ದಾವಣಗೆರೆ ಶಾಸಕರಿಗಿಲ್ಲ ಸಚಿವರಾಗುವ ಭಾಗ್ಯ..!

ಬಿಜೆಪಿ ಕಾರ್ಯಕರ್ತರಲ್ಲಿ, ಶಾಸಕರ ಬೆಂಬಲಿಗರಲ್ಲಿ ಮಡುಗಟ್ಟಿದ ನಿರಾಸೆ

ದಾವಣಗೆರೆ :

ವಿಶೇಷ ವರದಿ:ವಿನಾಯಕ ಪೂಜಾರ್

      ಬಿಜೆಪಿಯ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆಗೆ ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಮೊದಲನೇ ಹಂತದಲ್ಲಿ ಯಾವುದೇ ಸಚಿವ ಸ್ಥಾನಮಾನ ನೀಡಿಲ್ಲ. ಹೀಗಾಗಿ ಬಿಜೆಪಿ ಶಾಸಕರುಗಳ ಬೆಂಬಲಿಗರಲ್ಲಿ ಹಾಗೂ ಕಾರ್ಯಕರ್ತರಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ.

     ಜಿಲ್ಲೆಯ ಏಳು (ಹರಪನಹಳ್ಳಿ ಹೊರತು ಪಡಿಸಿ) ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಅಲ್ಲದೇ, ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ಕರ್ನಾಟಕದ ಕೇಂದ್ರ ಬಿಂದು ಆಗಿರುವ ದಾವಣಗೆರೆ ಜಿಲ್ಲೆಯನ್ನು ಬಿಜೆಪಿಯ ಭದ್ರ ಕೋಟೆ ಎಂಬುದಾಗಿಯೇ ಬಣ್ಣಿಸಿಕೊಂಡು ಬರಲಾಗುತ್ತಿದೆ.

       ಬಿಜೆಪಿಗೆ ಅಷ್ಟೆಲ್ಲಾ ಕೊಡುಗೆ ನೀಡಿರುವ ದಾವಣಗೆರೆ ಜಿಲ್ಲೆಗೆ, ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದಿರುವುದರಿಂದ, ತಮ್ಮ ನೆಚ್ಚಿನ ಶಾಸಕರಿಗೆ ಸಚಿವಗಿರಿ ಸಿಕ್ಕರೇ ತಮ್ಮ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದೆಂಬ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಶಾಸಕರ ಬೆಂಬಲಿಗರಲ್ಲಿ ಬೇಸರ ಉಂಟು ಮಾಡಿದೆ.

      2008ರಲ್ಲಿ ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಪಕ್ಷೇತರ ಶಾಸಕರ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್‍ಗೆ ಕೃಷಿ ಮತ್ತು ತೋಟಗಾರಿಕೆ ಸಚಿವ ಸ್ಥಾನ ಹಾಗೂ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿಗೆ ಕಂದಾಯ ಸಚಿವ ಸ್ಥಾನ ಅನಾಯಾಸವಾಗಿ ದಕ್ಕಿಬಿಟ್ಟಿತ್ತು. ಆದರೆ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ರೆಸಾರ್ಟ್ ರಾಜಕಾರಣ ಆರಂಭಿಸಿ, ಅವರೂ ಸಹ ಅಬಕಾರಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಬಿಟ್ಟಿದ್ದರು. ಹೀಗಾಗಿ ಆ ಅವಧಿಯಲ್ಲಿ ಮೂವರು ಬಿಜೆಪಿ ಶಾಸಕರು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಪಡೆದಿದ್ದರು.

      ಆದರೆ, ಈ ಬಾರಿ ಜಿಲ್ಲೆಯ ಐವರು ಶಾಸಕರ ಪೈಕಿ ಒಬ್ಬರಿಗೂ ಸಚಿವ ಸ್ಥಾನ ನೀಡದಿರುವುದು. ಅದರಲ್ಲೂ ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್ ಹಾಗೂ ರಂಗು ರಂಗಿನ ರಾಜಕಾರಣಿ ಎಂಬುದಾಗಿಯೇ ಖ್ಯಾತಿ ಪಡೆದಿರುವ ಎಂ.ಪಿ.ರೇಣುಕಾಚಾರ್ಯರಿಗೂ ಬಿಎಸ್‍ವೈ ಸಚಿವ ಸಂಪುಟದಲ್ಲಿ ಮಾನ್ಯತೆ ಸಿಗದಿರುವುದು ಜಿಲ್ಲೆಯ ಐವರು ಶಾಸಕರುಗಳ ಅರ್ಹತೆಯನ್ನೇ ಪ್ರಶ್ನಿಸುವಂತಾಗಿದೆ ಎನ್ನುತ್ತಾರೆ ಹೆಸರು ಹೆಳಲಿಚ್ಚಸದ ಬಿಜೆಪಿಯ ಹಿರಿಯ ಮುಖಂಡರೊಬ್ಬರು.

    ಚನ್ನಗಿರಿಯ ಮಾಡಾಳ ವಿರೂಪಾಕ್ಷಪ್ಪ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೆ, ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೋ.ಲಿಂಗಣ್ಣ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಪಕ್ಷ ನಿಷ್ಠರಾಗಿರುವ ಹಿರಿಯ ಶಾಸಕ ರವೀಂದ್ರನಾಥ ಅವರಿಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸವಿತ್ತು. ಅಲ್ಲದೇ, ಬಿ.ಎಸ್.ಯಡಿಯೂರಪ್ಪ ಅವರ ಅಪ್ತ ರೇಣುಕಾಚಾರ್ಯ ಅವರು ಸಚಿವರಾಗಲು ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ಬಿಜೆಪಿ ಹೈ ಕಮಾಂಡ್ ಯಾರಿಗೂ ಮಣೆ ಹಾಕದಿರುವುದರಿಂದ ಬಿಜೆಪಿ ಶಾಸಕರಲ್ಲಿಯೇ ಅಸಮಾನಧ ಹೊಗೆ ಒಳಗೊಳಗೆ ಎಳುತ್ತಿದೆ.

     ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯ ಮೂವರು ಶಾಸಕರಿಗೆ ಸಚಿವ ಸ್ಥಾನ, ಇಬ್ಬರಿಗೆ ನಿಗಮ ಮಂಡಳಿ ಸ್ಥಾನ, ಒಬ್ಬರಿಗೆ ಮುಖ್ಯಸಚೇತಕ ಸ್ಥಾನ ನೀಡಲಾಗಿತ್ತು. ಅದರೆ ಈ ಬಾರಿ ಜಿಲ್ಲೆಯ ಯಾವುದೇ ಶಾಸಕರಿಗೂ ಅವಕಾಶ ನೀಡದೆ ದಾವಣಗೆರೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಮೈತ್ರಿಯಲ್ಲೂ ಇಲ್ಲ:

     ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಇಬ್ಬರೂ ಶಾಸಕರಿದ್ದರೂ ಸಚಿವ ಸ್ಥಾನ ನೀಡದೆ ತುಮಕೂರಿನ ಶ್ರೀನಿವಾಸ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಮೈತ್ರಿ ಅವಧಿಯಲ್ಲೂ ಸಚಿವ ಸ್ಥಾನ ಸಿಗದೆ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿದ್ದವು. ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೇರೆಯ ಜಿಲ್ಲೆಯವರಿಗೇ ಜಿಲ್ಲೆಯ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap