ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಕೂಲಿ ಆಳುಗಳಲ್ಲ: ಶಾಸಕ ಜೆ.ಸಿ.ಮಾಧುಸ್ವಾಮಿ

ಹುಳಿಯಾರು

        ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಕೂಲಿ ಆಳುಗಳಲ್ಲ, ಬಂದರೆ ಊರು ಕ್ಲೀನ್ ಮಾಡಿ ಹೋಗ್ತಾರೆ ಎನ್ನುವ ತಾತ್ಸಾರ ಬಿಟ್ಟು ಅವರ ಜೊತೆ ಕೈ ಜೋಡಿಸಿ ಊರಿನ ಸ್ವಚ್ಛತೆಗೆ ಮುಂದಾಗಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಕಿವಿ ಮಾತು ಹೇಳಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹೋಬಳಿಯ ಬರಕನಹಾಲ್ ಗ್ರಾಮದಲ್ಲಿ ಏರ್ಪಡಿಸಿರುವ ಎನ್‍ಎಸ್‍ಎಸ್ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

         ನಾವೆ ಮನಸ್ಸಿಟ್ಟು ಮಾಡುವ ಕೆಲಸ ಸೇವೆ. ಮತ್ತೊಬ್ಬರ ಮುಲಾಜಿಗೆ ಮಾಡುವ ಕೆಲಸ ಗುಲಾಮಗಿರಿ. ದುಡ್ಡಿಗೆ ಮಾಡುವ ಕೆಲಸ ನೌಕರಿ. ನೀವು ಸೇವೆ ಮಾಡುವವರಾದರೆ ಸಮುದಾಯದ ಟೀಕೆ ಟಿಪ್ಪಣಿಗಳಿಗೆ ಕಿವಿಕೊಡದೆ ನಿರ್ಲಕ್ಷ್ಯಿಸಿ ಮಾಡಿ. ಮತ್ತೊಬ್ಬರ ಶಹಬ್ಬಾಸ್‍ಗಿರಿ ನಿರೀಕ್ಷಿಸದೆ ನಿಮ್ಮ ಆತ್ಮತೃಪ್ತಿಗಾಗಿ ಮಾಡಿ ಎಂದರು.

        ವಿಶ್ವವಿದ್ಯಾನಿಲಯಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸ್ಥಳ. ಪದವೀಧರರೆಂದರೆ ಊರಿನ ಜಡ್ಜ್‍ಗಳಿದ್ದಂತೆ. ಊರಿನ ಸಮಸ್ಯೆಗಳ ಪರಿಹಾರಕ್ಕೆ ಸಲಹೆ ಕೊಡುವ ಮೇಧಾವಿಗಳು. ಆದರೆ ಈಗಿನ ಕಾಲೇಜುಗಳು, ವಿದ್ಯಾರ್ಥಿಗಳು ಈ ಮೂಲ ಆಶಯಕ್ಕೆ ತದ್ವಿರುದ್ಧ. ಕಾಲೇಜುಗಳು ಪಠ್ಯಕ್ಕೆ ಮಾತ್ರ ಸೀಮಿತವಾಗಿವೆ, ವಿದ್ಯಾರ್ಥಿಗಳು ಅಂಕಗಳಿಸುವ ಯಂತ್ರಗಳಾಗಿದ್ದಾರೆ ಎಂದರು.

         ವೈಯಕ್ತಿಕ ಶುಚಿತ್ವದಲ್ಲಿ ಭಾರತೀಯರು ವಿಶ್ವಕ್ಕೆ ಮೊದಲಿಗರು. ಆದರೆ ಸಾರ್ವಜನಿಕ ಶುಚಿತ್ವದಲ್ಲಿ ವಿಶ್ವಕ್ಕೆ ಕೊನೆಯವರು. ನಮ್ಮ ಮನೆ ಮಾತ್ರ ಸ್ವಚ್ಛವಾಗಿರಬೇಕು, ಬೀದಿ ಹಾಳಾದರೆ ನಮಗೇನು ಎನ್ನುವ ಮನೋಭಾವ ಉಳ್ಳವರು. ಹಾಗಾಗಿಯೇ ಮನೆಯ ಕಸ, ಅಂಗಡಿಯ ತ್ಯಾಜ್ಯ ಬೀದಿಗೆ ಎಸೆಯುತ್ತಾರೆ. ಸೊಳ್ಳೆ, ನೊಣ, ಜಿರಲೆ ಬೆಳೆಸಿ ರೋಗ ಹರಡುತ್ತಾರೆ ಎಂದು ಕುಟುಕಿದರು.

       ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು, ಎನ್‍ಎಸ್‍ಎಸ್ ಅಧಿಕಾರಿ ಎಂ.ಜೆ.ಮೋಹನ್ ಕುಮಾರ್, ತಾಪಂ ಸದಸ್ಯೆ ಕಲಾವತಿ, ಗ್ರಾಪಂ ಅಧ್ಯಕ್ಷೆ ಲಲಿತಾಬಾಯಿ, ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ.ವಿಶ್ವನಾಥ್, ಹಾಲಿನ ಡೇರಿ ಅಧ್ಯಕ್ಷೆ ಸರೋಜಮ್ಮ, ಗ್ರಾಪಂ ಸದಸ್ಯೆ ಆಶಾ, ಗೋವಿಂದರಾಜು, ಕಾಲೇಜು ಅಭಿವೃದ್ಧಿ ಸಮಿತಿಯ ಕೆಂಕೆರೆ ನವೀನ್, ಬರಕನಹಾಲ್ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap