ದಾವಣಗೆರೆ

ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಿಗೆ ಇಲಾಖೆಯ ಅಧಿಕಾರಿಗಳೇ ಖುದ್ದಾಗಿ ಹಾಜರಾಗಬೇಕು. ಅದರ ಬದಲು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಎಚ್ಚರಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು.
ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ತಾಕೀತು ಮಾಡಿದರು.ಕೃಷಿ ಇಲಾಖೆಯ ಶ್ರೀಧರಮೂರ್ತಿ ಮಾತನಾಡಿ, ಮಾಯಕೊಂಡ ಹೋಬಳಿ ಬಾಡ ಗ್ರಾಮದ ರೈತ ಶಿವಪ್ಪ ಆತ್ಮಹತ್ಯೆಗೆ ಪರಿಹಾರ ನೀಡುವಲ್ಲಿ ವಿಳಂಬವಾಗಿದ್ದು, ಕುಟುಂಬದವರು ಪುನಃ ಮೇಲ್ಮನವಿ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸೆ.13 ಅಂತ್ಯಕ್ಕೆ ವಾಡಿಕೆಗಿಂತ ಶೇ.100 ಮೀ.ಮೀ. ಮಳೆ ಹೆಚ್ಚಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 2,43,238 ಹೆಕ್ಟರ್ ಪ್ರದೇಶದಲ್ಲಿ ಗುರಿಯಲ್ಲಿ 1,56,139 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಾಪು ದಾಸ್ತಾನು ಸೇರಿ ಒಟ್ಟು 41150 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಇಲ್ಲಿವರೆಗೆ ರಸಗೊಬ್ಬರದ ಕೊರತೆಯಾಗಿಲ್ಲ ಎಂದು ತಿಳಿಸಿದರು.
ಕೃಷಿ ಯಂತ್ರೋಪಕರಣ ಬಾಡಿಗೆ ಆಧಾರಿತ ಸೇವಾ ಕೇಂದ್ರ ಯೋಜನೆಯಡಿ ರೈತರಿಗೆ ಸಕಾಲದಲ್ಲಿ ಕಡಿಮೆ ದರದಲ್ಲಿ ಯಂತ್ರೋಪಕರಣ ಒದಗಿಸಲು ಜಿಲ್ಲೆಯಲ್ಲಿ 19 ಕೃಷಿ ಯಂತ್ರಧಾರೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿ ಮಣ್ಣು ಮಾದರಿ ವಿಶ್ಲೇಷಿಸಿ ಸಾಯಿಲ್ ಹೆಲ್ತ್ ಕಾರ್ಡ್ ವಿತರಿಸಲಾಗಿದೆ. ಒಟ್ಟು 11 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 8 ಪ್ರಕರಣಗಳು ತಿರಸ್ಕøತವಾಗಿವೆ. ಒಂದು ಅರ್ಹ ಪ್ರಕರಣಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಇನ್ನೆರಡು ಬಾಕಿ ಪ್ರಕರಣಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ನುಡಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷೀಕಾಂತ್ ಬೊಮ್ಮನ್ನಾರ್ ಮಾತನಾಡಿ, ಹನಿ ನೀರಾವರಿ ಯೋಜನೆಯಲ್ಲಿ 3 ಕೋಟಿ ರೂ. ಅನುದಾನವು ಮಾರ್ಚ್ ಕೊನೆಯ ವಾರದಲ್ಲಿ ಬಿಡುಗಡೆಯಾಗಿದೆ. ಎನ್‍ಆರ್‍ಐಜಿ ಯೋಜನೆಯಡಿ ಅನುಷ್ಠಾನ ಇಲಾಖೆಗಳಿಗೆ 16 ತಾಂತ್ರಿಕ ಸಹಾಯಕರ ಹುದ್ದೆಗಳಿದ್ದು, 6 ಹುದ್ದೆಗಳು ಖಾಲಿ ಇವೆ ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರ ರಾಜು ಮಾತನಾಡಿ, ನರೇಗಾ ಯೋಜನೆಯಡಿ ವೈಯಕ್ತಿಕ ಕೊಳವೆಬಾವಿ ಮತ್ತು ಸರ್ಕಾರಿ ಕೊಳವೆಬಾವಿಗಳ ರಿ-ಚಾರ್ಜ್ ಮಾಡಲು ಸಮನಾಗಿ ಅನುದಾನ ನೀಡುವಂತೆ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಅನುದಾನದ ವಿಷಯದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಕ್ರಮ ವಹಿಸಬೇಕಾಗಿರುತ್ತದೆ. ಜಗಳೂರು ತಾಲೂಕಿನಲ್ಲಿ 35 ಖಾಸಗಿ ಕೊಳವೆಬಾವಿಗಳ ಮೂಲಕ 52 ಹಳ್ಳಿಗಳಿಗೆ ಇಂದಿಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಘವೇಂದ್ರಸ್ವಾಮಿ ಮಾತನಾಡಿ, ಜಗಳೂರು ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ರೋಗಿಗಳ ಪ್ರಮಾಣಕ್ಕೆ ತಕ್ಕಂತೆ ಖಾಲಿ ವೈದ್ಯರ ಹುದ್ದೆಗೆ ಮತ್ತು ಹೆಚ್ಚುವರಿ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂಬಿಬಿಎಸ್ ಮಾಡಿದ ವೈದ್ಯರು ಸಿಗದ ಕಾರಣ ವಿಳಂಬವಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ್ ಯೋಜನೆಯಡಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‍ಫೋನ್ ವಿತರಿಸಲು ನೀಡಲಾದ ಟೆಂಡರ್ ಅಂತಿಮವಾಗಿದ್ದು ಮುಂದಿನ ತಿಂಗಳು ಸೂಕ್ತ ತರಬೇತಿ ನೀಡಿ ವಿತರಿಸಲಾಗುವುದು. ಪ್ರತಿ ತಾಲೂಕು, ಜಿಲ್ಲಾ ಮಟ್ಟದ ಕೋ-ಆರ್ಡಿನೇಟರ್ ಹಾಗೂ ಸಹಾಯಕ ಕೋ-ಆರ್ಡಿನೇಟರ್‍ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಏಜಿನ್ಸಿಯವರಿಂದ ನೇಮಕ ಮಾಡಿಕೊಳ್ಳಲು ಸೆ.4ರಂದು ಅಲ್ಪಾವಧಿ ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್.ಪರಮೆಶ್ವರಪ್ಪ ಮಾತನಾಡಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲದಿರುವ ಶಾಲೆಗಳನ್ನು ಗುರುತಿಸಿ, ಪ್ರಾಥಮಿಕ ಶಾಲೆಗಳಿಗೆ 79 ಹಾಗೂ ಪ್ರೌಢಶಾಲೆಗಳಿಗೆ 29 ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೆಲವೊಂದು ಶಾಲಾ ಕೊಠಡಿಗಳ ದುರಸ್ಥಿ ಮತ್ತು ಹೊಸದಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. 8, 9ನೇ ತರಗತಿಯ ಬಾಲಕಿಯರಿಗೆ ಚೂಡಿದಾರ್ ಪೂರೈಕೆಯಾಗಿದೆ. ಶೂ ಮತ್ತು ಸಾಕ್ಸ್ ಖರೀದಿಸಲು ಎಸ್‍ಡಿಎಂಸಿ ಸಮಿತಿಯವರಿಗೆ ಅನುದಾನ ನೀಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ 8ನೇ ತರಗತಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ್ ಕುಂಬಾರ್, ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯವಸ್ಥಾಪಕಿ ರೇಷ್ಮ ಕೌಸರ್, ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
