ತುಮಕೂರು : ಎಲ್ಲೆಲ್ಲೂ ನ್ಯೂಟ್ರಿಷನ್ ಕ್ಲಬ್‍ಗಳದ್ದೇ ಹಾವಳಿ

ತುಮಕೂರು :

ವಿಶೇಷ ವರದಿ :- ಯೋಗೇಶ್ ಮಲ್ಲೂರು.

     ಇತ್ತೀಚೆಗೆ ನ್ಯೂಟ್ರಿಷನ್ ಕ್ಲಬ್‍ಗಳು ನಾಯಿಕೊಡೆಗಳಂತೆ ಹರಡಿ ಮುಗ್ಧ ಜನರ ಆರೋಗ್ಯದ ಜೊತೆಗೆ ಹಣ ಕೀಳುವ ದಂಧೆಯಾಗಿ ಬೆಳೆದು ನಿಂತಿವೆ. ಕಳೆದ ಎರಡು ವರ್ಷಗಳಿಂದೀಚೆಗೆ ಕೇವಲ ನಗರದಲ್ಲೇ ಹದಿನೈದಕ್ಕೂ ಹೆಚ್ಚು ನ್ಯೂಟ್ರಿಷನ್ ಕ್ಲಬ್ ಗಳು ಒಂದರ ಹಿಂದೆ ಒಂದು ತಲೆಯೆತ್ತಿ ಮೂಲೆ-ಮೂಲೆಗಳಲ್ಲಿ ಹಣ ಕೀಳುತ್ತಿರುವುದು ದುರದೃಷ್ಟಕರ ಸಂಗತಿ. ಬಿಸಿನೀರಿಗೆ ಕಷಾಯ ಸೇರಿಸಿ ಒಂದು ಲೋಟ ರಾಗಿ ಗಂಜಿಯಂತ ಒಂದು ಗಟ್ಟಿ ಪದಾರ್ಥದ ಪೇಯವನ್ನು ನ್ಯೂಟ್ರಿಷನ್ ಎನ್ನಲಾಗುತ್ತದೆ.

     ಇದರ ಬಗ್ಗೆ ಪ್ರತಿನಿತ್ಯ ಒಂದು ಗಂಟೆ ನೀಡುವ ಉಪನ್ಯಾಸಕ್ಕಾಗಿ 10 ದಿನಕ್ಕೆ 1,400 ರೂಪಾಯಿಗಳಿಂದ ಎರಡೂವರೆ ಸಾವಿರ ರೂಪಾಯಿಗಳು ತಿಂಗಳ ಪ್ಯಾಕೇಜ್ 5,400 ರೂಪಾಯಿ ತನಕ ಹಣ ಕೀಳುತ್ತಿದ್ದರೂ ಇದಕ್ಕೆ ಸಂಬಂಧಿಸಿದ ಯಾವುದೇ ಇಲಾಖೆಯ ಅಧಿಕಾರಿಗಳು ಇದುವರೆಗೂ ಕ್ರಮವಹಿಸಿಲ್ಲ.

    ನಾವು ಕೊಡುವ ಜ್ಯೂಸ್ ನಿಂದ ಯಾವುದೇ ರೀತಿಯ ಕಾಯಿಲೆಗಳು ವಾಸಿಯಾಗುವುದಿಲ್ಲ, ಎಂದು ಬೋರ್ಡ್ ಹಾಕಿಕೊಂಡಿರುವ ಇವರು ಉಪನ್ಯಾಸ ನೀಡುವಾಗ ಮಾತ್ರ ನಿಮ್ಮ ದೇಹದಲ್ಲಿರುವ ಪ್ರತಿಯೊಂದು ರೋಗವನ್ನು ಗುಣಪಡಿಸಲಾಗುತ್ತದೆ ಎಂದು ಬೊಗಳೆ ಬಿಡುತ್ತಿದ್ದಾರೆ. ಹಾಗಾದರೆ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿರುವ ಆಸ್ಪತ್ರೆಯಾಗಲಿ, ಸಂಬಂಧಿಸಿದ ತಜ್ಞ, ವೈದ್ಯರ

ಅವಶ್ಯಕತೆಯೇ ಇಲ್ಲಾ ಎನ್ನುವಂತಲ್ಲವೇ?

   ಶ್ವಾಸಕೋಶದ ತೊಂದರೆ, ಹೃದಯದ ತೊಂದರೆ, ಮೆದುಳಿನ ತೊಂದರೆ, ಶ್ವಾಸಕೋಶದಲ್ಲಿ ಕಲ್ಲು, ಕಿಡ್ನಿಯಲ್ಲಿ ಕಲ್ಲು ಸೇರಿದಂತೆ ಇನ್ನಿತರ ಮನುಷ್ಯನ ಎಲ್ಲಾ ರೋಗರುಜಿನಗಳಿಗೆ ನಮ್ಮಲ್ಲಿ ಔಷಧಿ ದೊರೆಯುತ್ತದೆಂದು ನೇರವಾಗಿ ಹೇಳುತ್ತಾ ಕಂಡ ಕಂಡಲ್ಲಿ ಜನಸಾಮಾನ್ಯರಿಗೆ ನ್ಯೂಟ್ರೀಷಿಯನ್ ಕಾರ್ಡ್‍ಗಳನ್ನು ಕೊಡುತ್ತಾರೆ.

    ಕೇವಲ ಈ ಜ್ಯೂಸ್ ಕುಡಿದರೆ ಸಾಕು ನಿಮ್ಮ ಆರೋಗ್ಯ ಒಂದು ಹಂತಕ್ಕೆ ಬರುತ್ತದೆ. ಬಹಳ ಮುಖ್ಯವಾಗಿ ತೂಕ ಕಡಿಮೆ ಇರುವವರು ಅತಿ ಹೆಚ್ಚು ತೂಕ ಹೊಂದುತ್ತಾರೆ. ಹಾಗೂ ಅತಿ ಹೆಚ್ಚು ತೂಕವಿರುವವರು ಒಂದು ತಿಂಗಳೊಳಗಾಗಿ ಕಡಿಮೆ ತೂಕ ಗೊಳ್ಳುತ್ತಾರೆ ಎಂದು ಹುಸಿ ಸುಳ್ಳುಗಳನ್ನು ಹೇಳಿ ಹಣ ಗಳಿಸುತ್ತಿರುವ ನ್ಯೂಟ್ರೀಷಿಯನ್ ಕ್ಲಬ್‍ಗಳು ಜಿಲ್ಲೆಯಲ್ಲಷ್ಟೇ ಅಲ್ಲದೆ ತಾಲ್ಲೂಕು, ಹೋಬಳಿಗಳಲ್ಲೂ ಉತ್ಪತ್ತಿಯಾಗಿವೆ.

    ಮೊಬೈಲ್ ಆಪ್‍ನ ಮೂಲಕ ತನ್ನ ದೇಹದ ತೂಕವನ್ನು ದಪ್ಪಗಾಗುವಂತೆ ಮಾಡಿಸಿಕೊಂಡು ಬಂದ ಗ್ರಾಹಕರು ಅಥವಾ ರೋಗಿಗಳಿಗೆ ನಾನು 130 ಕೆಜಿ ಇದ್ದೆ, 100 ಕೆಜಿ ಇದ್ದೆ, ಈಗ 80 ಕಿಜಿ ಇದ್ದೇನೆ ಎಂದು ಫೋಟೋ ತೋರಿಸಿ ಸುಳ್ಳು ಸುಳ್ಳುಗಳನ್ನು ಹೇಳುತ್ತಾರೆ. ಇದನ್ನು ನಂಬುವ ಜನ ಸಾಮಾನ್ಯರು ಇದರ ಹಿಂದೆ ದುಂಬಾಲು ಬಿದ್ದಿದ್ದಾರೆ.

  ಮೊದಲಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳುವವರು 10 ದಿನ ಕಳೆದ ನಂತರ ಅವರಿಗೆ ಅರಿವು ಮೂಡಿಸುತ್ತಾರೆ. ಇದು ಔಷಧಿಯಲ್ಲ ಇದರಿಂದ ಯಾವುದೇ ಖಾಯಿಲೆ ವಾಸಿಯಾಗುವುದಿಲ್ಲ ನೀವು ಇನ್ನು ಮುಂದೆ ಎಷ್ಟು ಜನರನ್ನು ನಮ್ಮ ಕ್ಲಬ್‍ಗೆ ಸೇರಿಸುತ್ತಿರೋ ಅವರು ಕೊಡುವ ಹಣದಲ್ಲಿ ಕಮಿಷನ್ ಮುಖಾಂತರ ನಿಮ್ಮ ಖಾತೆಗೆ ಹಣ ಬರುತ್ತದೆ. ಎರಡರಿಂದ ಮೂರು ತಿಂಗಳು ನೀವು ಇಲ್ಲಿ ಕಾಯಂ ಗಿರಾಕಿಗಳಾದರೆ ತದನಂತರ ನಾವೇ ನಿಮಗೆ ಇದರ ಬಗ್ಗೆ ಮಾಹಿತಿಗೆ ತರಬೇತಿ ಕೊಟ್ಟು ನೀವು ಸಹ ಒಂದು ಕ್ಲಬ್ ಅನ್ನು ತೆರೆದು ಹಣ ಗಳಿಸಬಹುದು ಎಂದು ಮನದಟ್ಟು ಮಾಡಲಾಗುತ್ತಿದೆ.

   ಇದರ ಆಸೆಗೆ ಬಿದ್ದ ಅನೇಕ ಮಂದಿ ಹಣದಾಸೆಗೆ ಬಿದ್ದು ದಪ್ಪ ಮತ್ತು ಸಣ್ಣಗಿರುವವರನ್ನು ಕಾಡಿಬೇಡಿ ಬೇರೆ ರೀತಿಯ ಸಾಬೂನುಗಳನ್ನು ಹೇಳಿ ತಂದು ಹಿಡಿದಿಟ್ಟುಕೊಂಡು ಅವರಿಂದ ಹಣ ಕೀಳುವುದರಲ್ಲಿ ನಿಸ್ಸೀಮರಾಗಿದ್ದಾರೆ.ಈ ನ್ಯೂಟ್ರಿಷಿಯನ್ ಕ್ಲಬ್ ನಡೆಸುತ್ತಿರುವ ವ್ಯಕ್ತಿಗಳು ಖಾಯಿಲೆ ಇರುವವರ ದುರ್ಬಲ ಮನಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಮಾತಿನ ಮನೆಯನ್ನು ಕಟ್ಟಿ ದಂಧೆ ಮಾಡುತ್ತಿರುವುದನ್ನು ಕೂಡಲೇ ತಪ್ಪಿಸಬೇಕಾಗಿದೆ.

    ಈ ವ್ಯಕ್ತಿಗಳಿಗೆ, ಸಕ್ಕರೆ ಖಾಯಿಲೆ, ಹೈಬಿಪಿ, ಲೋಬಿಪಿ, ಕಿಡ್ನಿಯಲ್ಲಿ ಕಲ್ಲು, ಹೃದಯಘಾತ, ರಕ್ತನಾಳ ಸೇರಿದಂತೆ ಯಾವುದರ ಬಗ್ಗೆಯೂ ಕೊಂಚವೂ ವೈಜ್ಞಾನಿಕ ಮಾಹಿತಿ ಇಲ್ಲದೆ ಜನ ಸಾಮಾನ್ಯರನ್ನು ಮರುಳು ಮಾರುತ್ತಿರುವ ನ್ಯೂಟ್ರಿಷಿಯನ್ ಕ್ಲಬ್‍ಗಳ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಜನ ಸಾಮಾನ್ಯರ ಗತಿ ಅಧೋಗತಿಯಾದೀತು.

    ಈ ನ್ಯೂಟ್ರಿಷನ್ ಕ್ಲಬ್‍ಗಳಿಗೆ ಆರೋಗ್ಯ ಇಲಾಖೆಯಿಂದ ಯಾವುದೇ ಪರವಾನಗಿ ಕೊಟ್ಟಿಲ್ಲ. ನಮ್ಮಲ್ಲಿ ಇಂತಹ ಕ್ಲಬ್‍ಗಳಿಗೆ ಪರವಾನಗಿ ಕೊಡಲು ಬರುವುದಿಲ್ಲ. ಕ್ಲಬ್‍ಗಳನ್ನು ಪತ್ತೆ ಹಚ್ಚಿ ಇವುಗಳ ವಿರುದ್ಧ ದಾವೆ ಹೂಡುತ್ತೇವೆ. ಈ ರೀತಿಯ ಕ್ಲಬ್‍ಗಳು ಎಲ್ಲೆಲ್ಲಿ ನಡೆಯುತ್ತಿವೆ ಎಂಬುದನ್ನು ಕುರಿತು ನಮ್ಮ ಅಧಿಕಾರಿಗಳಿಗೆ ರಿಪೋರ್ಟ್ ತಯಾರಿಸಲು ತಿಳಿಸುತ್ತೇನೆ. ಅವರು ಯಾವ ರೀತಿಯ ಮೆಡಿಸನ್ ಕೊಡ್ತಿದ್ದಾರೆ ಎಂಬುದನ್ನು ಪರೀಕ್ಷಿಸಿ ರಿಪೋರ್ಟ್ ಬಂದ ಮೇಲೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ರೀತಿಯ ಕ್ಲಬ್‍ಗಳು ಜಿಲ್ಲೆಯಲ್ಲಷ್ಟೇ ಅಲ್ಲದೆ ತಾಲ್ಲೂಕು, ಹೋಬಳಿವಾರು ಶುರುವಾಗಿವೆ. ಇವುಗಳ ನಿಯಂತ್ರಣ ಕುರಿತು ಚರ್ಚಿಸಲಾಗುತ್ತದೆ.

-ಡಾ.ಬಿ.ಆರ್ ಚಂದ್ರಿಕಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap