ಚಿತ್ರದುರ್ಗ
ಸ್ವಾತಂತ್ರ್ಯ ಗಳಿಸಿ ಏಳು ದಶಕವಾದರೂ ಇಂದಿಗೂ ಅಸ್ಪಶ್ಯತೆ ಜೀವಂತವಾಗಿದೆ ದೌರ್ಜನ್ಯ ನಿಂತಿಲ್ಲ. ಇದಕ್ಕೆ ಕಾರಣ ಮತಗಳ ಮಾರಾಟ. ಚುನಾವಣೆಯಲ್ಲಿ ಮತಗಳನ್ನು ಮಾರಾಟ ಮಾಡುವುದನ್ನು ಬಿಟ್ಟರೆ ಮಾತ್ರ ದಲಿತರ ಉದ್ದಾರ ಸಾಧ್ಯ ಎಂದು ಬಹುಜನ ಸಮಾಜ ಪಕ್ಷ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ- ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ್ಯ ಬಂದ ಮೇಲೂ ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಮತದಾನ ಹಕ್ಕು ನೀಡಬಾರದೆಂದು ವಾದ ಹೆಚ್ಚಾಗಿತ್ತು. ಭೂಮಿ ಹಕ್ಕು ಸಹ ನೀಡಬಾರದೆಂದು ಮೇಲ್ವರ್ಗದವರು ಹೇಳುತ್ತಲೇ ಬಂದಿದ್ದರು. ಅಂಬೇಡ್ಕರ್ ಮತ ಚಲಾಯಿಸುವ ಅಧಿಕಾರ ನೀಡಬೇಕೆಂದು ಪಟ್ಟುಹಿಡಿದಾಗ ವಿರೋಧ ಬಂತು. ಆದರೂ ಅಂಬೇಡ್ಕರ್ ಅದಕ್ಕೆ ಲೆಕ್ಕಿಸದೆ ಮತದಾನದ ಹಕ್ಕು ನೀಡಲೇಬೇಕೆಂದು ಹೋರಾಟ ಮಾಡಿ ಕೊಡಿಸಿದರು. ಆದರೆ ಇಂದು ಮತಗಳನ್ನು ಮಾರಾಟ ಮಾಡಿಕೊಳ್ಳುತ್ತಿರುವುದರಿಂದ ಮತದ ಮಹತ್ವ ಯಾರಿಗೂ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಗಳಲ್ಲಿ ಮತದ ಜೊತೆಗೆ ನೋಟು ಕೊಡಿ ಎಂದು ನಾಯಕರು ಹೇಳಿದರೆ ಅನೇಕರು ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳೇ ಹಣ ನೀಡುವಾಗ ನಾವೇಕೆ ಬಿಎಸ್ಪಿ ಅಭ್ಯರ್ಥಿಗೆ ನೋಟು ಕೊಡಬೇಕು ಎಂದು ಪ್ರಶ್ನಿಸಿದರು. ಆದರೆ ನೋಟು ನೀಡಿದ ಅಭ್ಯರ್ಥಿ ನಿಮ್ಮ ಸಮಸ್ಯೆ ಬಗೆಹರಿಸುವುದಿಲ್ಲ. ದೌರ್ಜನ್ಯವಾದಾಗ ನಿಮ್ಮ ಪರ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ದೇಶವನ್ನು ಆಳಿದ ಕಾಂಗ್ರೆಸ್, ಜನತಾದಳ, ಬಿಜೆಪಿ ದಲಿತರನ್ನು ಮತಬ್ಯಾಂಕುಗಳನ್ನಾಗಿ ಮಾಡಿಕೊಂಡಿವೆ. 85 ಕೋಟಿಗೂ ಹೆಚ್ಚಿರುವ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಸಮುದಾಯಕ್ಕೆ ಇಂದಿಗೂ ಸಂಪತ್ತು ಸಮನಾಗಿ ಹಂಚಿಕೆ ಯಾಗಿಲ್ಲ. ಭೂಮಿ ಒಡೆತನ ಸಿಕ್ಕಿಲ್ಲ. ಇಂದಿಗೂ ದೌರ್ಜನ್ಯ ನಿರಂತರವಾಗಿದೆ. ಇದರಿಂದ ಪಾರಾಗಬೇಕಾದರೆ ಚುನಾವಣೆಯಲ್ಲಿ ಬಹುಜನ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮನವಿ ಮಾಡಿದರು.
ರಾಜ್ಯದಲ್ಲಿ ಒಂದೊಂದು ರಾಜಕೀಯ ಪಕ್ಷ ಒಂದೊಂದು ಜಾತಿಗೆ ಸೀಮಿತವಾಗಿದೆ. ಜೆಡಿಎಸ್ ವಕ್ಕಲಿಗರು, ಬಿಜೆಪಿ ಲಿಂಗಾಯತರು, ಕಾಂಗ್ರೆಸ್ ಬ್ರಾಹ್ಮಣರು ಮತ್ತು ಸ್ವಲ್ಪ ಪರಿಶಿಷ್ಟರ ಪರವಾಗಿದೆ. ಇಂತಹ ಸನ್ನಿವೇಶದಲ್ಲಿ ಅಂಬೇಡ್ಕರ್ ಹೇಳಿದ ಮಾತನ್ನು ಮರೆಯದೆ ಮತದಾನ ಮಾಡುವಂತೆ ಹೇಳಿದರು.ಪಕ್ಷದ ರಾಜ್ಯ ಕಾರ್ಯದರ್ಶಿ ಎನ್.ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ್ ಕೂನಬೇವು, ಪ್ರಧಾನಕಾರ್ಯದರ್ಶಿ ಎಸ್.ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
