ತುಮಕೂರು

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ಸಮಗ್ರ ಅಭಿವೃದ್ಧಿಗೆ ತಗಲುವ ವೆಚ್ಚದ ಡಿ.ಪಿ.ಆರ್.ಗಳನ್ನು ತಯಾರಿಸುವಂತೆ ಪಾಲಿಕೆಯ ಇಂಜಿನಿಯರಿಂಗ್ ಶಾಖೆಯ ಎಲ್ಲ ಇಂಜಿನಿಯರ್‍ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ಆಶಾ ಅವರು ಸೆ.12 ರಂದು ಪಾಲಿಕೆಯ ಇಂಜಿನಿಯರಿಂಗ್ ಶಾಖೆಯ ಎಲ್ಲ ಸಹಾಯಕಎಕ್ಸಿಕ್ಯುಟೀವ್ ಇಂಜಿನಿಯರ್‍ಗಳು, ಸಹಾಯಕ ಇಂಜಿನಿಯರ್‍ಗಳು ಮತ್ತು ಕಿರಿಯ ಇಂಜಿನಿಯರ್‍ಗಳಿಗೆ ಈ ನೋಟೀಸ್ (ನಂ.ತುಮಪಾ./ತಾಂಶಾ/ಸಿಆರ್/03/2019-20, ದಿನಾಂಕ: 12-09-2019) ಜಾರಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇತ್ತೀಚೆಗೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾಗ, ರಾಜಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಗುವ ವೆಚ್ಚದ ಬಗ್ಗೆ ಡಿ.ಪಿ.ಆರ್. ತಯಾರಿಸಿ ಸಲ್ಲಿಸುವಂತೆ ಆದೇಶ ನೀಡಿದ್ದರು. ಆ ಹಿನ್ನೆಲೆಯಲ್ಲಿ ಈ ನೋಟೀಸ್ ಅನ್ನು ನೀಡಲಾಗಿದೆ.
ನೋಟೀಸ್ ತಲುಪಿದ ಎರಡು ದಿನಗಳೊಳಗಾಗಿ ಸದರಿ ವೆಚ್ಚದ ಡಿಪಿಆರ್‍ಗಳನ್ನು ತಯಾರಿಸಿ ಸಲ್ಲಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರಲ್ಲದೆ, ತಪ್ಪಿದಲ್ಲಿ ಸಿಸಿಎ ನಿಯಮಗಳ ಪ್ರಕಾರ ಕರ್ತವ್ಯಲೋಪಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಅಮಾನತ್ತಿನ ಎಫೆಕ್ಟ್
ಸದರಿ ಪ್ರಗತಿಪರಿಶೀಲನಾ ಸಭೆಯಲ್ಲಿ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ತಿಪ್ಪೇರುದ್ರಪ್ಪ ಅವರು ಸಮರ್ಪಕವಾಗಿ ಮಾಹಿತಿ ಕೊಡಲಿಲ್ಲವೆಂಬ ಕಾರಣಕ್ಕಾಗಿ ಅವರು ಸೇವೆಯಿಂದ ಅಮಾನತುಗೊಂಡಿದ್ದರು. ಸರ್ಕಾರದ ಈ ಕ್ರಮವು ಪಾಲಿಕೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಚಲನ ಮೂಡಿಸಿತ್ತು. ಅದರ ಪರಿಣಾಮ ಎಂಬಂತೆ ಪಾಲಿಕೆಯ ಮತ್ತೋರ್ವ ಎಕ್ಸಿಕ್ಯುಟೀವ್ ಇಂಜಿನಿಯರ್ ಎಚ್ಚೆತ್ತುಕೊಂಡು ಈ ನೋಟಿಸ್ ಅನ್ನು ಜಾರಿಗೊಳಿಸಿದ್ದಾರೆನ್ನಲಾಗುತ್ತಿದೆ.
ವರದಿ ಬಂದಿದೆಯೇ?
ಸೆ.12 ರಂದು ಈ ನೋಟಿಸ್ ಅನ್ನು ಹೊರಡಿಸಲಾಗಿದೆ. ಇದು ತಲುಪಿದ ಎರಡು ದಿನಗಳೊಳಗೆ ರಾಜಕಾಲುವೆಗಳ ಅಭಿವೃದ್ಧಿಗೆ ಆಗುವ ವೆಚ್ಚದ ಡಿ.ಪಿ.ಆರ್.ಗಳನ್ನು ತಯಾರಿಸಿ ಸಲ್ಲಿಸಲು ಸದರಿ ನೋಟೀಸ್‍ನಲ್ಲಿ ಸೂಚಿಸಲಾಗಿದೆ. ಆದರೆ ಎಷ್ಟು ಇಂಜಿನಿಯರ್‍ಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ? ಅಥವಾ ವರದಿ ಸಲ್ಲಿಸಿದ್ದಾರೆ? ಅಥವಾ ಕಣ್ಣೊರೆಸುವ ಸಲುವಾಗಿ ನೆಪಕ್ಕೆ ನೋಟೀಸ್ ಅನ್ನು ಜಾರಿ ಮಾಡಲಾಗಿದೆಯೇ? ಎಂಬುದು ಈಗ ಪಾಲಿಕೆಯಲ್ಲಿ ಚರ್ಚಾ ವಿಷಯವಾಗಿದೆ.
ಮತ್ತೆ ಕರ್ತವ್ಯಕ್ಕೆ ಹಾಜರು
ಈ ನಡುವೆ, ಸೇವೆಯಿಂದ ಅಮಾನತುಗೊಂಡಿದ್ದ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ತಿಪ್ಪೇರುದ್ರಪ್ಪ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಈ ಹಿನ್ನೆಲೆಯಲ್ಲಿ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
