ಬೆಂಗಳೂರು
ಮೌಖಿಕ ಸಂದರ್ಶನವಿಲ್ಲದೆ ಇನ್ನು ಮುಂದೆ ವೈದ್ಯರು,ಪೋಲೀಸರು,ಉಪನ್ಯಾಸಕರು ಹಾಗೂ ಎಂಜಿನಿಯರುಗಳ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ.ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಯುವ ಲಿಖಿತ ಪರೀಕ್ಷೆಗಳ ಜತೆ ಮೌಖಿಕ ಸಂದರ್ಶನವೂ ಈ ಹುದ್ದೆಗಳ ಆಯ್ಕೆಗೆ ಪ್ರಮುಖ ಮಾನದಂಡವಾಗಿತ್ತು.ಆದರೆ ಇದೀಗ ವೃತ್ತಿನಿರತ ಹುದ್ದೆಗಳಿಗೆ ಮೌಖಿಕ ಸಂದರ್ಶನ ಬೇಕಿಲ್ಲ ಎಂದು ಸರ್ಕಾರ ಹೇಳಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯ ತಿಳಿಸಿದರು.ಡಾಕ್ಟರ್,ಎಂಜಿನಿಯರ್,ಪೋಲೀಸ್ ಸೇರಿದಂತೆ ವಿವಿಧ ವೃತ್ತಿನಿರತ ಹುದ್ದೆಗಳಿಗೆ ನೇಮಕಗೊಳ್ಳಲು ಇದುವರೆಗೆ ಅಭ್ಯರ್ಥಿಗಳು ಲಿಖಿತ ಸಂದರ್ಶನದ ಜತೆ ಮೌಖಿಕ ಸಂದರ್ಶನವನ್ನೂ ಎದುರಿಸಬೇಕಾಗಿತ್ತು.ಆದರೆ ಇಂದಿನ ಸಭೆ ಮೌಖಿಕ ಸಂದರ್ಶನದ ಅಗತ್ಯವಿಲ್ಲ ಎಂದು ತೀರ್ಮಾನಿಸಿತು ಎಂದು ಹೇಳಿದರು.
ಇದುವರೆಗೂ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಮಾತ್ರ ಮೌಖಿಕ ಸಂದರ್ಶನವಿಲ್ಲದೆ ಭರ್ತಿ ಮಾಡಬಹುದಿತ್ತು.ಆದರೆ ಎ ಮತ್ತು ಡಿ ದರ್ಜೆ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನಗಳೆರಡರ ಅಗತ್ಯವಿತ್ತು.
ಆದರೆ ಇನ್ನು ಮುಂದೆ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಭರ್ತಿ ಮಾಡಿದಂತೆ ವಿವಿಧ ಇಲಾಖೆಗಳಲ್ಲಿರುವ ಎ ಮತ್ತು ಬಿ ದರ್ಜೆಯ ವೃತ್ತಿನಿರತ ಹುದ್ದೆಗಳ ನೇಮಕಾತಿಗೂ ಮೌಖಿಕ ಸಂದರ್ಶನದ ಅಗತ್ಯವಿಲ್ಲ ಎಂದು ತೀರ್ಮಾನ ಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ನವೆಂಬರ್ 3,4,5 ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಚಿವರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಈ ಹಿಂದೆ ಮಾಡಿದ್ದ ಕಾನೂನನ್ನು ತಿದ್ದುಪಡಿ ಮಾಡಲಾಗಿದ್ದು ಇನ್ನು ಮುಂದೆ ವಿಧಾನಸಭೆ ಇಲ್ಲವೇ ವಿಧಾನಪರಿಷತ್ತಿನ ಯಾವುದೇ ಸದಸ್ಯರು ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಳ್ಳಲು ಅವಕಾಶವಿದೆ ಎಂದರು.ಹೀಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿ ನೇಮಕಗೊಳ್ಳುವವರಿಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನವನ್ನು ನೀಡಲಾಗುವುದು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ವಿವರಿಸಿದರು.
ಹಿಂದಿನ ಸರ್ಕಾರ ವಾಜಪೇಯಿ ವಸತಿ ಯೋಜನೆ,ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಆರ್ಥಿಕ ದುರ್ಬಲರಿಗೆ ಒಂದು ಲಕ್ಷ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಜಾರಿಗೆ ತಂದಿತ್ತು.ಆದರೆ ಇದಕ್ಕಾಗಿ ವಿಧಿಸಲಾದ ಕೆಲ ನಿಯಮಗಳನ್ನು ಬದಲಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.
ಮೊದಲನೆಯದಾಗಿ ಈ ಯೋಜನೆಯಡಿ ಮನೆಯನ್ನು ಪಡೆಯಬೇಕಾದ ಫಲಾನುಭವಿಯ ಆದಾಯ ಮಿತಿಯನ್ನು 87,500 ರೂಪಾಯಿಗಳೆಂದು ನಿಗದಿ ಮಾಡಲಾಗಿತ್ತು.ಆದರೆ ನಾವು ಅದನ್ನು ಮೂರು ಲಕ್ಷ ರೂಗಳಿಗೆ ವಿಸ್ತರಿಸಿದ್ದೇವೆ ಎಂದರು.
ಇದೇ ರೀತಿ ಇಂತಹ ಮನೆಗಳನ್ನು ಕಟ್ಟುವಾಗ ಹದಿನಾಲ್ಕು ಅಂತಸ್ತುಗಳವರೆಗೆ ಮನೆ ಕಟ್ಟಲು ಒಪ್ಪಿಗೆ ನೀಡಲಾಗಿತ್ತು.ಈಗಾಗಲೇ 28,754 ಮನೆಗಳನ್ನೂ ನಿರ್ಮಿಸಲಾಗಿದೆ.ಆದರೆ ಇನ್ನು ಮುಂದೆ ನೆಲ ಮಹಡಿ ಸೇರಿದಂತೆ ಒಟ್ಟು ನಾಲ್ಕು ಅಂತಸ್ತುಗಳನ್ನು ಮಾತ್ರ ಕಟ್ಟಲು ನಿರ್ಧರಿಸಲಾಗಿದೆ.
ಹದಿನಾಲ್ಕು ಅಂತಸ್ತುಗಳವರೆಗೆ ಮನೆ ನಿರ್ಮಿಸಿದರೆ ವಾಸ ಮಾಡುವವರಿಗೆ ಬೇರೆ ಬೇರೆ ರೀತಿಯ ಸಮಸ್ಯೆಗಳಾಗಬಹುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಇಂತಹ ತೀರ್ಮಾನಕ್ಕೆ ಬರಲಾಗಿದೆ ಎಂದು ವಿವರಿಸಿದರು.ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ನಲ್ಲಿ ಕನ್ನಡಿಗರಿಗೆ ಶೇಕಡಾ ಐವತ್ತರಷ್ಟು ಸೀಟುಗಳನ್ನು ಮೀಸಲಿಡಬೇಕೆಂದು ಈ ಹಿಂದಿನ ಸರ್ಕಾರ ಕಾನೂನು ಮಾಡಿ ರಾಜ್ಯಪಾಲರಿಗೆ ಕಳಿಸಿತ್ತು.ಆದರೆ ಇದನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.
ಹೀಗಾಗಿ ಭಾಷೆಯ ಆಧಾರದ ಮೇಲೆ ಸೀಟುಗಳ ಮೀಸಲಾತಿ ಕೇಳುವ ಬದಲು ಸಂಸ್ಥೆ ಕರ್ನಾಟಕದಲ್ಲಿದೆ ಎಂಬ ಆಧಾರದ ಮೇಲೆ ಹಾಗೂ ಕರ್ನಾಟಕದಲ್ಲಿ ಹತ್ತು ವರ್ಷಗಳ ಕಾಲ ಓದಿದವರಿಗೆ ಎಂಬ ಕಾರಣಕ್ಕಾಗಿ ಶೇಕಡಾ ಇಪ್ಪತ್ತೈದರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ತಿದ್ದುಪಡಿ ಮಾಡಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗುವುದು ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








