ಪಾಲಿಕೆ ಚುನಾವಣೆ :ಅ.24ರಿಂದ ನಾಮಪತ್ರ ಸಲ್ಲಿಕೆ..!

ದಾವಣಗೆರೆ

    ಬರುವ ನ.12ರಂದು ನಿಗದಿಯಾಗಿರುವ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಡೆಸಲು, ಜಿಲ್ಲಾಡಳಿತ ಸರ್ವಸನ್ನಧವಾಗಿದ್ದು, ನಾಳೆಯಿಂದ (ಅ.24ರಿಂದ) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

   ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ಅ.24ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅದೇದಿನ ಈಗಾಗಲೇ ನೇಮಿಸಿರುವ 9 ಜನ ಚುನಾವಣಾಧಿಕಾರಿಗಳು ನಮೂನೆ-1(ಎ)ನಲ್ಲಿ ಅಧಿಸೂಚನೆ ಹೊರಡಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅ.31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ನ.2ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನ.4 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ ಎಂದು ಮಾಹಿತಿ ನೀಡಿದರು.

    ನ.12ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರ ವರೆಗೆ ಮಹಾನಗರ ಪಾಲಿಕೆಯ ವ್ಯಾಪ್ತಿಯ 377 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯವಿದ್ದಲ್ಲಿ ನ.13ರಂದು ಮತದಾನ ನಡೆಯಲಿದೆ. ನ.14ರಂದು ಬೆಳಿಗ್ಗೆ 8 ಗಂಟೆಯಿಂದ ನಗರದ ಪಿಬಿ ರಸ್ತೆಯಲ್ಲಿರುವ ಡಿಆರ್‍ಆರ್ ಪ್ರೌಢಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.

     2018ರ ಆಗಸ್ಟ್ 10ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ಅಂತಿಮ ಮೀಸಲಾತಿ ಪಟ್ಟಿಯಂತೆ ವಾರ್ಡ್‍ವಾರು ಮೀಸಲಾತಿ ಪ್ರಸಕ್ತ ಚುನಾವಣೆಯಲ್ಲಿ ಅನ್ವಯವಾಗಲಿದೆ. ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ ನಡೆಸಲಿಕ್ಕಾಗಿ 9 ಮಂದಿ ಚುನಾವಣಾಧಿಕಾರಿಗಳನ್ನು ಹಾಗೂ 9 ಜನ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

     ರಾಜ್ಯ ಚುನಾವಣಾ ಆಯೋಗವು ದಾವಣಗೆರೆ ಮಹಾನಗರ ಪಾಲಿಕೆಯ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಈಗಾಗಲೇ ಅ.20ರಿಂದಲೇ ನೀತಿ ಸಂಹಿತೆಯನ್ನು ಜಾರಿಗೊಳಿಸಿದ್ದು, ಇದು ನ.14ರ ವರೆಗೆ ಅನ್ವಯವಾಗಲಿದೆ. ನೀತಿ ಸಂಹಿತೆ ಯಾವುದೇ ರೀತಿಯಲ್ಲಿ ಉಲ್ಲಂಘನೆ ಯಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಟಾನ ಗೊಳಿಸಲು ಪಾಲಿಕೆ ಉಪ ಆಯುಕ್ತರು ಮತ್ತು ಪಾಲಿಕೆಯ ಕಾರ್ಯಪಾಲಕ ಅಭಿಯಂತರರನ್ನು ಅನುಷ್ಟಾನಾಧಿಕಾರಿಗಳನ್ನು ನೇಮಿಸಲಾಗಿದ್ದು, ಇವರ ಅಡಿಯಲ್ಲಿ ಐವರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಮಹಾನಗರ ಪಾಲಿಕೆ ವ್ಯಾಪ್ತಿಯ 45 ವಾರ್ಡ್‍ಗಳಿಗೆ ಚುನಾವಣೆ ನಡೆಸಲು 377 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 111 ಸೂಕ್ಷ್ಮ, 28 ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ ಮತ್ತು ಇನ್ನುಳಿದ 238 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ ಎಂದರು.

    ಪಾಲಿಕೆ ಚುನಾವಣೆಯಲ್ಲಿ 1,90,506 ಗಂಡು ಮತ್ತು 1,90,347 ಹೆಣ್ಣು ಮತದಾರರು ಸೇರಿ ಒಟ್ಟು 3,80,917 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇನ್ನೆರಡು ದಿನಗಳ ಕಾಲ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆ ನಡೆಯಲಿರುವುದರಿಂದ ಮತದಾರರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

    ವಿಕಲಚೇತನ ಮತ್ತು ಹಿರಿಯ ನಾಗರೀಕ ಮತದಾರರನ್ನು ಗುರುತಿಸಿ, ಮತ ಚಲಾವಣೆ ಮಾಡಲು ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆ ಮಾಡಲಾಗುವದು. ಅಲ್ಲದೇ, ಎಲ್ಲಾ ಮತಗಟ್ಟೆಗಳಲ್ಲೂ ಕುಡಿಯುವ ನೀರು ಸೇರಿದಂತೆ ಇತರೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದರು.

    ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು 3 ಲಕ್ಷ ರೂ.ಗಳಿಗೆ ಮಿತಿಗೊಳಿಸಲಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚಗಳನ್ನು ಪರಿಶೀಲಿಸಲು 9 ಜನ ನೋಡಲ್ ಅಧಿಕಾರಿಗಳನ್ನು ಹಾಗೂ 9 ಜನ ಚುನಾವಣಾ ವೆಚ್ಚ ಸಹಾಕರನ್ನು ನೇಮಿಸಲಾಗಿದೆ. ಇವರಿಗೆ ತಲಾ ಐದು ವಾರ್ಡ್‍ಗಳ ಚುನಾವಣಾ ವೆಚ್ಚ ಪರಿಶೀಲಿಸಲು ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.

    ರಾಜಕೀಯ ಪಕ್ಷಗಳು ಶ್ರವಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ಪರಿಶೀಲಿಸಿ ನಿಯಂತ್ರಿಸುವ ಬಗ್ಗೆ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪರವಾನಿಗೆದಾರರು ಠೇವಣಿ ಇಡಬೇಕೆಂದು ಸೂಚನೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ನಜ್ಮಾ, ಚುನಾವಣಾ ಶಾಖೆ ತಹಶೀಲ್ದಾರ್ ಪ್ರಸಾದ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link