ಮದಲೂರು ಕೆರೆಗೆ ಹೇಮೆ ಹರಿಸುವ ಇಚ್ಚಾಶಕ್ತಿ ಜನಪ್ರತಿನಿಧಿಗಳಿಗಿಲ್ಲವೇ…..?

ಶಿರಾ:

ವಿಶೇಷ ವರದಿ :ಬರಗೂರು ವಿರೂಪಾಕ್ಷ

    ಬರಡು ನೆಲದ ಶಿರಾ ಭಾಗದ ಈ ನಮ್ಮ ಜನಪ್ರತಿನಿಧಿಗಳೇ ಹೀಗೆ….ಚುನಾವಣೆ ಬಂದಾಗ ನೀರಿನ ನೆಪದಲ್ಲಿ ಗರಿಗೆದರಿ ಕೂತವರು ಚುನಾವಣೆ ಮುಗಿದು ಅಧಿಕಾರದ ಲಾಲಸೆಯಲ್ಲಿ ತೇಲುವತನಕವೂ ಮದಲೂರು ಕೆರೆಯನ್ನೇ ಮುಂದು ಮಾಡಿಕೊಳ್ಳುವ ಇವರು ಚುನಾವಣೆಯ ನಂತರ ಮದಲೂರು ಹೆಸರಿನ ಬಗ್ಗೆ ಗಂಟಲು ಕಟ್ಟಿಕೊಂಡಂತೆ ವರ್ತಿಸುತ್ತಾರೆ.

    ಮದಲೂರು ಕೆರೆ ಶಿರಾ ಭಾಗದ ಜೀವನಾಡಿ, ಮದಲೂರು ಕೆರೆಗೆ ಹೇಮೆ ಹರಿಸುವತನಕವೂ ವಿರಮಿಸುವುದಿಲ್ಲ, ಈ ಕೆರೆಗೆ ನೀರು ಹರಿಸುವುದೇ ನಮ್ಮ ಧ್ಯೇಯ, ನೀರು ಹರಿಸದಿದ್ದರೆ ಪಾದಯಾತ್ರೆ ಮಾಡುತ್ತೇವೆ….ಎಂಬಂತಹ ಹೇಳಿಕೆಗಳ ಮಹಾಪೂರದ ಭರವಸೆಗಳನ್ನು ನೀಡಿ ಮದಲೂರು ಕೆರೆಯ ಬಗ್ಗೆ ಎಲ್ಲಿಲ್ಲದ ಪ್ರೀತಿ ತೋರಿಸುವ ನಮ್ಮ ಜನಪ್ರತಿನಿಧಿಗಳು ಸದರಿ ಕೆರೆಯ ನೆಪದಲ್ಲಿ ಶಿರಾ ಕ್ಷೇತ್ರದ ಮತದಾರನ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಮರು ಚುನಾವಣೆಯವರೆಗೂ ಮದಲೂರು ಕೆರೆಯ ಬಗ್ಗೆ ಸೊಲ್ಲೆತ್ತದೆ ಜಾಣತನವನ್ನು ಮೆರೆಯುವುದು ಸಾಮಾನ್ಯವಾಗಿಬಿಟ್ಟಿದೆ.

    ಇಲ್ಲಿನ ಜನರೂ ಅಷ್ಟೆ ರಾಜಕೀಯ ಮೇಲಾಟಗಳಿಗೆ ಮಾರು ಹೋಗಿ ಮದಲೂರು ಕೆರೆಗೆ ನೀರು ಹರಿಸುವವರಿಗೇ ನಮ್ಮ ಓಟು ಎಂದು ಮದಲೂರು ಹೆಸರು ಹೇಳಿದ ರಾಜಕಾರಣಿಗಳಿಗೆಲ್ಲಾ ಓಟನ್ನು ಒತ್ತಿದ್ದೇ ಒತ್ತಿದ್ದು…. ಮದಲೂರು ಕೆರೆಗೆ ನೀರೆಂದರೆ ಸಾಕು ಅದೆಂತಹುದೋ ಸಮ್ರತೆಯ ಭಾವನೆಗಳು ಜನರ ಭಾವನೆಗಳನ್ನು ಹರಳಿಸಿಬಿಡುತ್ತವೆ.

    ಚುನಾವಣೆಯ ಸಂದರ್ಬದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಿಂದಾ ಹಿಡಿದು ಸ್ಥಳಿಯ ವಿಧಾನಸಭಾ ಚುನಾವಣಾ ಅಭ್ಯರ್ಥಿಯವರೆಗೆ ಎಲ್ಲರೂ ಜಪಿಸುವುದು ಒಂದೇ ಒಂದು ಮಂತ್ರ, ಅದು ಮದಲೂರು ಕೆರೆ ಮಾತ್ರಾ…!. ಬರಡು ನೆಲದ ಜನ ಮದಲೂರು ಕೆರೆಯ ಬಗ್ಗೆ ಕರುಣಾಜನಕ ಸ್ಥಿತಿ ಹೊಂದಲು ಪ್ರಮುಖ ಕಾರಣವೇ ಅಂತರ್ಜಲ. ಮದಲೂರು ಕೆರೆಗೆ ನೀರು ಹರಿದರೆ ಹುಲಿಕುಂಟೆ, ಗೌಡಗೆರೆ ಹಾಗೂ ಕಸಬಾ ಹೋಬಳಿಯ ಒಂದಿಷ್ಟು ಗ್ರಾಮಗಳ ಅಂತರ್ಜಲ ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಮಳೆ ಬಂದು ಮದಲೂರು ಕೆರೆ ತುಂಬಿದರೆ ಸಾಕು ಈ ಎಲ್ಲಾ ಹೋಬಳಿಗಳ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ತುಂಬಿ ತುಳುಕಿದ ನಿದರ್ಶನಗಳೂ ಇವೆ.

    ಈ ಕಾರಣದಿಂದಲೇ ಮದಲೂರು ಕೆರೆಗೆ ಹೇಮೆ ಹರಿಸುವುದೇ ನಮ್ಮ ಪ್ರಮುಖ ಧ್ಯೇಯ ಎಂದರೆ ಸಾಕು ಅಂತಹ ರಾಜಕಾರಣಿಗಳ ಮಾತು ಅಮೂಲ್ಯ ರತ್ನವಿದ್ದಂತೆ ಅಂದುಕೊಂಡು ಅಂತಹ ರಾಜಕಾರಣಿಗಳಿಗೆ ಮಾರು ಹೋಗುವುದು ಈ ಭಾಗದ ಜನರ ಸಹಜ ಗುಣವೂ ಆಗಿದೆ.

     ಇಷ್ಟಕ್ಕೂ ಮದಲೂರು ಕೆರೆಯ ಹೆಸರು ಕ್ಷೇತ್ರದ ತುಂಬಾ ಗುಡುಗಾಡುವುದು ಚುನಾವಣೆಯ ಸಮಯದಲ್ಲಿ ಮಾತ್ರಾ ಎಂಬುದು ಇದೀಗ ಎಲ್ಲರಿಗೂ ಅರ್ಥವಾಗಿದೆ. ಇಂತಹ ಕಟು ಸತ್ಯ ಅರ್ಥವಾಗಿದ್ದರೂ ಮತ್ತೆ ಮತ್ತೆ ಮರುಕಳಿಸುವ ಚುನಾವಣೆಗಳಲ್ಲಿ ಪ್ರತಿಬಿಂಬಿಸುವ ರಾಜಕಾರಣಿಗಳ ಇದೇ ಮಾತಿಗೆ ಮರುಳಾಗುವ ಮಂದಿ ಈತನಕವೂ ಮದಲೂರು ಕೆರೆಗೆ ನೀರು ಹರಿಸಿಕೊಳ್ಳಲು ಸಾದ್ಯವಾಗಿಲ್ಲ ಅಂಬುದು ಘೋರ ದುರಂತವೇ ಸರಿ.

    ಡಾ.ನಂಜುಂಡಪ್ಪ ನೇತೃತ್ವದ ವರದಿಯನ್ವಯ 2005ರಲ್ಲಿ ಕಳ್ಳಂಬೆಳ್ಳ ಕೆರೆಯಿಂದ ಕೆಳಭಾಗದ ಕೆರೆಗಳಿಗೆ ಹೇಮಾವತಿ ನೀರು ಹರಿಸಲು 60 ಕೋಟಿ ರೂ ವೆಚ್ಚದಲ್ಲಿ ಮಂಜೂರಾದ ಅನುದಾನದಿಂದ ಆರಂಭಗೊಂಡ ಕಾಲುವೆ ನಿರ್ಮಾಣ 2017ರಲ್ಲಿ ಪೂರ್ಣಗೊಂಡು ಪ್ರಾಯೋಗಿಕವಾಗಿ ಮಳೆಯ ನೀರಿನೊಟ್ಟಿಗೆ ಕಳೆದೆರಡು ವರ್ಷಗಳ ಹಿಂದೆ ಅತ್ಯಲ್ಪ ನೀರು ಮದಲೂರು ಕೆರೆಗೆ ಹರಿದಿದ್ದನ್ನು ಬಿಟ್ಟರೆ ಈವರೆಗೂ ಒಂದು ಹನಿ ಹೇಮಾವತಿಯ ನೀರಿನ ರುಚಿಯನ್ನು ಈ ಕೆರೆ ಕಂಡಿಲ್ಲ.

    ಮಾಜಿ ಸಚಿವ ಟಿ.ಬಿ.ಜಯಚಂದ್ರರಿಂದಾ ಹಿಡಿದು ಅಂದು ಮಾಜಿ ಆಗಿದ್ದ ಈಗ ಹಾಲಿ ಶಾಸಕರಾದ ಬಿ.ಸತ್ಯನಾರಾಯಣ್ ಸೇರಿದಂತೆ ಹೇಮಾವತಿ ಹೋರಾಟ ಸಮಿತಿಯ ಹಾಗೂ ರೈತ ಸಂಘಗಳ ಒತ್ತಡಗಳ ನಡುವೆಯೂ ಮದಲೂರು ಕೆರೆಯ ಯೋಜನೆಗೊಂದು ಕಾಯಕಲ್ಪ ಲಭ್ಯವಾಗಿತ್ತು. ಒಂದಲ್ಲಾ ಒಂದು ರೀತಿಯಲ್ಲಿ ಅನೇಕ ಮಂದಿಯ ನಿರಂತರ ಶ್ರಮದ ಫಲವಾಗಿ ಈ ಯೋಜನೆಗೊಂದು ಸ್ಪೂರ್ತಿ ಲಭ್ಯವಾಗಿದ್ದು ಶ್ಲಾಘನಾರ್ಹವೂ ಹೌದು.

     ಕಾಲುವೆಯ ನಿರ್ಮಾಣದ ನಂತರ ಮದಲೂರು ಕೆರೆಗೆ ಹೇಮಾವತಿಯನ್ನು ಹರಿಸುವಂತೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆ ಹೋರಾಟಗಳು ನಡೆಯುತ್ತಲೇ ಬಂದಿದ್ದು ಈವರೆಗೆ ನಡೆದ ಹೋರಾಟಗಳು ಕೂಡಾ ಮಂಜಿನಂತೆ ಕರಗಿ ಹೋಗುತ್ತಿವೆಯೇ ಹೊರತು ಹೇಮಾವತಿ ಮಾತ್ರಾ ಹರಿಯಲೇ ಇಲ್ಲ.

     ಈ ವರ್ಷ ಗೋರೂರು ಜಲಾಶಯ ತುಂಬಿದ ಪರಿಣಾಮ ಕಳ್ಳಂಬೆಳ್ಳ, ಶಿರಾ ಹಾಗೂ ಕನಿಷ್ಟ ಪಕ್ಷ ಮದಲೂರು ಕೆರೆಗೂ ನೀರು ಹರಿಸಿಕೊಳ್ಳಬಹುದೆಂಬ ಮಹದಾಸೆ ಬರದ ನೆಲದ ಜನತೆಗಿತ್ತು. ಆದರೆ ಆ ನಿರೀಕ್ಷೆಯೂ ದೂರವಾಗುಳಿದಿದೆ. ಕಳೆದ ಮೂರು ತಿಂಗಳಿಂದ ಹೇಮಾವತಿಯನ್ನು ಕಳ್ಳಂಬೆಳ್ಳ, ಶಿರಾ ಕೆರೆಗಳಿಗೆ ಹರಿಸಿಕೊಳ್ಳುತ್ತಿದ್ದರೂ ಈ ಎರಡೂ ಕೆರೆಗಳನ್ನು ಈವರೆಗೂ ತುಂಬಿಸಿಕೊಳ್ಳಲಾಗಿಲ್ಲ.

      ಹಾಗಂತ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಯಚಂದ್ರ ಅಧಿಕಾರಿಗಳ ಮೇಲೆ ತೀವ್ರತರವಾದ ಒತ್ತಡ ಹೇರುತ್ತಿದ್ದರೂ ಹರಿಯುವ ನೀರಿನ ಪ್ರಮಾಣ ಮಾತ್ರಾ ಏರುತ್ತಿಲ್ಲ. ಯಾರದೇ ಒತ್ತಡವಿಲ್ಲದಿದ್ದರೆ ಪಟ್ರಾವತನಹಳ್ಳಿ ಗೇಟ್‍ನಿಂದ 30 ರಿಂದ40 ಕ್ಯುಸೆಕ್ಸ್ ಮಾತ್ರಾ ಹರಿದರೆ ತೀವ್ರವಾದ ಒತ್ತಡ ಹೇರಿದಾಗ 150 ಕ್ಯುಸೆಕ್ಸ್‍ನಷ್ಟು ನೀರನ್ನು ಕೆಲ ದಿನಗಳಷ್ಟೇ ಹರಿಸಲಾಗುತ್ತದೆ.

     ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶಿರಾ ಭಾಗಕ್ಕೆ ಕಾರ್ಯಕ್ರಮಗಳಿಗೆ ಬಂದಾಗಲೆಲ್ಲಾ ಡಿಸೆಂಬರ್ ಅಂತ್ಯದವರೆಗೂ ನೀರು ಹರಿಯುತ್ತದೆ, ಮೂರು ಕೆರೆಗಳನ್ನೂ ತುಂಬಿಸುತ್ತೇವೆ ಎಂಬ ಹೇಳಿಕೆ ನೀಡುತ್ತಾರೆ ನಿಜ ಆದರೆ, ಅವರ ಹೇಳಿಕೆಯಂತೆ ಇದೀಗ ಹರಿಯುತ್ತಿರುವ ಪ್ರಮಾಣದಲ್ಲಿಯೇ ನೀರು ಹರಿದರೆ ಇನ್ನು ಒಂದು ವರ್ಷವಾದರೂ ಈ ಕೆರೆಗಳು ತುಂಬುವುದೇ ಕಷ್ಟ ಎಂಬುದು ಕಟು ಸತ್ಯವೂ ಹೌದು.

        ಒಟ್ಟಾರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬೇಸತ್ತ ಹೇಮಾವತಿ ಹೋರಾಟ ಸಮಿತಿ ಹಾಗೂ ಕೆಲ ಸಂಘಟನೆಗಳು ನ:27 ರಿಂದ ತಹಶೀಲ್ದಾರ್ ಕಛೇರಿಯ ಮುಂದೆ ಮದಲೂರು ಕೆರೆಗೆ ನೀರು ಹರಿಸುವಂತೆ ಅನಿರ್ಧಿಷ್ಟ ಕಾಲದ ಪ್ರತಿಭಟನೆ ಹಮ್ಮಿಕೊಂಡಿದೆ.

       ಶಿರಾ, ಕಳ್ಳಂಬೆಳ್ಳ ಇದರೊಟ್ಟಿಗೆ ಮದಲೂರು ಕೆರೆಗಳನ್ನು ಈ ವರ್ಷ ತುಂಬಿಸಲೇಬೇಕೆಂದು ಹಠ ಹಿಡಿದು ಪ್ರತಿಭಟನೆಗೆ ಕೂತ ಹೇಮಾವತಿ ಹೋರಾಟ ಸಮಿತಿಯ ಈ ಕೆಲಸಕ್ಕೆ ಕೆಲವೇ ಸಂಘಟನೆಗಳ ಬೆಂಬಲ ವ್ಯಕ್ತವಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ರೈಲ್ವೇ ಹೋರಾಟ ಸಮಿತಿ, ತಾ.ವಕೀಲರ ಸಂಘ, ಮಂಡಿ ವರ್ತಕರ ಸಂಘ, ಎಲ್.ಐ.ಸಿ. ಪ್ರತಿನಿಧಿಗಳ ಸಂಘ ಸೇರಿದಂತೆ ಕೆಲವೇ ಕೆಲವು ಸಂಘಟನೆಗಳ ಬೆಂಬಲ ಲಭ್ಯವಾಗಿದ್ದು ಹೋರಾಟದ ಕಿಚ್ಚು ಬಿಸಿ ಏರದಂತಾಗಿದೆ.

     ಚುನಾವಣೆಗಳ ಸಮಯದಲ್ಲಿ ಮದಲೂರು ಕೆರೆಯ ಬಗ್ಗೆ ಅಪಾರವಾದ ಪ್ರೀತಿ, ಕಾಳಜಿವಹಿಸುವ ರಾಜಕೀಯ ದುರೀಣರು ಇಂತಹ ಜನಪರ ಹೋರಾಟದ ಸಂದರ್ಬದಲ್ಲಿ ಕಣ್ಮರೆಯಾಗಿಬಿಡುತ್ತಿದ್ದಾರೆ. ಮದಲೂರು ಕೆರೆಗೆ ನೀರು ಹರಿಸಲು ನಡೆಯುವಂತಹ ಹೋರಾಟಗಳಿಗೆ ಬೇಷರತ್ ಬೆಂಬಲ ನೀಡಿ ಸರ್ಕಾರಕ್ಕೆ ಒತ್ತಡ ಹೇರಲು ಕೈಜೋಡಿಸದ ಈ ಕ್ಷೇತ್ರದ ರಾಜಕೀಯ ದುರೀಣರು ಚುನಾವಣೆ ಬಂದಾಗ ಮಾತ್ರಾ ಮದಲೂರು ಕೆರೆಯ ಬಗ್ಗೆ ಪ್ರೀತಿ ಹುಕ್ಕಿ ಹರಿಯುವುದು ಎಷ್ಟರಮಟ್ಟಿಗೆ ಸರಿ? ಎಂಬುದು ಸಾರ್ವಜನಕರ ಪ್ರಶ್ನೆಯೂ ಆಗಿದೆ.

       ಮದಲೂರು ಕೆರೆಯ ಬಗ್ಗೆ ಜಯಚಂದ್ರ ಅವರಿಗಷ್ಟೇ ಅಲ್ಲದೆ ಈಗಿನ ಶಾಸಕ ಬಿ.ಸತ್ಯನಾರಾಯಣ್ ಕೂಡಾ ಕಾಳಜಿ ಇಟ್ಟಿದ್ದಾರೆ ನಿಜ. ಹಾಗಂತ ನೀರಿಗಾಗಿ ಹೋರಾಟಕ್ಕೆ ಕೂತವರನ್ನು ಬೆಂಬಲಿಸಿ ಇಂತಹ ಹೋರಾಟಗಳಲ್ಲಿ ತಾವೂ ಕೂಡಾ ಮುಂದಾಗದಿದ್ದರೆ ಮದಲೂರು ಕೆರೆಯ ಗತಿಯಾದರೂ ಏನು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

      ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಹೋರಾಟದ ಕಿಚ್ಚಿಲ್ಲದೆ ರಾಜ್ಯದ ಯಾವ ಭಾಗಕ್ಕೂ ಅಷ್ಟು ಸುಲಭವಾಗಿ ಹೇಮಾವತಿಯ ನೀರು ಲಭ್ಯವಾದ ನಿಧರ್ಶನಗಳಿಲ್ಲ ಎಂಬ ಅರಿವಿದ್ದರೂ ಹೋರಾಟಕ್ಕೆ ಕೂತವರೊಟ್ಟಿಗೆ ತಾವೂ ಕೂತು ಬೆಂಬಲಿಸುವ ವ್ಯವದಾನವೂ ಈ ಕ್ಷೇತ್ರದ ಜನಪ್ರತಿನಿಧಿಗಳಿಲ್ಲದೇ ಹೋಗಿರುವುದು ವಿಷಾಧದ ಸಂಗತಿಯೇ ಸರಿ.

   ನಿನ್ನೆಯಿಂದ ಅನಿರ್ಧಿಷ್ಟ ಕಾಲದವರೆಗೆ ವಿವಿಧ ಸಂಘಟನೆಗಳು ಹೇಮಾವತಿಗಾಗಿ ಹೋರಾಟ ಹಮ್ಮಿಕೊಂಡಿದ್ದು ಕೆಲ ರಾಜಕಾರಣಿಗಳು ನೆಪ ಮಾತ್ರಕ್ಕೆ ಭೇಟಿ ನೀಡಿ ಹೋಗುತ್ತಿದ್ದಾರೆ. ಪ್ರತಿಭಟನೆಗೆ ಕೂತವರನ್ನು ಮಾತನಾಡಿಸಿಕೊಂಡು ಹೋದರಷ್ಟೇ ಸಾಲದು. ಅವರೊಟ್ಟಿಗೆ ಬಹಿರಂಗ ಬೆಂಬಲಕ್ಕೂ ಸಿದ್ಧಗೊಂಡರೆ ಮಾತ್ರಾ ಸರ್ಕಾರದ ಕಣ್ಣು ತೆರೆಸಲು ಸಾದ್ಯ ಎಂಬುದನ್ನು ಮನಗಾಣಬೇಕಿದೆ. ಈ ನಡುವೆ ಎಷ್ಟು ಮಂದಿ ರಾಜಕೀಯ ದುರೀಣರು ನಿರಂತರವಾಗಿ ಹೋರಾಟದ ಜೊತೆಗೆ ಕೂತು ಕೈ ಜೋಡಿಸುತ್ತಾರೋ ಕಾದು ನೋಡಬೇಕಿದೆ.

ಎತ್ತ ಹೋದಿರಿ ಸಂಸದರೆ….?

    ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿರುವ ಚಿತ್ರದುರ್ಗ ಸಂಸದರು ಕೇವಲ ಸಭೆ-ಸಮಾರಂಭಗಳಿಗೆ ಮಾತ್ರಾ ಮೀಸಲಾಗುತ್ತಿದ್ದಾರೆಂಬ ಆರೋಪಗಳು ವ್ಯಕ್ತವಾಗತೊಡಗಿದ್ದು ಮುಖ್ಯಮಂತ್ರಿಗಳ ಮೇಲೆ ಹಾಗೂ ಜಿಲ್ಲಾ ಸಚಿವರ ಮೇಲೆ ಒತ್ತಡ ತಂದು ಅಗತ್ಯ ಪ್ರಮಾಣ ನೀರು ಹರಿಸಿಕೊಳ್ಳುವ ಜಾಣತನವನ್ನು ಈ ಭಾಗದ ಸಂಸದ ಎ.ನಾರಾಯಣಸ್ವಾಮಿ ಈತನಕವೂ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap