ಪ್ರಸ್ತುತ ಕ್ಷೀಣಿಸುತ್ತಿರುವ ಸಾಹಿತ್ಯ ಓದುಗರ ಸಂಖ್ಯೆ

ದಾವಣಗೆರೆ:

     ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ವಿಷಾಧಿಸಿದರು.

      ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಣಬೇರಿನ ಭಾವಸಿರಿ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ದೊಡ್ಮನೆ ಪ್ರಕಾಶನ ಉದ್ಘಾಟನೆ, ಕವಿಯತ್ರಿ ಸರಿತಾ ಕೆ.ಗುಬ್ಬಿ ಅವರ ಅವನೊಳಗಿನ ನಾನು ಕಥಾಸಂಕಲನ ಹಾಗೂ ಹುಣ್ಣಿಮೆಯ ಹೂ ನಗೆ ಕವನ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಾಹಿತ್ಯ ಕೃತಿಗಳ ರಚನೆಗೆ ತಕ್ಕಂತೆ ಓದುಗರ ಸಂಖ್ಯೆ ಬೆಳೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

         ವರ್ಷಕ್ಕೆ ಸುಮಾರು 8 ಸಾವಿರ ಕೃತಿಗಳ ರಚನೆ, ಬಿಡುಗಡೆ ಆಗುತ್ತಿದೆ. ಆದರೆ, ಓದುಗರ ಸಂಖ್ಯೆ ಮಾತ್ರ ಹೆಚ್ಚಾಗುತ್ತಿಲ್ಲ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಕೃತಕ ಬದುಕುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

         ಬುದ್ಧಿ, ಆಲೋಚನೆಗಳಿಂದ ಬರುವ ಕೃತಿಯು ಜನರನ್ನು ಹಿಡಿದಿಡಲಾಗುವುದಿಲ್ಲ. ಆದರೆ, ಹೃದಯದಿಂದ ಬಂದ ಸಾಹಿತ್ಯವು ಜನಮಾನಸದಲ್ಲಿ ಹೆಚ್ಚಿನ ಕಾಲ ಉಳಿಯಲಿದೆ. ಭಾವ ಶುದ್ಧಿಯಿಂದ ಮಾತು, ಬದುಕು ಹಾಗೂ ಕೃತಿಯೂ ಶುದ್ಧವಾಗುತ್ತದೆ. ಸಮಾಜದಲ್ಲಿ ಇಂತಹದ್ದೊಂದು ಜಾಗೃತಿ ಮೂಡಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.

       ಭಾವೈಕ್ಯತೆಯ ನೆಲೆಗಟ್ಟಿನಲ್ಲಿ ಅಭಿವ್ಯಕ್ತಗೊಳ್ಳುವ ಸಕಾರಾತ್ಮಕ ಚಿಂತನೆಗಳು ಸಾಹಿತ್ಯದಲ್ಲಿ ಒಡಮೂಡಬೇಕಾಗಿದೆ. ಯಾವುದೇ ಸಾಹಿತ್ಯ ಕೃತಿಯ ಆಶಯ ಸತ್ಯಾನ್ವೇಷಣೆಯಾಗಿರಬೇಕು. ಸಮಾಜಕ್ಕೆ ಸ್ಪಂದಿಸುವ, ನವ್ಯ ಆಲೋಚನೆ ಬೆಳೆಸುವ ಗುಣವಿರಬೇಕು. ಅದಕ್ಕಾಗಿ ಬೇಕಾಗಿರುವ ಅನುಭವ ನಾಲ್ಕು ಗೋಡೆಗಳ ಮಧ್ಯೆ ಸಿಗುವುದಿಲ್ಲ ಎಂದು ಹೇಳಿದರು.

       ಅನುಭಾವದ ಅಕ್ಷರರೂಪವೇ ಸಾಹಿತ್ಯವಾಗಿದ್ದು, ಸಮಾಜದಲ್ಲಿ ಬೆರೆತು, ಸಮಸ್ಯೆಗಳಿಗೆ ಸ್ಪಂದಿಸಿ, ಅದರ ಅನುಭವದ ಆಧಾರದಲ್ಲಿ ಸಾಹಿತ್ಯ ಕೃತಿಗಳು ರಚನೆಯಾಗಬೇಕು. ಸಾಹಿತ್ಯವು ಜ್ಞಾನ ಕ್ಷೇತ್ರವಾದರೂ ಟೀಕೆ, ವಿಮರ್ಶೆಗಳಿಗೆ ಸದಾ ತೆರೆದುಕೊಂಡಿರುವ ದುರ್ಗಮ ಹಾದಿ ಎಂಬುದನ್ನು ಯುವ ಬರಹಗಾರರು ಮರೆಯಬಾರದು ಎಂದರು.

      ಸಾಹಿತಿ ಕೆ.ಎಸ್.ವೀರಭದ್ರಪ್ಪ ತೆಲಗಿ ಕೃತಿ ಕುರಿತು ಮಾತನಾಡಿ, ಉದಯೋನ್ಮುಖ ಸಾಹಿತಿ ಸರಿತಾ ಗುಬ್ಬಿ ರಚಿಸಿರುವ ಅವನೊಳಗಿನ ನಾನು ಕಥಾಸಂಕಲನ ಹಾಗೂ ಹುಣ್ಣಿಮೆಯ ಹೂ ನಗೆ ಕವನ ಸಂಕಲನಗಳು ವಿಭಿನ್ನ ನಿಲುವಿನಿಂದ ಕೂಡಿವೆ. ಪ್ರೀತಿ-ಪ್ರೇಮ, ವಿರಹ, ನಿವೇದನೆ, ಸಮಾಜಮುಖಿ ಚಿಂತನೆ, ಭಾವುಕತೆ, ತಾಯ್ತನ ಹೀಗೆ ನಾನಾ ವಿಷಯಗಳು ಕೃತಿಗಳಲ್ಲಿ ಅಕ್ಷರರೂಪ ಪಡೆದುಕೊಂಡಿವೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಅವನೊಳಗಿನ ನಾನು ಕಥಾಸಂಕಲನ ಹಾಗೂ ಹುಣ್ಣಿಮೆಯ ಹೂ ನಗೆ ಕವನ ಸಂಕಲನಗಳನ್ನು ಲೋಕಾರ್ಪಣೆಗೊಳಿಸಲಾಯಿತು.

       ಅಧ್ಯಕ್ಷತೆಯನ್ನು ಪತ್ರಕರ್ತ ಜಿ.ಎಂ.ಆರ್.ಆರಾಧ್ಯ ವಹಿಸಿದ್ದರು. ಧಾರವಾಡ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ್ ದೇಸಾಯಿ, ಸಾಹಿತಿಗಳಾದ ರಾಜೇಂದ್ರ ಪಾಟೀಲ್, ಜಯಶ್ರೀ ಹರೀಶರಾಜು, ಶಿವಯೋಗಿ ಹಿರೇಮಠ್, ಲೇಖಕಿ ಸರಿತಾ ಕೆ.ಗುಬ್ಬಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಬೃಂದಾ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಿತು. ಶೋಭಾ ಮಂಜುನಾಥ್, ರೇಖಾ ನಾಗರಾಜ್ ಪ್ರಾರ್ಥಿಸಿದರು. ಅಣಬೇರು ತಾರೇಶ್ ಸ್ವಾಗತಿಸಿದರು. ಎನ್.ಪಿ.ಅರವಿಂದ್, ಸುನಿತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಕೆ.ಅಂಜಿನಪ್ಪ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap