ಬಳ್ಳಾರಿ
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಇದುವರೆಗೆ ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮತ್ತು ವೆಚ್ಚ ಮಾಡಿದ ಹಾಗೂ ಅದಕ್ಕೆ ಸಂಬಂಧಿಸಿದಂತೆ ನಿರ್ವಹಣೆ ಮಾಡಿದ ಲೆಕ್ಕಪತ್ರಗಳ ಪರಿಶೀಲನೆಯು ಚುನಾವಣಾ ವೆಚ್ಚ ವೀಕ್ಷಕರಾದ ಅನಿತಾ ಮಹಾದಾಸ್ ಮತ್ತು ಮನ್ವೀಶಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.
ಚುನಾವಣಾ ವೆಚ್ಚ ಕೋಶದ ನೋಡಲ್ ಅಧಿಕಾರಿಗಳಾದ ಡಾ.ಸುನೀತಾ ಸಿದ್ರಾಮ್ ಹಾಗೂ ಚನ್ನಪ್ಪ, ಸಹಾಯಕ ಚುನಾವಣಾ ವೆಚ್ಚ ಅಧಿಕಾರಿಗಳು ಹಾಜರಿದ್ದು, ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ಆಗಮಿಸಿದ್ದ ವೆಚ್ಚ ನಿರ್ವಹಣೆಗೆ ಸಂಬಂಧಿಸಿದ ಪ್ರತಿನಿಧಿಗಳು ಲೆಕ್ಕಪತ್ರಗಳನ್ನು ಈ ಸಂದರ್ಭದಲ್ಲಿ ನೀಡಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಹಾಗೂ ಅವರ ಪರವಾಗಿ ಆಗಮಿಸಿದ್ದ ಪ್ರತಿನಿಧಿಗಳು ತಾವು ಇದುವರೆಗೆ ಚುನಾವಣಾ ಪ್ರಚಾರ ಹಾಗೂ ಚುನಾವಣೆ ಸಂಬಂಧಿಸಿದಂತೆ ಮಾಡಲಾದ ಇನ್ನೀತರ ಖರ್ಚು-ವೆಚ್ಚದ ಲೆಕ್ಕಪತ್ರಗಳನ್ನು ಸಲ್ಲಿಸಿದರು. ವೆಚ್ಚ ವೀಕ್ಷಕ ಸಿಬ್ಬಂದಿ ಅವುಗಳನ್ನು ಪರಿಶೀಲಿಸಿ ತಾವು ಲೆಕ್ಕ ಹಾಕಿದ್ದ ಅಂಕಿ-ಸಂಖ್ಯೆಗಳೊಂದಿಗೆ ಹೊಲಿಕೆ ಮಾಡಿ ನೋಡಿದರು.
ಚುನಾವಣಾ ವೆಚ್ಚ ಕೋಶ ನಿರ್ವಹಿಸಿದ ಲೆಕ್ಕಪತ್ರಗಳಿಗೂ ಅಭ್ಯರ್ಥಿಗಳಿಗೂ ನಿರ್ವಹಿಸಿದ ಲೆಕ್ಕಪತ್ರಗಳಿಗೆ ಬಹಳಷ್ಟು ವ್ಯತ್ಯಾಸಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸದರಿ ವೆಚ್ಚದ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ವಿವರಣೆ ಕೇಳಿ ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಯಿತು.
ಇನ್ನೇರಡು ಬಾರಿ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗುತ್ತದೆ ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಅನಿತಾ ಮಹಾದಾಸ್ ಮತ್ತು ಮನ್ವೀಶಕುಮಾರ್ ಅವರು ಹೇಳಿದರು. ಅಭ್ಯರ್ಥಿಗಳು ಲೆಕ್ಕಪತ್ರಗಳು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಈ ಸಂದರ್ಭದಲ್ಲಿ ಸೂಚಿಸಿದರು.