ಮಾರ್ಚ್ ತಿಂಗಳಲ್ಲೇ ಆಯೋಜಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶನ
ತುಮಕೂರು:
ವಿಶೇಷ ಲೇಖನ :ಸಾ.ಚಿ.ರಾಜಕುಮಾರ
ಕರ್ನಾಟಕದ ಎಲ್ಲ 6021 ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ವಿಶೇಷ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಮಾರ್ಚ್ ತಿಂಗಳಿನಲ್ಲಿಯೇ ಈ ಸಭೆಗಳನ್ನು ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ.
ದಿನಾಂಕ: 28.2.2020 ರಂದು ರಾಜ್ಯದ ಎಲ್ಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲ ಗ್ರಾ.ಪಂ. ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಿರುವ ಈ ತಿಂಗಳಲ್ಲಿ 8 ರಂದು ಅಥವಾ ಈ ತಿಂಗಳಿನಲ್ಲಿ ವಿಶೇಷ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ.
ಮಹಿಳೆ ಹಾಗೂ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲು ಈ ಹಿಂದೆಯೇ ಸರ್ಕಾರ ಸೂಚನೆ ನೀಡಿತ್ತು. ಕಳೆದ 2 ವರ್ಷಗಳಿಂದ ಮಕ್ಕಳ ಗ್ರಾಮ ಸಭೆಗಳಿಗೆ ಒತ್ತು ನೀಡಲಾಗಿದೆ. ಆದರೆ ಮಹಿಳಾ ಗ್ರಾಮ ಸಭೆಗಳಿಗೆ ಹೆಚ್ಚು ಒತ್ತು ನೀಡಲಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ವರ್ಷ ವಿಶೇಷ ಗ್ರಾಮ ಸಭೆ ನಡೆಸಲೇಬೇಕೆಂಬ ಪರ್ಮಾನು ಹೊರಡಿಸಿದೆ.
ಮಹಿಳಾ ಗ್ರಾಮ ಸಭೆ ಏಕೆ?
ಪ್ರತಿ ಗ್ರಾ.ಪಂ.ಗಳಲ್ಲಿ ಕೆಲವು ವಿಶೇಷ ಸಭೆಗಳು ನಡೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಮಹಿಳಾ ಗ್ರಾಮ ಸಭೆ ಏಕೆ ಎಂಬ ಪ್ರಶ್ನೆ ಏಳಬಹುದು. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಬಹಳಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ. ಇದೊಂದು ಮಹತ್ವದ ಬದಲಾವಣೆ. ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುವುದು ಸೇರಿದಂತೆ ವಿವಿಧ ವರ್ಗಗಳನ್ನು ಸಮಾನವಾಗಿ ಕಾಣುವ ಹಾಗೂ ನಿರ್ಲಕ್ಷಿತ ಗುಂಪು ಮತ್ತು ವರ್ಗಗಳನ್ನು ಮೇಲೆತ್ತುವ ಅವಕಾಶವನ್ನು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಮಹಿಳೆಯರಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ.
ಆದರೆ ಬಹಳಷ್ಟು ಕಡೆಗಳಲ್ಲಿ ಇಂದಿಗೂ ಮಹಿಳೆಯರ ಪರವಾಗಿ ಆಕೆಯ ಗಂಡಂದಿರೆ ಅಧಿಕಾರ ಚಲಾಯಿಸುವ ಪ್ರವೃತ್ತಿ ಇದೆ. ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ ಸ್ವಲ್ಪ ಮಟ್ಟಿಗೆ ಬದಲಾವಣೆ ಕಾಣಲಾಗುತ್ತಿದೆ. ಮಹಿಳೆಯರೂ ಸಹ ಸಮರ್ಪಕವಾಗಿ ಅಧಿಕಾರ ಚಲಾಯಿಸುವಂತಾಗಬೇಕು. ಹಕ್ಕು ಕರ್ತವ್ಯಗಳನ್ನು ತಿಳಿಯಬೇಕು ಎಂಬುದರಿಂದ ಹಿಡಿದು ಸ್ಥಳೀಯವಾಗಿ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಒಂದು ವಿಶೇಷ ವ್ಯವಸ್ಥೆ ಆಗಬೇಕು ಎಂಬ ಕೂಗು ಬಹಳ ದಿನಗಳದ್ದು. ಹೀಗಾಗಿ ಹಲವು ಹತ್ತು ಚರ್ಚೆಗಳನ್ನೊಳಗೊಂಡಂತೆ ಮಹಿಳಾ ಗ್ರಾಮ ಸಭೆಗೆ ಈ ಹಿಂದೆಯೇ ಅಂಕಿತ ಹಾಕಲಾಗಿತ್ತು.
ಗ್ರಾಮದ ಸರಿಸುಮಾರು ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಮಹಿಳೆಯರು ಸಾಮಾಜಿಕ ಕಟ್ಟುಪಾಡುಗಳಿಂದಾಗಿ ಸಾಮಾನ್ಯ ಗ್ರಾಮ ಸಭೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಮಹಿಳೆಯರ ಅಗತ್ಯತೆಗಳು ಮತ್ತು ಬೇಡಿಕೆಗಳು ನಿರೀಕ್ಷಿತ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದಿಲ್ಲ. ಇದರ ಪರಿಣಾಮವಾಗಿ ಮಹಿಳೆಯರು ಸ್ಥಳೀಯ ಸರ್ಕಾರದ ನಿರ್ಣಯಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ : 3ಹೆಚ್ ಅನ್ವಯ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಿರುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿ ಮಹಿಳೆಯರನ್ನು ಗುರುತಿಸುವುದು, ವಿವಿಧ ಆಹಾರ ಪದ್ಧತಿಯಡಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಪೌಷ್ಠಿಕ ಆಹಾರಗಳನ್ನು ಗುರುತಿಸುವುದು, ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಫಲಾನುಭವಿಗಳಿಗೆ ವಿತರಿಸಲು ಲಭ್ಯವಿರುವ ಪೂರಕ ಪೌಷ್ಠಿಕ ಆಹಾರ ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು. ಮಹಿಳೆಯರಿಗಾಗಿಯೇ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು.
ಮಾತೃಪೂರ್ಣ, ಮಾತೃ ವಂದನಾ, ಮಾತೃಶ್ರೀ ಯೋಜನೆಗಳ ಅರಿವು ಮೂಡಿಸುವುದರ ಜೊತೆಗೆ ಅದರ ಅನುಷ್ಠಾನದ ಬಗ್ಗೆ ಗಮನ ಹರಿಸಬೇಕು ಎಂಬ ಹಲವು ಅಂಶಗಳು ಇದರಲ್ಲಿ ಅಡಕವಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮಹಿಳೆಯರ ವಿಚಾರದಲ್ಲಿ ಕೆಲವು ಕಟ್ಟುಪಾಡುಗಳಿವೆ. ಇನ್ನು ಕೆಲವು ಆಚರಣೆಗಳು ಮುಂದುವರೆದಿವೆ. ಅದರಲ್ಲಿ ಬಾಲ್ಯ ವಿವಾಹ ಪದ್ಧತಿಯೂ ಒಂದು. ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದು, ಹೆಣ್ಣು ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ಗಮನಿಸುವುದು ಅವರ ಮನವೊಲಿಸಲು ಕ್ರಮ ಕೈಗೊಳ್ಳುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲು ವಿಫುಲ ಅವಕಾಶಗಳು ಈ ಗ್ರಾಮಸಭೆಯಲ್ಲಿವೆ.
ಸದರಿ ಗ್ರಾಮ ಸಭೆಗಳನ್ನು ಆಯೋಜಿಸಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಗಳಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಲಾಗಿದೆ. ಜಿ.ಪಂ. ಸಿಇಓ ಅವರೆ ನೋಡಲ್ ಅಧಿಕಾರಿಯಾಗಿದ್ದು, ಜಿ.ಪಂ. ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯ ಯಾವುದಾದರೊಂದು ಗ್ರಾಮ ಪಂಚಾಯತಿಗೆ ವಿಶೇಷ ಮಹಿಳಾ ಗ್ರಾಮ ಸಭೆಗೆ ಹಾಜರಾಗಲು ಸಹ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅದೇ ರೀತಿ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ನೋಡಲ್ ಅಧಿಕಾರಿಯಾಗಿರುತ್ತಾರೆ. ವಿಶೇಷ ಗ್ರಾಮ ಸಭೆಗಳು ನಡೆಯುವ ದಿನದಂದು ಎಲ್ಲ ಇಲಾಖೆಗಳ ಸ್ಥಳೀಯ ಸಿಬ್ಬಂದಿಗಳು ಭಾಗವಹಿಸಬೇಕು. ಈ ಸಭೆಗಳಲ್ಲಿ ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಗುಂಪುಗಳು, ಸಂಜೀವಿನಿ ಕಾರ್ಯಕ್ರಮದ ಸಿಬ್ಬಂದಿಗಳು ಭಾಗವಹಿಸುವಂತೆ ಮಾಹಿತಿ ನೀಡಬೇಕು. ವಿಡಿಯೋ ದಾಖಲೀಕರಣ ಮಾಡಿ ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಬೇಕೆಂದು ಸೂಚಿಸಲಾಯಿತು.
ಮಹಿಳೆಯರಿಗಾಗಿ ನಡೆಯುವ ವಿಶೇಷ ಗ್ರಾಮ ಸಭೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು, ಶಿಕ್ಷಣ, ಆರ್ಥಿಕ ಸಬಲೀಕರಣ, ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳು, ಸಾಮಾಜಿಕ ಪಿಡುಗುಗಳು, ಪಂಚಾಯತ್ ರಾಜ್ ಸಂಸ್ಥೆಗಳೊಂದಿಗಿನ ಒಡನಾಟ ಈ ವಿಷಯಗಳ ಬಗ್ಗೆ ಚರ್ಚಿಸಲು ವಿಷಯಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
ಅರಿವು ಮೂಡಿಸುವ ಬಗ್ಗೆಯೂ ಉಲ್ಲೇಖ
ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ, ಪೌಷ್ಠಿಕತೆ, ಸಾಂಕ್ರಾಮಿಕ ರೋಗಗಳ ಬಗ್ಗೆ, ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು, ಮಹಿಳಾ ಸಬಲೀಕರಣದ ಬಗ್ಗೆ ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಕಾನೂನುಗಳನ್ನು ಪರಿಚಯಿಸುವುದು, ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ವರದಕ್ಷಿಣೆ, ದೇವದಾಸಿ, ಜೀತ ಪದ್ಧತಿ ಇತ್ಯಾದಿಗಳಿದ್ದರೆ ಅವುಗಳ ವಿರುದ್ಧ ಅರಿವು ಮೂಡಿಸುವುದು ಸೇರಿದಂತೆ ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಗ್ರಾಮ ಸಭೆಗಳು ವಿಶೇಷತೆಯನ್ನು ಹೊಂದಿದ್ದು, ಅದರ ಆಯೋಜನೆ ಮತ್ತು ಅನುಷ್ಠಾನ ಆಯಾ ಗ್ರಾಮ ಪಂಚಾಯತಿಗಳ ಕಾಳಜಿಯ ಮೇಲೆ ಅವಲಂಬಿಸಿದೆ.
ಮಹಿಳಾ ಸಂಘಗಳು ಕ್ರಿಯಾಶೀಲವಾಗಬೇಕು
ಸರ್ಕಾರ ಸುತ್ತೋಲೆ ಹೊರಡಿಸಿರುವುದು ಅತ್ಯಂತ ಹೆಮ್ಮೆಯ ವಿಷಯ. ಆದರೆ ಇದು ಕೇವಲ ಕಾಗದದಲ್ಲಿ ಉಳಿಯಬಾರದು. ನಿಜವಾದ ಆಚರಣೆಗೆ ಬರಬೇಕು. ಈಗಿನಿಂದಲೇ ಪಂಚಾಯತಿಗಳು ಕ್ರಿಯಾಶೀಲವಾಗಬೇಕು. ಎಷ್ಟೋ ಕಡೆ ಕ್ರಿಯಾಶೀಲ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದಾರೆ. ಸ್ತ್ರೀಶಕ್ತಿ ಸಂಘಗಳು ಮತ್ತು ಸ್ಥಳೀಯ ಮಹಿಳಾ ಗುಂಪುಗಳು ಹೆಚ್ಚು ಆಸಕ್ತಿ ವಹಿಸಿ ಮಹಿಳಾ ಗ್ರಾಮ ಸಭೆಗಳನ್ನು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಮಹಿಳಾ ಸಂಘಗಳು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತ ವಾಗಬಾರದು. ಸರ್ಕಾರದ ಯೋಜನೆಗಳ ಬಗ್ಗೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಸಭೆಗಳಲ್ಲಿ ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು.
-ಕೆ.ಟಿ.ತಿಪ್ಪೇಸ್ವಾಮಿ, ಅಧ್ಯಕ್ಷರು, ವಿವೇಕ್ ಸಂಸ್ಥೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ