ತುಮಕೂರು
ಕಂಕಣ ಸೂರ್ಯಗ್ರಹಣದ ಪರಿಣಾಮ ತುಮಕೂರು ನಗರದ ಸಾಮಾನ್ಯ ಜನಜೀವನ ಗ್ರಹಣಾವಧಿಯಲ್ಲಿ ಬಹುತೇಕ ಸ್ಥಬ್ದಗೊಂಡಿತು.
ನಗರದಾದ್ಯಂತ ಜನಸಂಚಾರ, ವಾಹನ ಸಂಚಾರ ಬಹುತೇಕ ಸ್ಥಗಿತವಾಯಿತು. ಅಂಗಡಿ ಮಳಿಗೆಗಳೂ ಮುಚ್ಚಿದ್ದವು. ಬೆಳಗ್ಗೆ 8 ರಿಂದ 11-10 ರವರೆಗೂ ಇಂತಹುದೊಂದು ವಾತಾವರಣ ಕಂಡುಬಂದಿತು. 9-30 ರ ಸುಮಾರಿನಲ್ಲಿ ಕಂಕಣ ಸೂರ್ಯಗ್ರಹಣ ಸಂಭವಿಸುವಾಗ ಸೂರ್ಯನ ಪ್ರಖರತೆ ಸಂಪೂರ್ಣ ಕ್ಷೀಣವಾಗಿ, ಮಂದಬೆಳಕು ಉಂಟಾಯಿತು. ಜನರು ನಿಬ್ಬೆರಗಾದರು.
ಶೆಟ್ಟಿಹಳ್ಳಿಯ ರಿಂಗ್ ರಸ್ತೆಯಲ್ಲಿ ಗ್ರಹಣಾವಧಿಯಲ್ಲಿ ವಾಹನಸಂಚಾರ ವಿರಳವಾಗಿತ್ತು. ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಕುತೂಹಲದಿಂದ ಆಗಸದತ್ತ ನೋಡುತ್ತಿದ್ದರು. ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಾಜರಿದ್ದ ಪುಟಾಣಿಗಳು ಅಚ್ಚರಿಯಿಂದ ಆಕಾಶ ವೀಕ್ಷಿಸುತ್ತಿದ್ದರು. ಬಟವಾಡಿ ವೃತ್ತದ ಬಳಿ ಬಿ.ಎಚ್.ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜನ-ವಾಹನ ಸಂಚಾರ ಕ್ಷೀಣಿಸಿತ್ತು. ಬಹುತೇಕ ಅಂಗಡಿಗಳು ತೆರೆದಿರಲಿಲ್ಲ. ಸದಾ ಗಿಜಿಗಿಡುತ್ತಿದ್ದ ತುಮಕೂರು ವಿಶ್ವವಿದ್ಯಾನಿಲಯದ ಮುಂದಿನ ಭಾಗ ಬಿಕೋ ಎನ್ನುತ್ತಿತ್ತು.
ಕೋತಿತೋಪು ರಸ್ತೆ, ಅಮಾನಿಕೆರೆ ರಸ್ತೆಯೂ ಖಾಲಿ-ಖಾಲಿಯಾಗಿತ್ತು. ವೇಳೆ 10 ಗಂಟೆಯಾದರೂ ಜಿಲ್ಲಾಧಿಕಾರಿ ಕಚೇರಿಯಿರುವ ಮಿನಿವಿಧಾನಸೌಧ, ನ್ಯಾಯಾಲಯ ಆವರಣ, ತಾಲ್ಲೂಕು ಪಂಚಾಯಿತಿ ಕಚೇರಿ ಸುತ್ತಮುತ್ತ ಜನಸಂಚಾರ ಇರಲೇಇಲ್ಲ. ಸದಾ ಗಿಜಿಗಿಜಿಯಂತಿರುವ ರಾಮಪ್ಪ ವೃತ್ತ (ಗುಂಚಿವೃತ್ತ)ದ ಎಲ್ಲ ಅಂಗಡಿಗಳೂ ಇನ್ನೂ ಮುಚ್ಚಲ್ಪಟ್ಟಿದ್ದವು. ಮಹಾತ್ಮಗಾಂಧಿ ರಸ್ತೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಿರಲಿಲ್ಲ. ಪಕ್ಕದ ವಿವೇಕಾನಂದ ರಸ್ತೆ, ಜನರಲ್ ಕಾರಿಯಪ್ಪ ರಸ್ತೆಯ ಪರಿಸ್ಥಿತಿಯೂ ಹೀಗೇ ಇತ್ತು.
ಬಿ.ಎಚ್. ರಸ್ತೆಯಲ್ಲೂ ಅಂಗಡಿ ಮಳಿಗೆಗಳು ತೆರೆದಿರಲಿಲ್ಲ. ಡಾ.ಎಸ್.ರಾಧಾಕೃಷ್ಣನ್ ರಸ್ತೆ, ಸೋಮೇಶ್ವರಪುರಂ ಮುಖ್ಯರಸ್ತೆ, ಎಸ್.ಐ.ಟಿ. ಮುಖ್ಯರಸ್ತೆಗಳಲ್ಲೂ ಜನ-ವಾಹನ ಸಂಚಾರ ಕ್ಷೀಣಿಸಿತ್ತಲ್ಲದೆ, ಅಂಗಡಿಗಳು ಮುಚ್ಚಿದ್ದವು. ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲೂ ಇದೇ ಸ್ಥಿತಿ ಇತ್ತು.
ಬಿ.ಎಚ್.ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು, ಸಿಟಿ ಬಸ್‍ಗಳು ಕಂಡುಬಂದವಾದರೂ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆಟೋರಿಕ್ಷಾಗಳ ಸಂಚಾರವೂ ಮಿತಗೊಂಡಿತ್ತು. ರಸ್ತೆ-ರಸ್ತೆಗಳಲ್ಲೂ ದಿನವೂ ಬೆಳಗಿನ ಹೊತ್ತಿನಲ್ಲಿ ಕಾಣಿಸುತ್ತಿದ್ದ ಖಾಸಗಿ ಶಾಲೆಗಳ ಬಸ್ (ಸ್ಕೂಲ್ ಬಸ್)ಗಳು ಈ ದಿನ ಮಾತ್ರ ಕಾಣಿಸಲಿಲ್ಲ.
ಮೇಲ್ಕಂಡ ಎಲ್ಲ ರಸ್ತೆ-ಬಡಾವಣೆಗಳಲ್ಲೂ ಸಣ್ಣಪುಟ್ಟ ಹೋಟೆಲ್‍ಗಳು, ಗೂಡಂಗಡಿಗಳು ಮಾತ್ರ ತೆರೆದಿದ್ದವು. ಅಲ್ಲೆಲ್ಲ ಬೆರಳೆಣಿಕೆಯ ಜನರು ಕಾಫಿ-ಟೀ- ಉಪಾಹಾರ ಸೇವಿಸುತ್ತಿದ್ದುದು ಕಂಡುಬಂದಿತು. ಅಲ್ಲಲ್ಲಿ ಔಷಧಿ ಅಂಗಡಿಗಳು ತೆರೆದಿದ್ದವು. ಗ್ರಹಣದ ಕಾರಣದಿಂದ ದೇವಾಲಯಗಳೂ ತೆರೆದಿರಲಿಲ್ಲ.
ಬಿರುಸಿನ ಸಿದ್ಧತೆ
ಇವೆಲ್ಲದರ ನಡುವೆ, ತುಮಕೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಸಮಾರಂಭದ ಸ್ಥಳವಾದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾತ್ರ ಬಿರುಸಿನಿಂದ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದುದು ಕಂಡುಬಂದಿತು. ಅಲ್ಲೇ ಪಕ್ಕದ ಡಾ.ಎಸ್.ರಾಧಾಕೃಷ್ಣನ್ ರಸ್ತೆಯ ಅಭಿವೃದ್ಧಿ ಕೆಲಸ ಶರವೇಗದಲ್ಲಿ ಸಾಗುತ್ತಿತ್ತು. ಅದೇ ರೀತಿ ನಗರದ ವಿವಿಧ ರಸ್ತೆಗಳಲ್ಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ತಮ್ಮಪಾಡಿಗೆ ತಾವು ರಸ್ತೆಗಳ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದುದೂ ಕಾಣಿಸಿತು. ಜೊತೆಗೆ ಎಲ್ಲೆಡೆ ಪೊಲೀಸ್ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಈ ಅನಿವಾರ್ಯ ಕರ್ತವ್ಯಗಳಿಗೆ ಗ್ರಹಣಕಾಲವು ಅಡ್ಡಿಯಾಗಲಿಲ್ಲ.
ಬಳಿಕ ಯಥಾಸ್ಥಿತಿಗೆ
ಸೂರ್ಯಗ್ರಹಣ ಮುಗಿದ ಬಳಿಕ ಕ್ರಮೇಣ ನಗರದ ಜನಜೀವನ ಯಥಾಸ್ಥಿತಿಗೆ ಮರಳಿತು. ಜನಸಂಚಾರ, ವಾಹನ ಸಂಚಾರ ಎಂದಿನಂತೆ ಆರಂಭಗೊಂಡಿತು. ಅಂಗಡಿ ಮಳಿಗೆಗಳು ತೆರೆದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ