ಐ.ಡಿ.ಹಳ್ಳಿ
ಆಂಧ್ರ ಗಡಿಭಾಗದ ಐ.ಡಿ.ಹಳ್ಳಿ ಹೋಬಳಿ ವ್ಯಾಪ್ತಿಗೆ ಒಟ್ಟು 34 ಹಳ್ಳಿಗಳು ಸೇರಿವೆ. ಈ ಗ್ರಾಮದ ಬೆಸ್ಕಾಂ ಶಾಖಾ ಕಚೇರಿಯಲ್ಲಿ 24 ಗಂಟೆಗಳ ಕಾಲ ಕೆಲಸ ನಿರ್ವಹಿಸುವಂತಹ ಸಿಬ್ಬಂದಿ ಸುರಕ್ಷಿತವಾದ ಕೊಠಡಿ ಇಲ್ಲವಾಗಿದೆ. ಸೂಕ್ತ ವ್ಯವಸ್ಥೆ ಇಲ್ಲದ ಖಾಸಗಿಯವರ ಹಳೆಯ ಮನೆಯೊಂದನ್ನು ಬೆಸ್ಕಾಂ ಇಲಾಖೆ ಬಾಡಿಗೆಗೆ ಪಡೆದು, ತಿಂಗಳಿಗೆ ಎರಡು ಸಾವಿರದ ಐನೂರು ರೂಪಾಯಿಗಳನ್ನು ಬಾಡಿಗೆ ತೆರುತ್ತಿದ್ದಾರೆ.
ಈ ಗ್ರಾಮದ ಬೆಸ್ಕಾಂ ಸಿಬ್ಬಂದಿ 24 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಿಬ್ಬಂದಿ ವಿಶ್ರಾಂತಿ ಪಡೆಯಲು ಹಾಗೂ ಊಟ ಮಾಡಲು ಸೂಕ್ತ ಸ್ಥಳಾವಕಾಶ ಇಲ್ಲದೇ ಪರದಾಡುವಂತಹ ಪರಿಸ್ಥಿತಿಯಿದೆ. ತಿಂಗಳಿಗೊಮ್ಮೆ ಲೋಡುಗಟ್ಟಲೆ ಹೊಸ ಹೊಸ ಟ್ರಾನ್ಸ್ ಫಾರ್ಮರ್‍ಗಳು ಮತ್ತು ವೈರ್‍ಗಳು ಹಾಗು ಇನ್ನಿತರ ವಸ್ತುಗಳು ಬರುತ್ತಿದ್ದು, ಖಾಸಗಿಯವರ ಮನೆ ಚಿಕ್ಕದಾಗಿದ್ದು, ಈ ಮನೆಯಲ್ಲಿ ಜಾಗ ಸಾಲದೇ ಒದ್ದಾಡುವಂತಾಗಿದೆ. ಇಲ್ಲಿನ ಸಿಬ್ಬಂದಿ ಕಚೇರಿಯ ಹೊರಗಡೆ ಹೋಗಿ ಸಾರ್ವಜನಿಕರಿಗಾಗುವ ವಿದ್ಯುತ್‍ನ ಅನಾಹುತಗಳನ್ನು ತಪ್ಪಿಸಿ, ಎಷ್ಟೇ ಸಮಯವಾದರೂ ವಿದ್ಯುತ್‍ನಿಂದ ಸಾರ್ವಜನಿಕರಿಗೆ ಹಾನಿಯಾಗದಂತೆ ಸರಿಪಡಿಸಿ ಕಚೇರಿಗೆ ಬಂದರೆ ಇಲ್ಲಿನ ಸಿಬ್ಬಂದಿಗೆ ಒಳಗಡೆ ಜಾಗವೂ ಇಲ್ಲದೆ, ಕುಡಿಯುವುದಕ್ಕೆ ನೀರು ಸಹ ಇಲ್ಲದೆ ಈ ಕೆಲಸವೇ ಬ್ಯಾಡಪ್ಪ ಎನ್ನುವಂತಾಗಿದೆ.
ಮನೆಯ ಸುತ್ತಲೂ ಸೂಕ್ತವಾದ ಕಾಂಪೌಂಡ್ ಇಲ್ಲದೆ, ಸಾಕಷ್ಟು ಕೊಠಡಿಗಳು ಇಲ್ಲದೆ ಕಿಷ್ಕಿಚಿಧೆಯಾಗಿರುವ ಇಲ್ಲಿ ಇತ್ತೀಚೆಗೆ ಒಂದು ನಾಗರಹಾವು ಆಗಾಗ್ಗೆ ದರ್ಶನ ಕೊಟ್ಟು ಹೋಗುತ್ತಿದೆ. ಈ ನಾಗರ ಹಾವನ್ನು ಹಿಡಿಯುವುದಕ್ಕೆ ಹೋದರೆ ಪ್ರತಿಯೊಂದು ಬಾಗಿಲಿನ ಮರದ ಕೆಳಗಡೆ ಹುಳುಗಳು ತಿಂದು ತಿಂದು ದೊಡ್ಡದಾಗಿ ತೂತುಗಳು ಬಿದ್ದ ಕಾರಣದಿಂದ ಹಾವು ಯಾವಾಗಲೂ ತಪ್ಪಿಸಿಕೊಳ್ಳುತ್ತಿದೆ. ಆದ್ದರಿಂದ ಇಲ್ಲಿನ ಸಿಬ್ಬಂದಿ ಕಚೇರಿ ಒಳಗಡೆ ಇಟ್ಟಿರುವ ಸಾಮಗ್ರಿಗಳನ್ನು ಮುಟ್ಟಲೂ ಭಯಭೀತರಾಗಿದ್ದಾರೆ. ಸಂಬಂಧಿಸಿದ ಬೆಸ್ಕಾಂನ ಮೇ¯ಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡು ಇಲ್ಲಿನ ಸಿಬ್ಬಂದಿಯನ್ನು ಹಾಗೂ ಭೇಟಿ ನೀಡುವ ಸಾರ್ವಜನಿಕರನ್ನು ಪ್ರಾಣಾಪಾಯದಿಂದ ತಪ್ಪಿಸಬೇಕಾಗಿದೆ. ಹೊಸ ಕಟ್ಟಡವನ್ನು ಸರ್ಕಾರದಿಂದ ಮಂಜೂರು ಮಾಡಿಸಿ, ನಿರ್ಮಾಣ ಮಾಡಬೇಕಾಗಿದೆ. ಇಲ್ಲದಿದ್ದರೆ ಈ ಕಚೇರಿಯ ಒಳಗಡೆ ಹೋಗುವ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಯಾವಾಗ ಬೇಕಾದರೂ ಹಾನಿ ಉಂಟಾಗಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








