ದಾವಣಗೆರೆ:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡಿ, ರಾಜ್ಯ ರಾಜಕೀಯದಲ್ಲಿ ಇಷ್ಟಲ್ಲಾ ಗೊಂದಲ ನಡೆದರೂ ತಮಗೆ ಬೆಂಗಳೂರಿಗೆ ಬರುವಂತೆ ಯಾರೂ ಸಹ ಕರೆದಿಲ್ಲ. ಯಾರು ಕರೆಯದೇ ಬೆಂಗಳೂರಿಗೆ ಹೋಗಿ ನಾನೇನು ಮಾಡಲಿ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿಗೆ ಬರುವಂತೆ ಯಾರೂ ತಮಗೆ ಕರೆದಿಲ್ಲ. ತಾವೂ ಸಹ ಬೆಂಗಳೂರಿಗೆ ಹೋಗುವುದಿಲ್ಲ. ಯಾರೂ ಕರೆಯದೇ ನಾನು ಅಲ್ಲಿಗೆ ಹೋಗಿ ಏನು ಮಾಡಲಿ ಹೇಳಿ? ಎಂದು ಮರು ಪ್ರಶ್ನೆ ಹಾಕಿದರು.
ಮೈತ್ರಿ ಶಾಸಕರ ರಾಜೀನಾಮೆ ವಿಚಾರ ಏನಾಗುತ್ತೋ, ಬೀಡುತ್ತೋ ಗೊತ್ತಿಲ್ಲ. ಎಲ್ಲವೂ ಸರಿ ಹೋಗಬಹುದು. ಆದರೆ, ಮಾಧ್ಯಮಗಳೇ ಕೆಲ ವಿಚಾರಗಳನ್ನು ಹುಟ್ಟು ಹಾಕುತ್ತಿವೆ ಎಂದು ದೂರಿದ ಅವರು, ಸದ್ಯಕ್ಕೆ ಸರ್ಕಾರದ ಸ್ಥಿತಿ ಏನಾಗಬಹುದೆಂಬುದನ್ನು ಹೇಳುವುದಂತೂ ಕಷ್ಟ. ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುತ್ತಾರೆಂಬುದು ಶುದ್ಧ ಸುಳ್ಳು. ಸಿದ್ದರಾಮಯ್ಯಗೆ ಯಾರು ಸಿಎಂ ಮಾಡುತ್ತಾರೆ ? ಪಕ್ಷಕ್ಕೆ ಮೆಜಾರಿಟಿ ಸಿಗಲಿ ಆಗ ನೋಡೋಣ. ಮಲ್ಲಿಕಾರ್ಜುನ ಖರ್ಗೆ ಸಹ ಸಿಎಂ ಆಗುವುದಿಲ್ಲ. ಕುಮಾರಸ್ವಾಮಿಯೇ ಸಿಎಂ ಆಗಿ ಮುಂದುವರಿಯುವ ಸಾಧ್ಯತೆ ಇದೆ ಎಂದರು.
ಮಾಧ್ಯಮದವರೂ ಪದೇಪದೇ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಬಗ್ಗೆಯೇ ಪ್ರಶ್ನೆ ಕೇಳುವುದನ್ನು ನಿಲ್ಲಿಸಿ. ಇವರ ಸುದ್ದಿ ಯಾಕೆ? ಇವರೆಲ್ಲಾ ಹೊಡೆದಾಡಿಕೊಳ್ಳುತ್ತಾರೆ. ನಾವು, ನೀವು ನೋಡಿಕೊಳ್ಳುತ್ತಾ ಇರೋಣ ಅಷ್ಟೇ ಎಂದ ಅವರು, ರಾಮಲಿಂಗ ರೆಡ್ಡಿ ನನ್ನಂತೆಯೇ ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲೊಬ್ಬರು. ಅಂತಹ ಹಿರಿಯ ನಾಯಕ ರಾಜೀನಾಮೆಗೆ ಮುಂದಾಗಬಾರದಿತ್ತು ಎಂದರು.
ರಾಮಲಿಂಗ ರೆಡ್ಡಿಯಂತಹವರು ಹೋಗಿದ್ದು ಅನ್ಯಾಯ. ಬೇರೆಯವರು ಯಾರೇ ಹೋಗಲಿ ಅದರ ಬಗ್ಗೆ ಚಿಂತೆ ಇಲ್ಲ. ಆರೇಳು ಸಲ ಚುನಾವಣೆಗೆ ಹೋಗಿದ್ದ, ಸಚಿವರಾಗಿದ್ದವರು, ಮಗಳನ್ನು ಶಾಸಕಿ ಮಾಡಿರುವ ರಾಮಲಿಂಗಾರೆಡ್ಡಿ ರಾಜೀನಾಮೆಗೆ ಮುಂದಾಗಬಾರದಿತ್ತು. ಆದರೆ, ಆಸೆಗೆ ಬಿದ್ದು ಹೀಗೆ ಮಾಡಿರಬಹುದು ಎಂದು ಹೇಳಿದರು.