ಎನ್‍ಪಿಎಸ್ ನೌಕರರ ಸಂಘದಿಂದ ಬೃಹತ್ ಪ್ರತಿಭಟನೆ : ಹಳೆ ಪೆಂಗ್‍ಶನ್ ಯೋಜನೆ ಜಾರಿಗೆ ತರಲು ಮುಖ್ಯಮಂತ್ರಿಗೆ ಮನವಿ

ಚಳ್ಳಕೆರೆ

     ಕರ್ನಾಟಕ ರಾಜ್ಯದ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ರಾಜ್ಯ ಘಟಕದ ಆದೇಶದ ಮೇರೆಗೆ ಇಲ್ಲಿನ ಘಟಕದ ಸುಮಾರು 200ಕ್ಕೂ ಹೆಚ್ಚು ನೌಕರರು ಎನ್‍ಪಿಎಸ್ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ‘ರಕ್ತವನ್ನು ಕೊಟ್ಟೆವು, ಪಿಂಚಣಿ ಬಿಡೆವು’ ಎಂಬ ಘೋಷಣೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ರಾಜ್ಯದ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ನೀಡಿದರು.

     ನಗರದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಿಂದ ಹೊರಟ ನೌಕರರ ಪ್ರತಿಭಟನೆ ವಾಲ್ಮೀಕಿ ವೃತ್ತ, ಜಗಜೀವನರಾಮ್ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ನೆಹರೂ ಸರ್ಕಲ್ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ಟಿ.ಸಿ.ಕಾಂತರಾಜುರವರಿಗೆ ಮನವಿ ಸಲ್ಲಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿ ಸಂಘಟನೆಯ ಗೌರವ ಸಲಹೆಗಾರ ಸಿ.ಟಿ.ವೀರೇಶ್, ಕಳೆದ ಜನವರಿ ಮಾಹೆಯಲ್ಲಿ ನಿಶ್ಚಿತ ಪಿಂಚಣಿಗಾಗಿ ಹೋರಾಟ ನಡೆಸಿದ್ದು ಸರ್ಕಾರ ನಮ್ಮ ಹೋರಾಟಕ್ಕೆ ಮನ್ನಣೆ ನೀಡಿ ನಿಶ್ಚಿತ ಪಿಂಚಣಿ ಜಾರಿಗೆ ತಂದಿರುತ್ತದೆ. ಆದರೆ, ಎನ್‍ಪಿಎಸ್ ಯೋಜನೆಯನ್ನು ಕೈಬಿಡಲು ಭರವಸೆ ನೀಡಿದ ಅಂದಿನ ಸರ್ಕಾರ ಈ ಯೋಜನೆಯನ್ನು ಕೈಬಿಡದೆ ರಾಜ್ಯದ ಲಕ್ಷಾಂತರ ನೌಕರರ ಬದುಕಿನೊಡನೆ ಚೆಲ್ಲಾಟವಾಡುತ್ತಿದೆ.

     ಸರ್ಕಾರಿ ನೌಕರರು ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿದ್ದು, ನೌಕರರಿಗೆ ನಿಯಮದ ಅನುಸಾರ ಎಲ್ಲಾ ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ, ಎನ್‍ಪಿಎಸ್ ನೌಕರರಿಗೆ ಈ ಯೋಜನೆ ಮಾರಕವಾಗಿದ್ದು, ನೌಕರರ ಬದುಕಿತ ಹಿತದೃಷ್ಠಿಯಿಂದ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿ ಓಪಿಎಸ್ ಮರು ಜಾರಿ ಮಾಡುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರ ಮೇಲೆ ಒತ್ತಡ ಹೇರಲು ಸಂಘದ 60ಕ್ಕೂ ಹೆಚ್ಚು ನೌಕರರು ರಕ್ತದಾನದ ಮೂಲಕ ಪ್ರತಿಭಟನೆ ಮಾಡಿದರು.

     ತಾಲ್ಲೂಕು ಸರ್ಕಾರಿ ನೌಕರರ ಸಂಘದ ಬಿ.ಎಸ್.ಮಂಜುನಾಥ ಮಾತನಾಡಿ, ಎನ್‍ಪಿಎಸ್ ಯೋಜನೆ ಸರ್ಕಾರಿ ನೌಕರರಿಗೆ ನುಂಗಲಾರದ ತುತ್ತಾಗಿದ್ದು, ಪ್ರಸ್ತುತ ಸ್ಥಿತಿಯಲ್ಲೇ ಸರ್ಕಾರ ನೀಡುವ ವೇತನ ಕಡಿಮೆ ಇದ್ದು, ನೌಕರರು ಕಷ್ಟಕರ ಜೀವನವನ್ನು ನಡೆಸುತ್ತಿದ್ಧಾರೆ. ಎನ್‍ಪಿಎಸ್ ಯೋಜನೆ ಸರ್ಕಾರಿ ನೌಕರರ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದ್ದರಿಂದ ಈ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದರು.

      ತಾಲ್ಲೂಕು ಅಧ್ಯಕ್ಷ ರಾಜಣ್ಣ ಮನವಿ ಪತ್ರ ಅರ್ಪಿಸಿದರು. ಈ ಸಂದರ್ಭದಲ್ಲಿ ಸೂರನಾಯಕ, ಜಿ.ಟಿ.ವೀರಭದ್ರನಾಯಕ, ಸಂಪತ್‍ಕುಮಾರ್, ಡಿ.ವೀರಣ್ಣ, ಗೋಪನಹನಳ್ಳಿ ವೀರಣ್ಣ, ಗೌರವಾಧ್ಯಕ್ಷ ಕೆ.ಎಸ್.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಟಿ.ಸುರೇಶ್, ಸಂಘಟನಾ ಕಾರ್ಯದರ್ಶಿ ಎನ್.ಸಿದ್ದೇಶ್ವರಿ, ಉಪಾಧ್ಯಕ್ಷ ಕೆ.ಟಿ.ನಾಗಭೂಷಣ್, ವಿಜಯಲಕ್ಷ್ಮಿ, ಟಿ.ರಂಗನಾಥ, ಬಸವರಾಜು, ಜಿ.ವಿ.ಕವಿತಾ, ಆರ್.ತಿಪ್ಪೇಶಪ್ಪ, ಎನ್.ಗಣೇಶ್, ಬೆಸ್ಕಾಂ ಜೆ.ಸಿ.ನವೀನ್‍ಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link
Powered by Social Snap