ಯೋಜನೆಗಳ ಅನುಷ್ಠಾನವಾಗದಿದ್ದರೆ ಇಲಾಖಾ ಮುಖ್ಯಸ್ಥರೇ ಹೊಣೆಗಾರರು

ಬೆಂಗಳೂರು:

       ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಈ ಸಾಲಿಗೆ ನಿಗದಿಯಾಗಿರುವ 29 ಸಾವಿರ ಕೋಟಿ ರೂ. ಅನುದಾನವನ್ನು ಇದೇ ವರ್ಷದಲ್ಲಿ ಸಂಪೂರ್ಣವಾಗಿ ಖರ್ಚು ಮಾಡಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಯೋಜನೆಗಳ ಅನುಷ್ಠಾನಗೊಳ್ಳದಿದ್ದರೆ ಆಯಾ ಇಲಾಖಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

        ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಎಸ್.ಸಿ.ಪಿ – ಟಿ.ಎಸ್.ಪಿ ಅನುದಾನ ಸದ್ಬಳಕೆ ಕುರಿತ ರಾಜ್ಯ ಪರಿಷತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ಹಣ ವೆಚ್ಚ ಮಾಡಲು ಎಲ್ಲಾ ಇಲಾಖಾ ಮುಖ್ಯಸ್ಥರು ಎಚ್ಚರಿಕೆ ವಹಿಸಬೇಕೆಂದರು.

       ಇಲಾಖಾ ಅಧಿಕಾರಿಗಳು ಯೋಜನೆಗಳ ಅನುಷ್ಠಾನದಲ್ಲಿ ದುರ್ಬಳಕೆಗೆ ಅವಕಾಶ ನೀಡದೆ, ಸರ್ಕಾರದ ಯೋಜನೆಗಳನ್ನು ಪ್ರತಿ ಅರ್ಹ ಫಲಾನುಭವಿಗೆ ತಲುಪಿಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ರಾಜ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ಮುಂದಾಗಬೇಕು ಎಂದರು.

      ಯೋಜನೆಗಳ ಅನುಷ್ಠಾನದಲ್ಲಿರುವ ನ್ಯೂನತೆಗಳನ್ನು ನೀಡಲಾಗಿರುವ ಸೂಚನೆಗಳಿಗೆ ಅನುಸಾರವಾಗಿ ಸರಿಪಡಿಸುವಂತೆ ಅವರು ಸೂಚಿಸಿದರು. ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

      ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯುದಯಕ್ಕೆ ಸರಕಾರದಿಂದ ಸರ್ಕಾರದಿಂದ ಸಂವಿಧಾನ ಬದ್ಧವಾಗಿ ಮೀಸಲಿರಿಸಿರುವ ಎಸ್‍ಸಿಪಿ, ಟಿಎಸ್‍ಪಿ ಅಡಿಯಲ್ಲಿ ಮೀಸಲಿಡುವ ಹಣವನ್ನು ಆ ಸಮುದಾಯದವರ ಅಭಿವೃದ್ಧಿಗೇ ಬಳಸಿಕೊಳ್ಳುವಂತೆ ಸಲಹೆ ಮಾಡಿದರು.

      ಕಳೆದ ಐದು ವರ್ಷದಲ್ಲಿ ಎಸ್‍ಸಿ, ಎಸ್‍ಟಿ ಅವರಿಗಾಗಿ ಸಾಕಷ್ಟು ಅನುದಾನವನ್ನು ಸರಕಾರ ನೀಡಿದೆ. ಇದರ ಸದ್ಭಳಕೆಯಾಗಬೇಕು. ಕೆಲವೆಡೆ ಈ ಹಣವನ್ನು ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಎಸ್‍ಸಿ ಎಸ್ಟಿ ಮಕ್ಕಳು, ಜನಾಂಗದವರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈ ಯೋಜನೆಗಳು ಅವರಿಗೆ ತಲುಪುತ್ತಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ಮಾಡುವಂತೆ ಸೂಚನೆ ನೀಡಿದರು.

     ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಪಿಡಬ್ಲ್ಯೂಡಿ ಸಚಿವ ಎಚ್.ಡಿ. ರೇವಣ್ಣ ಇದ್ದರು.

      ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ , ಸಂಸದ ಧೃವನಾರಾಯಣ, ಶಾಸಕರಾದ ಡಾ: ಕೆ.ಅನ್ನದಾನಿ, ಡಾ:ಜಿ.ಉಮೇಶ್ ಯಾದವ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

                       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link