ಹುಳಿಯಾರು:
ಜೇವರ್ಗಿ-ಚಾಮರಾಜನಗರ 150 ಎ ರಾಷ್ಟ್ರೀಯ ಹೆದ್ದಾರಿಯು ಹುಳಿಯಾರು ಬಳಿ ಬೈಪಾಸ್ ಮೂಲಕ ಹಾದು ಹೋಗುವುದು ನಿಶ್ಚಿತವಾಗಿದ್ದು ಬೈಪಾಸ್ ಹಾದು ಹೋಗುವ ಮಾರ್ಗದಲ್ಲಿನ ಜಮೀನುಗಳನ್ನು ಭೂಸ್ವಾದೀನ ಪಡಿಸಿಕೊಳ್ಳುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಜು.19 ರಂದು ಅಧಿಸೂಚನೆ ಹೊರಡಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆ ಪ್ರಕಾರ ಹುಳಿಯಾರಿನಲ್ಲಿ ಹಾದು ಹೋಗುವ ಹೆದ್ದಾರಿಯು ಹುಳಿಯಾರು ಸಮೀಪದ ದೊಡ್ಡಬಿದರೆ ಗ್ರಾಮದಿಂದಲೇ ಬೈಪಾಸ್ ರಸ್ತೆ ಆರಂಭವಾಗಿ ಎಸ್‍ಎಲ್‍ಆರ್ ಬಂಕ್ ಬಳಿಯ ಮೂಲಕ ಸೋಮಜ್ಜನಪಾಳ್ಯ ಹಾಗೂ ಕೆ.ಸಿ.ಪಾಳ್ಯ ಮತ್ತು ಲಿಂಗಪ್ಪನಪಾಳ್ಯ ಮತ್ತು ಗೌಡಗೆರೆ ನಡುವೆ ಹಾದು ಹೋಗಿ ಕೆಂಕೆರೆ ಬಳಿಯ ಇಂಡೇನ್ ಗ್ಯಾಸ್ ಗೋಡನ್ ಬಳಿ ಸೇರಲಿದೆ.
ಜು.19 ರಂದು ಭೂಸ್ವಾದೀನ ಪಡಿಸಿಕೊಳ್ಳುವ ಭೂಮಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 ರ ಪ್ರಕಾರ ಕಲಂ 3 ಎ (1) ರಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಅಧಿಸೂಚನೆ ಹೊರಡಿಸಲಾಗಿದೆ. ಜು.24 ರಂದು ಅಧಿಸೂಚನೆ ಪ್ರಕಟಣೆಯಾಗಿದ್ದು ಪ್ರಕಟಣೆ ದಿನಾಂಕದಿಂದ 21 ದಿನಗಳ ಒಳಗಾಗಿ ಕಲಂ 3 ಸಿ (1) ರನ್ವಯ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಆಕ್ಷೇಪಣೆಗಳನ್ನು ವಿಶೇಷ ಭೂ ಸ್ವಾದೀನಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿಗಳು 150 ಎ. ಪಿಡಬ್ಲೂಡಿ ಆವರಣ. ಕೆ.ಆರ್.ವೃತ್ತ. ಬೆಂಗಳೂರು-01 ಇವರಿಗೆ ಬರಹದ ಮೂಲಕ ಸಕಾರಣಗಳೊಂದಿಗೆ ಸಲ್ಲಿಸಬಹುದಾಗಿದೆ. ಅಲ್ಲದೆ ಈ ಭೂಮಿಯನ್ನು ಯಾವುದೇ ಕ್ರಯವಿಕ್ರಯ, ಭೋಗ್ಯ, ಇತರೆ ದಾಸ್ತಾವೇಜುಗಳನ್ನು ಮಾಡುವಂತಿಲ್ಲ ಹಾಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದೆಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.
ಪ್ರಸ್ತುತ ಹೊರಡಿಸಿರುವ ಅಧಿಸೂಚನೆಯೂ ಕೆ.ಬಿ.ಕ್ರಾಸ್ ನಿಂದ ಹಿರಿಯೂರು ವಿಭಾಗದ ಭೂಸ್ವಾದೀನ ಪ್ರಕ್ರಿಯೆಗೆ ಸಂಬಂಧಿಸಿ ದ್ದಾಗಿದೆ. ಆ ಪ್ರಕಾರ ಆಲದಕಟ್ಟೆ, ಹಟ್ನಾ, ಹಾಲ್ಗೋಣ, ಜೆ.ಸಿ.ಪುರ, ತರಬೇನಹಳ್ಳಿ, ಮುದ್ದೇನಹಳ್ಳಿ, ಸಾಲ್ಕಟ್ಟೆ, ಅವಳಗೆರೆ, ಬೈರಗಾನಹಳ್ಳಿ, ಬಳ್ಳೆಕಟ್ಟೆ, ಬೈರಾಪುರ, ಚಿಕ್ಕಬಿದರೆ, ದೊಡ್ಡಬಿದರೆ, ಪೋಚಕಟ್ಟೆ, ಹುಳಿಯಾರು, ಹುಳಿಯಾರು ಅಮಾನಿಕೆರೆ, ಗೌಡಗೆರೆ, ಕೆಂಕೆರೆ, ಕೃಷ್ಣಸಾಗರಕೆರೆ, ಮರುಳಹಳ್ಳದ ಕಾವಲ್ ಗ್ರಾಮಗಳ ಖಾಸಗಿ ಮತ್ತು ಸರ್ಕಾರಿ ಜಮೀನುಗಳು ಭೂಸ್ವಾದೀನಕ್ಕೆ ಒಳಪಟ್ಟಿದ್ದು ಯಾವ್ಯಾವ ಸರ್ವೆ ನಂಬರ್‍ನಲ್ಲಿ ಎಷ್ಟೆಷ್ಟು ಭೂಮಿ ಸ್ವಾದೀನ ಪಡಿಸಲಾಗುವುದೆಂಬ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಮೊದಲು ಈ ರಸ್ತೆಯನ್ನು ಅಷ್ಟಪಥ ರಸ್ತೆ ಮಾಡಲು ಸರ್ಕಾರ ಉದ್ದೇಶಿಸಿತ್ತು. ತದನಂತರ ವಾಹನ ಸಂಚಾರದ ಸರ್ವೆ ಮಾಡಲಾಗಿ ಅಷ್ಟಾಗಿ ವಾಹನ ದಟ್ಟಣೆ ಇಲ್ಲದ ಪರಿಣಾಮ ದ್ವಿಪಥ ರಸ್ತೆ ಮಾಡಲು ನಿರ್ಧರಿಸಿತ್ತು. ಸದ್ಯಕ್ಕೆ ಕೆ.ಬಿ.ಕ್ರಾಸ್‍ನಿಂದ ಹಿರಿಯೂರಿನವರೆವಿಗೂ ದ್ವಿಪಥ ರಸ್ತೆ ನಿರ್ಮಾಣ ಮಾಡುವುದಿದ್ದು ಮುಂದಿನ ದಿನಗಳನ್ನು ರಸ್ತೆ ಅಗಲಿಕರಣಕ್ಕೆ ಸಹಕಾರಿಯಾಗಲೆಂದು ಹುಳಿಯಾರಿನಲ್ಲಿ ಬೈಪಾಸ್ ಮಾಡುತ್ತಿದ್ದಾರೆ.
ಹುಳಿಯಾರಿನಲ್ಲಿ ಬೈಪಾಸ್ ರಸ್ತೆಗೆ ಈ ಹಿಂದೆ ಸರ್ವೆ ಮಾಡಿ ಕಲ್ಲುಗಳನ್ನು ಸಹ ನೆಟ್ಟು ಹೋಗಿದ್ದರು. ಇದರಿಂದ ಭೂಮಿ ಕಳೆದು ಕೊಳ್ಳುವ ರೈತರು ಆತಂಕ್ಕೀಡಾಗಿ ಜಿಲ್ಲಾಧಿಕಾರಿ, ಸಂಸತ್ ಸದಸ್ಯರು ಹಾಗೂ ಶಾಸಕರಿಗೆ ಬೈಪಾಸ್ ಕೈ ಬಿಡುವಂತೆ ಮನವಿ ಕೂಡ ಮಾಡಿದ್ದರು. ಆದರೆ ಈ ಹಿಂದೆ ಕಲ್ಲು ನೆಟ್ಟ ರೀತಿಯಲ್ಲೇ ಬೈಪಾಸ್ ಹಾದು ಹೋಗುವುದು ಅಧಿಸೂಚನೆಯಿಂದ ನಿಶ್ಚಿತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
