ಚಿಕ್ಕನಾಯಕನಹಳ್ಳಿ
ರಾಜ್ಯದ ಯಾರೊಬ್ಬರು ಮಾಸಿಕ ಪಿಂಚಣಿಗಳಿಗಾಗಿ ಅಲೆದಾಡಬಾರದೆಂದು ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದ್ದು, ಜನರ ಯಾವುದೇ ಅರ್ಜಿ ಇಲ್ಲದೆ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ವ್ಯವಸ್ಥೆ ಬರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಮಿನಿ ವಿಧಾನಸೌಧದ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ 5ಸಾವಿರ ಜನಕ್ಕೆ ಯಾವುದೇ ಅರ್ಜಿ ಇಲ್ಲದೆ ಪೆಂಕ್ಷನ್ ಹಣ ಕೊಟ್ಟಿದ್ದೇವೆ, ಪ್ರತಿ ತಿಂಗಳು ರಾಜ್ಯ ಸರ್ಕಾರ 7ಸಾವಿರ ಕೋಟಿ ರೂ ಪಿಂಚಣಿ ಹಣವನ್ನು ಕೊಡುತ್ತಿದೆ ಎಂದರು.ನಮ್ಮ ರಾಜ್ಯದಲ್ಲಿ ಯಾವುದೇ ನೌಕರರಿಗೆ ವೇತನ ಕಡಿತಗೊಳಿಸಿಲ್ಲ, ನಾನೂ ಕಂದಾಯ ಸಚಿವನಾದ ಮೇಲೆ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕನಿಷ್ಠ 5ಕೋಟಿ ಹಣವನ್ನು ನೀಡಿದ್ದೇನೆ, ಬೆಳಗಾವಿ ಜಿಲ್ಲಾಧಿಕಾರಿಗಳ ಖಾತೆಗೆ 400ಕೋಟಿ ಹಣವನ್ನು ಕೊಟ್ಟಿದ್ದೇನೆ, ಈ ಹಣದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ಹಾಗೂ ತೊಂದರೆಯಾಗಿದ್ದರೆ ಈ ಹಣವನ್ನು ಬಳಸಿಕೊಳ್ಳಬಹುದು ಎಂದರು.
ಕೇಂದ್ರ ಸರ್ಕಾರವೂ ಸಹ 2ನೇ ಕಂತು ಕೊಡಬೇಕಾಗಿತ್ತು ಅದನ್ನು 2 ತಿಂಗಳ ಮುಂಚೆಯೇ 395ಕೋಟಿ ಹಣವನ್ನು ನೀಡಿದೆ, ಮನಮೋಹನ್ ಸಿಂಗ್ ಸರ್ಕಾರವು ಕೊಟ್ಟ ಅನುದಾನಕ್ಕಿಂತ ಎರಡು ಪಟ್ಟು ಹೆಚ್ಚು ಮೋದಿ ಸರ್ಕಾರವು ಪರಿಹಾರ ಹಣವನ್ನು ನೀಡಿದೆ ಹಾಗಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಯಾವುದೇ ತಾರತಮ್ಯ ಮಾಡಿಲ್ಲ ಎಂದರು.
ಭೂ ಕಾಯ್ದಿಯ 79ಎ, ಬಿ ಯನ್ನು ನಾವು ತೆಗೆದಿದ್ದೇವೆ, ಯಾವುದೇ ವಿದ್ಯಾವಂತರು ಮರಳಿ ಹಳ್ಳಿಗಳಿಗೆ ಬಂದು ಕೃಷಿ ಚಟುವಟಿಕೆಗಳನ್ನು ಮಾಡಿದ್ದಲ್ಲಿ ಅವರಿಗೆ ಪ್ರೋತ್ಸಾಹವನ್ನು ನೀಡುತ್ತೇವೆ, ಎಲ್ಲಿ ಮಾವು ಬೆಳೆಯುತ್ತಾರೋ ಅಲ್ಲಿ ಮಾವಿನ ರಸ ತೆಗೆಯುವ ಕಾರ್ಖಾನೆ, ಎಲ್ಲಿ ಟೊಮೊಟೋ ಬೆಳೆಯುತ್ತಾರೋ ಅಲ್ಲಿ ಟೊಮೋಟೋ ಕೆಚಪ್ ಮಾಡುವ ಕಾರ್ಖಾನೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ ಹಾಗೂ ಕೃಷಿ ಮತ್ತು ಕಾರ್ಖಾನೆ ಇವೆರಡೂ ಸಹ ಒಟ್ಟಿಗೆ ಅಭಿವೃದ್ದಿಯಾಗುತ್ತದೆ ಎಂದರಲ್ಲದೆ, ಈ ಹಿಂದೆ ರಾಜ್ಯದಲ್ಲಿ ಬಹಳ ಕಡಿಮೆ ಬಿತ್ತನೆಯಾಗಿತ್ತು ಆದರೆ ಈ ಬಾರಿ ಕೆಲವೆಡೆ ಶೇ.98 ಬಿತ್ತನೆಯಾಗಿದೆ ಇನ್ನೂ ಕೆಲವು ಕಡೆ ಶೇ. ನೂರಕ್ಕೂ ಹೆಚ್ಚಿ ಭಿತ್ತನೆಯಾಗಿದೆ, ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ ಎಂದರು.
ಮಿನಿ ವಿಧಾನಸೌಧ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಯನ್ನು ಕೊಟ್ಟಿದ್ದೇನೆ ಇದರ ಅಂದಾಜು ಮೊತ್ತ 14.5 ಕೋಟಿ ಆಗಲಿದೆ, ಈ ಕಟ್ಟಡದ ಕೆಲಸ ಪ್ರಾರಂಭ ಮಾಡಲು ಯಾವುದೇ ಅಡೆತಡೆ ಇಲ್ಲ, ಪಿಡಬ್ಲ್ಯೂಡಿ ಇಲಾಖೆಯವರು ಕೆಲಸವನ್ನು ಬೇಗನೆ ಶುರು ಮಾಡಿ 18ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸೂಚಿಸದರಲ್ಲದೆ ಎಲ್ಲಾ ಇಲಾಖೆಗಳು ಈ ಕಟ್ಟಡಕ್ಕೆ ಬಂದರೆ ಸಾರ್ವಜನಿಕರಿಗೆ ಸಹಾಯವಾಗುತ್ತದೆ.
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಈಗಿನ ತಾಲ್ಲೂಕು ಕಛೇರಿ ಆರಂಭವಾಗಿ 40 ವರ್ಷಗಳು ಕಳೆಯಿತು, ಇದನ್ನು ಕಾರ್ಯಾರಂಭ ಮಾಡಿ 30 ವರ್ಷವಾಯಿತು, ಕಟ್ಟಡ ಹಳೆಯದಾಗುತ್ತಾ ಬಿರುಕು ಇತ್ತು, ಹಾಗಾಗಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರಿಂದ ಸರ್ಕಾರ ರಿಪೇರಿಗೆಂದು 30ಲಕ್ಷರೂ ಹಣವನ್ನೂ ನೀಡಿತ್ತು ಎಂದರಲ್ಲದೆ, ಈಗ ನೂತನ ಸುಂದರವಾದ ತಾಲ್ಲೂಕು ಕಛೇರಿಗೆ ಬಳಕೆಯಾಗುವ ಮಿನಿ ವಿಧಾನ ಸೌಧಕ್ಕಾಗಿ 14.5ಕೋಟಿ ಹಣವನ್ನು ಕಂದಾಯ ಸಚಿವ ಅಶೋಕ್ ರವರು ನೀಡಿ ಸಹಕಾರ ಮಾಡಿದ್ದಾರೆ ಎಂದರು.
ಅನೇಕ ಕಛೇರಿಗಳು ಬೇರೆ ಬೇರೆ ಕಡೆ ಇದ್ದುದರಿಂದ ಜನರು ಅಲೆದಾಡುತ್ತಿದ್ದರು, ನೂತನ ಕಟ್ಟಡ ಶೀಘ್ರ ನಿರ್ಮಾಣವಾದರೆ ತಾಲ್ಲೂಕಿನ ಎಲ್ಲಾ ಕಛೇರಿಗಳನ್ನು ಈ ಕಟ್ಟಡಲ್ಲೇ ಇರಿಸಿ ಒಂದೇ ಕಡೆ ತಾಲ್ಲೂಕು ಆಡಳಿತ ಇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು,
ನೂತನ ಕಟ್ಟಡದಿಂದ ಸರ್ಕಾರಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಚಿವ ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಪೊಲಿಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ, ಡಿವೈಎಸ್ಪಿ ಚಂದನ್ ಕುಮಾರ್, ತಾ.ಪಂ.ಅಧ್ಯಕ್ಷೆ ಜಯಮ್ಮ, ಜಿ.ಪಂ.ಸದಸ್ಯೆ ಮಂಜುಳಮ್ಮ, ಸದಸ್ಯ ಸಿಂಗದಹಳ್ಳಿ ರಾಜ್ ಕುಮಾರ್, ಶೈಲಾ ಶಶಿಧರ್, ಕೇಶವಮೂರ್ತಿ, ಪುರಸಭಾ ಸದಸ್ಯರಾದ ಜಯಮ್ಮರಂಗಸ್ವಾಮಯ್ಯ, ಲಕ್ಷ್ಮೀಪಾಂಡುರಂಗಯ್ಯ, ಉಮಾ, ತಹಶೀಲ್ದಾರ್ ತೇಜಸ್ವಿನಿ, ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
