯಲ್ಲಿ ರೈತರಿಗೆ ನೀಡುವ ಸವಲತ್ತುಗಳನ್ನು ಸರಿಯಾಗಿ ನೀಡುತ್ತಿಲ್ಲ. ಇಲಾಖೆಯಲ್ಲಿ ಏನು ನಡೆಯುತ್ತಿದೆಯೋ ಗೊತ್ತಾಗುತ್ತಿಲ್ಲ. ತೋಟಗಾರಿಕಾ ಇಲಾಖೆಯಲ್ಲಿ ಹನಿ ನೀರಾವರಿಗೆ ಎರಡು ಕೋಟಿ ಹದಿನಾರು ಲಕ್ಷ ರೂ. ಹಣ ಬಿಡುಗಡೆಯಾಗಿದ್ದರೂ, ಕೇವಲ 48 ಲಕ್ಷ ರೂಪಾಯಿ ನೀಡಿ ಶೇ.23%ರಷ್ಟು ಪ್ರಗತಿಯಾಗಿದೆ ಎಂದು ತೋರಿಸಿದ್ದೀರಾ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಹದಿಮೂರು ಲಕ್ಷ ನಲವತ್ತು ಸಾವಿರ ರೂ. ಹಣ ಬಿಡುಗಡೆಯಾಗಿದ್ದರೂ, ಕೇವಲ 50 ಸಾವಿರ ರೂ. ನೀಡಿ ಪ್ರಗತಿಯಾಗಿದೆ ಎಂದು ಅಂಕಿ ಅಂಶ ಕೊಟ್ಟೀದ್ದೀರಿ ಎಂದ ಅವರು, ಹನಿ ನೀರಾವರಿ ಮಾಡುವ ಕಂಪನಿ ಏಜೆನ್ಸಿಗೆ ಮಾತ್ರ ತಕ್ಷಣ ಹಣ ನೀಡುತ್ತಿರಿ.
ಆದರೆ ಹನಿ ನೀರಾವರಿ ಮಾಡಿದ ರೈತರಿಗೆ ಹಣ ಏಕೆ ನೀಡುತ್ತಿಲ್ಲ, ರೈತರು ಕಮಿಷನ್ ನೀಡುವುದಿಲ್ಲ ಎಂಬ ಕಾರಣಕ್ಕಾಗಿಯೋ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಗೆ ತೋಟಗಾರಿಕೆ ಅಧಿಕಾರಿ ಬಂದಿರದಿದ್ದರಿಂದ ಶಾಸಕರ ಪ್ರಶ್ನೆಗೆ ಉತ್ತರ ದೊರಕಲಿಲ್ಲ.
ಹೇಮಾವತಿ ನಾಲೆಯಿಂದ ವಶಪಡಿಸಿಕೊಂಡಿರುವ ರೈತರಿಗೆ 11ಕೋಟಿ ಪರಿಹಾರ ನೀಡಬೇಕು. ಇದರಲ್ಲಿ 5 ಕೋಟಿ ಹಣ ಬಿಡುಗಡೆಯಾಗಿದೆ. ಈಗಾಗಲೇ 1 ಕೋಟಿ ರೂ ಪರಿಹಾರ ನೀಡಲಾಗಿದೆ. ಕೆಲವು ರೈತರು ತಕರಾರು ತೆಗೆದಿದ್ದಾರೆ. ತಕರಾರು ತೆಗೆದಿರುವ ರೈತರ ಜಮೀನಿಗೆ, ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ನಂತರ ಪರಿಹಾರ ನೀಡಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸಭೆಯಲ್ಲಿ ಜಿ.ಪಂ ಸದಸ್ಯರಾದ ಕಲ್ಲೇಶ್, ಆರ್.ರಾಮಚಂಧ್ರಯ್ಯ, ಮಂಜುಳಮ್ಮ, ವೈ.ಸಿ ಸಿದ್ದರಾಮಯ್ಯ, ಮಹಾಲಿಂಗಪ್ಪ, ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜಕುಮಾರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ