ನ್ಯಾಯಬದ್ಧ ತೆರಿಗೆ ಪಾವತಿ ಗೌರವಯುತ ಕರ್ತವ್ಯ:ಸುನಿಲ್‍ಕುಮಾರ್ ಅಗರವಾಲ್

ಚಿತ್ರದುರ್ಗ,

      ನ್ಯಾಯಬದ್ಧ ಆದಾಯ ತೆರಿಗೆ ಪಾವತಿಯು ದೇಶದ ಅಭಿವೃದ್ಧಿಗೆ ತೆರಿಗೆದಾರರು ಮಾಡುವ ಗೌರವಯುತ ಕರ್ತವ್ಯವಾಗಿದ್ದು, ತೆರಿಗೆ ದಾರರನ್ನು ಪ್ರೇರೇಪಿಸುವ ದಿಸೆಯಲ್ಲಿಯೇ ಆದಾಯ ತೆರಿಗೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ದಾವಣಗೆರೆಯ ಆದಾಯ ತೆರಿಗೆ ಇಲಾಖೆ ವಲಯ-2 ರ ಹೆಚ್ಚುವರಿ ಆಯುಕ್ತ ಸುನಿಲ್‍ಕುಮಾರ್ ಅಗರವಾಲ್ ಅವರು ಹೇಳಿದರು.

      ಚಿತ್ರದುರ್ಗ-ತಮಟಕಲ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಆದಾಯ ತೆರಿಗೆ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯಬದ್ಧ ಹಾಗೂ ಸಮರ್ಪಕ ತೆರಿಗೆ ಪಾವತಿಸುವುದು, ಸಮಾಜದಲ್ಲಿ ಗೌರವಯುತ ಕಾರ್ಯವಾಗಿದೆ ದೇಶದ ಅಭಿವೃದ್ಧಿಯ ಉದ್ದೇಶದೊಂದಿಗೆ ತೆರಿಗೆ ಸಂಗ್ರಹಿಸುವ ಮಹತ್ವದ ಕಾರ್ಯವನ್ನು ಇಲಾಖೆಯು ಸಮರ್ಥವಾಗಿ ನಿರ್ವಹಿಸುತ್ತಿದೆ.

       ಸಮರ್ಪಕ ಆದಾಯ ತೆರಿಗೆ ಪಾವತಿ ಕಾರ್ಯ ಸಮಾಜದಲ್ಲಿ ಅವರನ್ನು ಅತ್ಯಂತ ಗೌರವಯುತವಾಗಿ ಕಾಣುವಂತೆ ಮಾಡುತ್ತದೆ. ತೆರಿಗೆ ಪಾವತಿದಾರರಿಗೆ ಉತ್ತಮ ಸೌಲಭ್ಯ ಹಾಗೂ ಪ್ರಕ್ರಿಯೆಗಳಲ್ಲಿ ಸರಳತೆ ಮತ್ತು ಪಾರದರ್ಶಕತೆ ತರುವ ಜೊತೆಗೆ ಅವರಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಚಿತ್ರದುರ್ಗದಲ್ಲಿ ಇತ್ತೀಚೆಗಷ್ಟೇ ಆಯಕರ್ ಸೇವಾ ಕೇಂದ್ರವನ್ನು ಕಚೇರಿಯ ಆವರಣದಲ್ಲಿ ಪ್ರಾರಂಭಿಸಲಾಗಿದೆ ಎಂದರು

       ಈ ವರ್ಷ 159 ನೇ ಆದಾಯ ತೆರಿಗೆ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಆದಾಯ ತೆರಿಗೆ ಮಹತ್ವ ಹಾಗೂ ನಿಯಮಗಳ ಸರಳೀಕರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅವರನ್ನು ಸಕ್ರಿಯರನ್ನಾಗಿಸಲು ಕಾಲೇಜು ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯಂತಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲದೆ ತೆರಿಗೆ ಪಾವತಿದಾರರು, ಆದಾಯ ತೆರಿಗೆ ಸಲಹೆಗಾರರು, ಲೆಕ್ಕ ಪರಿಶೋಧಕರೊಂದಿಗೆ ಮಾಹಿತಿ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ, ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ ಗಡುವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.

   ಆಧಾರ್-ಪ್ಯಾನ್ ಜೋಡಣೆಗೂ ಸೆಪ್ಟಂಬರ್ 30 ರವರೆಗೆ ಅವಧಿ ವಿಸ್ತರಿಸಲಾಗಿದೆ. ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು ತೆರಿಗೆ ಪಾವತಿದಾರರಿಗೆ ನ್ಯಾಯಬದ್ಧ ತೆರಿಗೆ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.ಲೆಕ್ಕ ಪರಿಶೋಧಕರ ಸಂಘದ ಉಪಾಧ್ಯಕ್ಷ ಕೆ. ಮಧುಪ್ರಸಾದ್ ಮಾತನಾಡಿ, ದೇಶದಲ್ಲಿ 1860 ರ ಜು. 24 ರಂದು ಮೊದಲ ಬಾರಿಗೆ ಅಧಿಕೃತವಾಗಿ ಆದಾಯ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದ್ದರಿಂದ, ಈ ದಿನವನ್ನೇ ಆದಾಯ ತೆರಿಗೆ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದಲ್ಲಿ ಸುಮಾರು 12 ಲಕ್ಷ ಕೋಟಿ ರೂ. ಹಣ ಆದಾಯ ತೆರಿಗೆಯಿಂದಲೇ ಸಂಗ್ರಹವಾಗುತ್ತದೆ. ಸರಿಯಾದ ಸಮಯದಲ್ಲಿ ತೆರಿಗೆ ಪಾವತಿಸಿ, ಲೆಕ್ಕಪತ್ರ ಸಲ್ಲಿಸುವವರಿಗೆ ಇಲಾಖೆಯಿಂದ ಗೌರವಿಸುವ ಕಾರ್ಯ ಆಗಬೇಕು ಎಂದರು

       ಇದು ಇತರರಿಗೂ ಸಮರ್ಪಕ ತೆರಿಗೆ ಪಾವತಿಗೆ ಪ್ರೇರಣೆ ನೀಡುತ್ತದೆ. ಜಿಲ್ಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ, ಆದರೆ ವಿವಿಧ ಕಾರಣಗಳಿಗಾಗಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇಲಾಖೆ ಆದಷ್ಟು ಶೀಘ್ರ ಇತ್ಯರ್ಥಪಡಿಸಬೇಕು. ತೆರಿಗೆ ಪಾವತಿ ಹಾಗೂ ನಿಯಮಗಳು, ನಮೂನೆಗಳಲ್ಲಿ ಯಾವುದೇ ಬದಲಾವಣೆಗಳಿದ್ದಲ್ಲಿ ಅದನ್ನು ಆದಷ್ಟು ಮಾ. 31 ರೊಳಗೆ ಕೈಗೊಳ್ಳಬೇಕು ಎಂದರು

      ಆರ್ಥಿಕ ವರ್ಷದ ಮಧ್ಯದಲ್ಲಿ ಜಾರಿಗೆ ತಂದರೆ, ತೆರಿಗೆದಾರರು, ಲೆಕ್ಕಪರಿಶೋಧಕರು ಹಾಗೂ ಸಲಹೆಗಾರರಿಗೂ ತೊಂದರೆಯಾಗುತ್ತದೆ. ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಿಕೊಂಡಿದ್ದು, ಆರ್ಥಿಕ ವ್ಯವಹಾರಗಳ ಬಗ್ಗೆ ನಿಗಾ ವಹಿಸುತ್ತಿದೆ. ನಗದು ವ್ಯವಹಾರವನ್ನು ಆದಷ್ಟು ಕಡಿಮೆಗೊಳಿಸಿ, ಡಿಜಿಟಲ್ ವ್ಯವಹಾರಕ್ಕೆ ಆದ್ಯತೆ ನೀಡಬೇಕು. ಕೃಷಿ ಆದಾಯ ಕುರಿತು ಇಲಾಖೆ ಸಾಕಷ್ಟು ಬಿಗಿ ನಿಯಮಗಳನ್ನು ಇತ್ತೀಚೆಗೆ ರೂಪಿಸಿದ್ದು, ಪೂರಕ ದಾಖಲೆಗಳನ್ನು ತೆರಿಗೆದಾರರು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಟಿ.ಬಿ. ಪ್ರಕಾಶ್, ಇಲಾಖೆಯ ಶರಣ್ ಕಿಲ್ಲೂರ್ ಉಪಸ್ಥಿತರಿದ್ದರು. ಆದಾಯ ತೆರಿಗೆ ದಿನದ ಅಂಗವಾಗಿ ನಗರದ ಡಾನ್‍ಬೋಸ್ಕೊ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಆಥಿಯಾ ಸಿದ್ದಿಖಾ- ಪ್ರಥಮ, ಜಶ್ ಹೆಚ್- ದ್ವಿತೀಯ ಹಾಗೂ ದೀಬಾ ನಿಕತ್- ತೃತೀಯ ಬಹುಮಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.  

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link