ನ್ಯಾಯಬೆಲೆ ಅಂಗಡಿಗಳಲ್ಲಿ ಬೇರೆ ವಸ್ತು ಮಾರಾಟ ಮಾಡುವಂತಿಲ್ಲ;ಶಶಿಕಲಾ ಜೊಲ್ಲೆ

ಚಿತ್ರದುರ್ಗ:
    ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದ ಸರಬರಾಜಾಗುವ ಪಡಿತರ ಆಹಾರ ಧಾನ್ಯ ಸಾಮಗ್ರಿ ಹೊರತುಪಡಿಸಿ, ಇತರೆ ವಸ್ತು, ಸಾಮಗ್ರಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಶಶಿಕಲಾ ಅ ಜೊಲ್ಲೆ ಅವರು ಕಟ್ಟಪ್ಪಣೆ ಮಾಡಿದರು.
 
   ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಚಿತ್ರದುರ್ಗ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಪಡಿತರ ಆಹಾರ ಧಾನ್ಯಗಳ ಜೊತೆಗೆ ಒತ್ತಾಯಪೂರ್ವಕವಾಗಿ ಸೋಪು ಮತ್ತಿತರೆ ವಸ್ತು, ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅಲ್ಲದೆ ಪ್ರತಿ ಪಡಿತರ ಚೀಟಿಗೆ 10 ರಿಂದ 20 ರೂ. ವಸೂಲಿ ಮಾಡುತ್ತಿರುವುದಾಗಿ ಸಾಕಷ್ಟು ದೂರುಗಳು ಬಂದಿವೆ.  ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದ ಪೂರೈಕೆ ಮಾಡಲಾಗುವ ಪಡಿತರ ಸಾಮಗ್ರಿಗಳನ್ನು ಹೊರತುಪಡಿಸಿ, ಇತರೆ ಯಾವುದೇ ಸಾಮಗ್ರಿಗಳನ್ನು ಮಾರಾಟ ಮಾಡುವಂತಿಲ್ಲ ಎಂದರು
 
     ಒಂದು ವೇಳೆ ನ್ಯಾಯಬೆಲೆ ಅಂಗಡಿಯವರು ತಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ, ಅದನ್ನು ತಮ್ಮ ಗಮನಕ್ಕೆ ತಂದಲ್ಲಿ, ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು.  ಅಲ್ಲದೆ ಪ್ರತಿ ಪಡಿತರ ಕಾರ್ಡ್‍ಗೆ ಅಕ್ರಮವಾಗಿ 10 ರಿಂದ 20 ರೂ. ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಸಾಬೀತಾದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಕಾರರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು
 
     ಆಹಾರ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅನೇಕ ರೀತಿಯ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಗ್ರಾಹಕರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು. ಹಣಕೊಟ್ಟು ಪಡಿತರ ಪಡೆಯುವ ಕೆಲಸ ನಡೆಯುತ್ತಿದೆ. ಶ್ರೀಮಂತ ವ್ಯಕ್ತಿಗಳು ಕೂಡ ಬಿಪಿಎಲ್ ಪಡಿತರ ಚೀಟಿ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.
    ಎಪಿಎಲ್ ಕಾರ್ಡ್ ಇದ್ದವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ ಜ.31ರೊಳಗೆ ಸ್ವ ಇಚ್ಚೆಯಿಂದ ಇಲಾಖೆಗೆ ಒಪ್ಪಿಸಿದರೆ, ಬಿಪಿಎಲ್ ವಜಾಗೊಳಿಸಿ ಎಪಿಎಲ್ ಕಾರ್ಡ್ ಕೊಡುವ ವ್ಯವಸ್ಥೆ ಮಾಡಿಕೊಡಲಾಗುವುದು. ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡದಿದ್ದರೆ ಅಂತಹವರಿಗೆ ದಂಡ ವಿಧಿಸಿ, ಎಷ್ಟು ವರ್ಷಗಳವರೆಗೂ ಬಿಪಿಎಲ್ ಕಾರ್ಡ್ ಬಳಕೆ ಮಾಡಿದ್ದರೋ ಅಷ್ಟು ಲೆಕ್ಕ ಹಾಕಿ ದಂಡ ವಸೂಲಿ ಮಾಡಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.  
   
     ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap