ಚಿತ್ರದುರ್ಗ,
ಜಿಲ್ಲೆಯ ಯಾವುದೇ ಶಾಲಾ ಮಕ್ಕಳು ಲಸಿಕೆಗಳಿಂದ ವಂಚಿತವಾಗಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಅವರು ಹೇಳಿದರು.
ಶಾಲಾ ಮಕ್ಕಳ ಲಸಿಕಾ ಅಭಿಯಾನ ಕುರಿತು ಆರೋಗ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಸಹಾಯಕರು ಹಾಗೂ ಕ್ಷೇತ್ರ ಮೇಲ್ವಿಚಾರಕರಿಗೆ ಶುಕ್ರವಾರ ಏರ್ಪಡಿಸಿದ ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಡಿಪಿಟಿ ಹಾಗೂ ಟಿ.ಡಿ. ಲಸಿಕೆ ಹಾಕುವ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, 01 ತರಗತಿ, 4ನೇ ತರಗತಿ, 10ನೇ ತರಗತಿಯ ಒಟ್ಟು 3,77,000 ಶಾಲಾ ಮಕ್ಕಳಿಗೆ ಲಸಿಕೆ ನೀಡಲು ಗುರುತಿಸಲಾಗಿದೆ. ಕ್ಷೇತ್ರ ಸಿಬ್ಬಂದಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ಮಕ್ಕಳ ವಿವರಗಳನ್ನು ಸಂಗ್ರಹಿಸಿ, ಆಯಾ ಕ್ಷೇತ್ರ ವ್ಯಾಪ್ತಿಯ ಕ್ರಿಯಾಯೋಜನೆ ತಯಾರಿಸಿ, ಯಾವುದೇ ಶಾಲಾ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ ಬಳ್ಳಾರಿಯ ಸರ್ವೆಲೆನ್ಸ್ ಮೆಡಿಕಲ್ ಆಫೀಸರ್ ಡಾ.ಶ್ರೀಧರ್ ಅವರು ಲಸಿಕಾ ಅಭಿಯಾನದ ಕ್ರಿಯಾಯೋಜನೆ ಸಿದ್ದಪಡಿಸುವ ನಮೂನೆಗಳು, ಲಸಿಕಾ ಕಾರ್ಯಕ್ರಮದ ಅಗತ್ಯತೆಯ ಬಗ್ಗೆ, ಹಾಗೂ ಅಭಿಯಾನ ರೂಪದಲ್ಲಿ ಲಸಿಕಾ ಕಾರ್ಯಕ್ರಮದ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ತಾಯಿ ಮಕ್ಕಳ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ದೈನಂದಿನ ಲಸಿಕಾ ಕಾರ್ಯಕ್ರಮದ ಜೊತೆ ಶಾಲಾ ಮಕ್ಕಳ ಲಸಿಕಾಕರಣವೂ ಮಹತ್ವದ್ದಾಗಿದ್ದು 1ನೇ ತರಗತಿಯ ಮಕ್ಕಳಿ ಡಿ.ಪಿ.ಟಿ. ಎರಡನೇ ಬಲವರ್ಧನೆ ಲಸಿಕೆ ನೀಡಲಾಗುವುದು. 4ನೇ ಮತ್ತು 10 ನೇ ತರಗತಿ ಮಕ್ಕಳಿಗೆ ಟಿ.ಡಿ. ಲಸಿಕೆ ನೀಡುವುದಾಗಿರುತ್ತದೆ.
ಎಲ್ಲಾ ಕ್ಷೇತ್ರ ಸಿಬ್ಬಂದಿಗಳು ಈ ಕಾರ್ಯಾಗಾರದ ಬಳಿಕ ಶಾಲಾ ಸಮೀಕ್ಷೆ ನಡೆಸಿ, ದತ್ತಾಂಶಗಳನ್ನು ಸಂಗ್ರಹಿಸಬೇಕು. ನಂತರ ಕ್ರಿಯಾಯೋಜನೆ ತಯಾರಿಸಿ ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಬೇಕು. ತಾಲ್ಲೂಕುಗಳ ಕ್ರಿಯಾ ಯೋಜನೆಯನ್ನು ಸಂಯೋಜನೆಗೊಳಿಸಿ ಜಿಲ್ಲಾ ಮಟ್ಟದ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗುವುದು. ಬಳಿಕ ಈ ಕಾರ್ಯ ಯೋಜನೆಯನ್ನು ರಾಜ್ಯ ಮಟ್ಟಕ್ಕೆ ಕಳುಹಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಎಮ್.ಖಾಸಿಂಸಾಬ್, ಎಮ್.ಬಿ.ಹನುಮಂತಪ್ಪ ಆರೋಗ್ಯ ಮೇಲ್ವಿಚಾರಕರು ಉಪಸ್ಥಿತರಿದ್ದರು.