ಬೆಂಗಳೂರು:
ಜನಪ್ರತಿನಿಧಿಗಳ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಇಂದು ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ. ಸಂವಿಧಾನಕ್ಕೆ ಅಗೌರವ ತೋರಿ ಬೇಕಾಬಿಟ್ಟಿ ಪ್ರಮಾಣವಚನ ಸ್ವೀಕರಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಕಿಡಿಕಾರಿದರು.
ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಶಾಸಕರು ಹಾಗೂ ಸಚಿವರು ಶ್ರದ್ಧೆ–ನಿಷ್ಠೆ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಆದರೆ, ಇಂದು ಅನೇಕರು ತಮ್ಮಿಚ್ಛೆಯಂತೆ ಪ್ರಮಾಣವಚನ ಸ್ವೀಕರಿಸುತ್ತಾರೆ. ಇದು ನಿರ್ಲಜ್ಜತನದ ಪರಮಾವಧಿ ಎಂದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಕುರಿತು ತಾವು ಪ್ರಸ್ತಾಪಿಸಿದಲ್ಲಿ ವಿಷಯ ಬೇರೆಯೇ ಹಾದಿ ಹಿಡಿಯುತ್ತದೆ ಎಂದರು. ಅದಕ್ಕೆ ರಮೇಶ್ ಕುಮಾರ್, ಬೆತ್ತಲೆ ಇರುವವರ ಊರಿನಲ್ಲಿ ಬಟ್ಟೆ ಹಾಕಿಕೊಳ್ಳುವುದೇ ತಪ್ಪು ಎಂಬಂತಾಗಿದೆ ನಮ್ಮ ಸ್ಥಿತಿ ಎಂದರು.
ಸಂವಿಧಾನದ ಮೇಲಿನ ಚರ್ಚೆ ವೇಳೆ ಬಿಜೆಪಿಯ ಕೆ.ಜಿ.ಬೋಪಯ್ಯ ಅವರು ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಉಲ್ಲೇಖಿಸಿದರು. ಅದಕ್ಕೆ ಉತ್ತರಿಸಿದ ಆಗ ರಮೇಶ್ ಕುಮಾರ್, ಸದನದ ಸದಸ್ಯರಲ್ಲಿ ಅನೇಕರು ನೈತಿಕತೆ, ನಿಯಮಗಳಿಗೆ ಬೆಲೆ ಕೊಡುವುದಿಲ್ಲ. ಸಭಾಧ್ಯಕ್ಷರಿಗೆ ಸದನದ ಎಲ್ಲಾ ಸದಸ್ಯರ ಬಗ್ಗೆ ಮಾಹಿತಿ ಇರುತ್ತದೆ. ವಿಪ್ ಕೊಟ್ಟಿರುವ ಬಗ್ಗೆಯೂ ಗೊತ್ತಿರುತ್ತದೆ. ರಮೇಶ್ ಕುಮಾರ್ ಸುರೇಶ್ ಕುಮಾರ್ ತರಹ ಕಾಣಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಪಕ್ಷಾಂತರ ಪ್ರಕ್ರಿಯೆ ಕುರಿತು ನ್ಯಾಯಾಂಗದ ತೀರ್ಪುಗಳನ್ನು ಉಲ್ಲೇಖಿಸಿದ ಅವರು, ನಮಗೆ ನ್ಯಾಯಾಂಗ ವರ್ತನೆ ಬಗ್ಗೆ ಅಪಾರ ಗೌರವ ಇದೆ. ಆದರೆ, ಕೆಲವು ಸಲ ಮೂರ್ಖತನದಿಂದ ವರ್ತಿಸುತ್ತದೆ ಎಂದರು.ಮೇಲೆ ಕುಳಿತಿದ್ದೇವೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ಆದೇಶ ಹೊರಡಿಸಬಾರದು. ಅವರು ಗ್ರಂಥಾಲಯಗಳಿಗೆ ಹೋಗಿ ಅಧ್ಯಯನ ಮಾಡಬೇಕು. ಇತಿಹಾಸದಲ್ಲಿ ಏನಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್, ಸ್ಪೀಕರ್ ಪ್ರಮಾಣವಚನ ಪ್ರಕ್ರಿಯೆ ಮೇಲೆ ನಿಗಾವಹಿಸಬೇಕು. ಸಂವಿಧಾನದ ಚೌಕಟ್ಟಿನೊಳಗೆ ಸರಿಯಾಗಿ ಪ್ರಮಾಣವಚನ ಸ್ವೀಕರಿಸದಿದ್ದರೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದರು.
ನಂತರ, ಕೆ.ಜಿ.ಬೋಪಯ್ಯ, ರಾಜ್ಯದಲ್ಲಿ ಪಕ್ಷಾಂತರ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೆ 4 ಗಂಟೆಯೊಳಗೆ ಎಲ್ಲರ ಪ್ರಮಾಣವಚನ ಸ್ವೀಕಾರ ಮುಗಿಯಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ಆಗ ಅನಿವಾರ್ಯವಾಗಿ ತಲಾ 10 ಮಂದಿ ಏಕಕಾಲಕ್ಕೆ ಪ್ರಮಾಣವಚನ ಸ್ವೀಕರಿಸಿದರು. ನಮ್ಮ ಮೇಲೆ ನ್ಯಾಯಾಂಗ ಹಸ್ತಕ್ಷೇಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ