ಶಿರಾ
ವೈದ್ಯ ಹಾಗೂ ಶುಶ್ರ್ರೂಷಕರಿಬ್ಬರೂ ಯಾವುದೇ ರೋಗಿಯ ಎರಡು ಕಣ್ಣುಗಳಿದ್ದಂತೆ. ರೋಗಿಯ ಪಾಲಿಗೆ ವೈದ್ಯ ದೇವರಾದರೆ ಶುಶ್ರ್ರೂಷಕರು ತಾಯಿಗೆ ಸಮ ಎಂದು ಪರಿಗಣಿಸುವುದರಲ್ಲಿ ಅರ್ಥವಿದೆ ಎಂದು ಪ್ರಜಾಪ್ರಗತಿ ದಿನ ಪತ್ರಿಕೆಯ ಸಂಪಾದಕ ಎಸ್.ನಾಗಣ್ಣ ತಿಳಿಸಿದರು.
ನಗರದ ಸೈಂಟ್ ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ ಶಾಲೆಯಲ್ಲಿ ಜಿ.ಎನ್.ಎಂ. ವಿದ್ಯಾರ್ಥಿಗಳ ಜ್ಯೋತಿ ಬೆಳಗಿಸುವ ಮತ್ತು ಪ್ರತಿಜ್ಞಾ ವಿಧಿ ಬೋಧಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ನರ್ಸಿಂಗ್ ಶಾಲೆಯನ್ನು ತೆರೆಯುವುದು ಸುಲಭ. ಆದರೆ ಆ ಶಾಲೆಯ ಮಕ್ಕಳನ್ನು ಸಾಮಾಜಿಕ ಕಳಕಳಿಯಿಂದ ಸೇವೆಗೆ ತೊಡಗಿಸುವ ಶಿಕ್ಷಣದ ಗುಣಮಟ್ಟವನ್ನು ಆ ಶಾಲೆ ರೂಪಿಸಿಕೊಳ್ಳಬೇಕಿದೆ. ಮದರ್ ಥೆರೆಸಾ ನರ್ಸಿಂಗ್ ಶಾಲೆ ಆ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದರು.
ಗ್ರಾಮೀಣ ಭಾಗದ ರೋಗಿಗಳು ಚಿಕಿತ್ಸೆಗೆಒಳಪಡುವಾಗ ರೋಗಿಯನ್ನು ಶುಶ್ರ್ರೂಷಕರು ಅವರನ್ನು ಕಾಣುವ ಆದರತೆಯಿಂದಲೆ ರೋಗಿಯ ಅರ್ಧ ಭಾಗ ಕಾಯಿಲೆ ಗುಣಪಟ್ಟಂತಾಗುತ್ತದೆ. ರೋಗಿಯು ಶುಶ್ರ್ರೂಷಕರನ್ನು ತಾಯಿಯಂತೆ ಆದರಿಸುವುದನ್ನೂ ನಾವು ಕಂಡಿದ್ದೇವೆ. ರೋಗಿಗಳು ಕೂಡ ಅವರನ್ನು ತಾಯ್ತನದ ಭಾವನೆಯಿಂದ ಕಾಣುವುದು ಅಗತ್ಯ ಎಂದರು.
ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಯಾವುದೇ ಒಂದು ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರು ಗಳಿಸಲು ಸಾಧ್ಯ. ಶಿರಾ ಭಾಗದಂತಹ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಅಗತ್ಯವಿದ್ದು ಇತ್ತೀಚಿನ ದಿನಗಳಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೊಂದೆ ರಾಮಬಾಣ ಅನ್ನುವ ಮಾತು ಅಕ್ಷರಶಃ ಸತ್ಯ ಎಂದು ಎಸ್.ನಾಗಣ್ಣ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ಮಾತನಾಡಿ, ಒಂದು ನರ್ಸಿಂಗ್ ಶಾಲೆಯು ಪ್ರತಿ ವರ್ಷ ಸಾವಿರಾರು ಮಂದಿ ಮಿನಿ ವೈದ್ಯರನ್ನು ಸೃಷ್ಟಿ ಮಾಡುವ ಮೂಲಕ ವೈದ್ಯಕೀಯ ಲೋಕಕ್ಕೆ ತಮ್ಮದೇ ಆದ ಸೇವೆಯನ್ನು ಕೈಗೊಳ್ಳುತ್ತಿವೆ. ಯಾವುದೇ ನರ್ಸಿಂಗ್ ಶಾಲೆಯು ದುಡಿಯುವ ಪ್ರವೃತ್ತಿ ರೂಢಿಸಿಕೊಳ್ಳದೆ ಸೇವಾ ಭಾವನೆಯಿಂದ ಶಿಕ್ಷಣ ನೀಡಬೇಕಿದೆ. ಆ ಕೆಲಸವನ್ನು ಶಿರಾ ಮದರ್ ಥೆರೆಸಾ ಶಾಲೆ ಕೈಗೊಂಡಿದೆ ಎಂದು ಶ್ಲಾಘಿಸಿದರು.
ತಾ.ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಹಿರಿಯ ಸಹಕಾರಿ ದುರೀಣ ಎಸ್.ಎನ್.ಕೃಷ್ಣಯ್ಯ, ತಾ.ವೈದ್ಯಾಧಿಕಾರಿ ಡಾ.ಅಫ್ಜಲ್ ಉರ್ ರೆಹಮಾನ್, ಮುಖ್ಯ ವೈದ್ಯಾಧಿಕಾರಿ ಡಾ.ಅಜ್ಗರ್ ಬೇಗ್, ಪ್ರಭಾರ ಶುಶ್ರೂಷಕ ಅಧೀಕ್ಷಕ ನಾಗರಾಜು, ಸೈಂಟ್ ಮದರ್ ಥೆರೆಸಾ ನರ್ಸಿಂಗ್ ಶಾಲೆಯ ಕಾರ್ಯದರ್ಶಿ ಡಾ.ರಾಮಕೃಷ್ಣ, ಶೈಲಾ ರಾಮಕೃಷ್ಣ, ಹರಿಕೃಷ್ಣ ಆರ್, ಕೃತಿ ರಾಮಕೃಷ್ಣ, ಸುಮಂತ್, ಪ್ರಾಂಶುಪಾಲ ಧನಂಜಯ, ಚಂಗಾವರ ಮಾರಣ್ಣ, ಬಿ.ಜೆ.ಕರಿಯಪ್ಪ, ನಗರಸಭಾ ಸದಸ್ಯ ಚಾಂದ್‍ಪಾಷ, ಬಡೇನಹಳ್ಳಿ ಟಿ.ಗೋವಿಂದಯ್ಯ, ಎಸ್.ವಿ.ಚಲಪತಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ತಬಲ ಕಲಾವಿದ ಶ್ರೀಧರ್ ಹಾಗೂ ಶಿಕ್ಷಕ ರಂಗಯ್ಯ ಪ್ರಾರ್ಥಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ