ಓದುವ ವಾತಾವರಣಕ್ಕೆ ಚಳವಳಿ ಅವಶ್ಯ

ದಾವಣಗೆರೆ:

      ಪುಸ್ತಕ ಓದುವ ವಾತಾವರಣ ನಿರ್ಮಾಣಕ್ಕೆ ಚಳವಳಿ ಅತ್ಯವಶ್ಯವಾಗಿದೆ ಎಂದು ಕವಿ, ವಿಮರ್ಶಕ ಡಾ.ವಸಂತಕುಮಾರ ಪೆರ್ಲ ಪ್ರತಿಪಾದಿಸಿದರು.

       ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಪ್ರಕೃತಿ ಪ್ರಕಾಶನ, ಕೊಡಗನೂರು ಹಾಗೂ ಗೆಳೆಯರ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್ ಅವರ ‘ಏಟ್ಸ್ ಮತ್ತು ನಾನು’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

      ಪ್ರಸ್ತುತ ಚಳವಳಿ ಇಲ್ಲದ ಕಾಲ ಬಂದಿದೆ. ಹೀಗಾಗಿ ಸಾಹಿತ್ಯೀಕ ಕೃತಿಗಳನ್ನು ಓದುವವರ ಸಂಖ್ಯೆಯೂ ವಿರಳವಾಗಿದೆ. ಕಥೆ, ಕಾದಂಬರಿ, ಕಾವ್ಯ ಓದುವ ವಾತಾವರಣ ನಿರ್ಮಾಣವಾಗಬೇಕಾದರೆ, ಚಳವಳಿಗಳ ಅವಶ್ಯಕತೆ ಇದೆ. ಏಕೆಂದರೆ, ಚಳವಳಿಗಳು ಜನರನ್ನು ಓದುವಿಕೆಗೆ ಹಾಗೂ ಚಿಂತನೆಗೆ ಹಚ್ಚುತ್ತವೆ ಎಂದು ಹೇಳಿದರು.

      ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಶೂನ್ಯ ಆವರಿಸಿದ್ದು, ಜನ ಹೊಸ ಮಾಧ್ಯಮಗಳಾದ ಫೇಸ್‍ಬುಕ್, ವಾಟ್ಸಾಪ್‍ಗಳತ್ತ ಮುಖ ಮಾಡಿರುವುದರಿಂದ ಸಾಹಿತ್ಯ ಮಾಧ್ಯಮ ಒಣಗುತ್ತಿದೆ. ಇದಕ್ಕೆ ಕಾವ್ಯ ಪರಂಪರೆಯನ್ನು ಪರಿಚಯಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲದಿರುವುದು ಸಹ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

       ಕವಿತೆ ನಿಂತ ನೀರಲ್ಲ. ಅದಕ್ಕೆ ಅದರದೇಯಾದ ಸ್ವರೂಪ ಇರುತ್ತೆ. ಕಾಲ, ಕಾಲಕ್ಕೆ ಅದರ ಮನೋಧರ್ಮವನ್ನು ಸ್ವೀಕರಿಸುತ್ತಾ, ತನ್ನ ರೂಪವನ್ನು ಬದಲಿಸುತ್ತಾ ಬೇರೆ, ಬೇರೆ ರೂಪ ಪಡೆಯುತ್ತಿರುತ್ತದೆ. ಒಂದು ಶ್ರೇಷ್ಠ ಕಾವ್ಯ ಹೇಗಿರಬೇಕೆಂಬ ಪ್ರಶ್ನೆಗೆ ನವ್ಯ ಕವಿಗಳು ಉತ್ತರ ನೀಡಿದ್ದಾರೆ ಎಂದರು.

       ಕವಿತೆ ಬರೀ ಹೇಳಿಕೆಯ ರೂಪದಲ್ಲಿ ಮಾತ್ರ ಉಳಿಯಬಾರದು. ಓದುಗರ ಹೃದಯ ಪ್ರವೇಶಿಸಿ, ಭಾವ ಪರವಶವಾದರೆ ಮಾತ್ರ ಅದು ಶ್ರೇಷ್ಠ ಕವಿತೆಯಾಗಲಿದೆ ಎಂದ ಅವರು, ಕಾಲದ ಆಶಯಗಳಿಗೆ ಧ್ವನಿಯಾಗುವ ಕವಿ ಮಾತ್ರ ಘಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಲಿದೆ. ಅದರಂತೆ, ಕವಿ ಪ್ರಕಾಶ್ ಕೊಡಗನೂರ್ ಸಹ ಇಂದಿನ ಸಮಕಾಲೀನ ಆಶಯಗಳಿಗೆ ಧ್ವನಿಯಾಗುವ ಮೂಲಕ ನಮ್ಮ ತಲೆಮಾರಿನ ಅನುಭವಗಳನ್ನು ಮುಂದಿನ ತಲೆಮಾರಿಗೆ ಕಟ್ಟಿಕೊಡುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.

        ಕವಿ ಸತೀಶ್ ಕುಲಕರ್ಣಿ ಮಾತನಾಡಿ, ಇಂದು ಮಾಧ್ಯಮ ಭಾಷೆಯು ಜನಪ್ರಿಯವಾಗಿ, ಜನರನ್ನು ಪ್ರಚೋದನೆಗೆ ತಳ್ಳಿ, ರೋಮಾಂಚನವನ್ನು ಸೃಷ್ಟಿಸುತ್ತಿದೆ. ಆದರೆ, ಕಾವ್ಯದ ಭಾಷೆಗೆ ಸೂಕ್ಷ್ಮ ಭಾವನೆ ಇರುತ್ತದೆ. ಈ ಕೃತಿಯಲ್ಲಿರುವ ಕವಿತೆಗಳು ಮೇಲ್ನೋಟಕ್ಕೆ ಸರಳ ಏನಿಸಿದರೂ, ಆ ಕವಿತೆಗಳಲ್ಲಿನ ಜೀವಕೋಶವನ್ನು ಬಿಡಿಸುತ್ತಾ ಹೋದಂತೆ ದೊಡ್ಡದಾಗಲಿವೆ ಎಂದು ಹೇಳಿದರು.

      ಕವಿ ಪ್ರಕಾಶ್ ಕೊಡಗನೂರ್ ‘ಏಟ್ಸ್ ಮತ್ತು ನಾನು’ ಕೃತಿಯನ್ನು ತನ್ನ ಪ್ರೀತಿಯ ಅನುಭಾವದ ಮೂಲಕ ಕಟ್ಟಿಕೊಟಿದ್ದಾರೆ. ಇದೊಂದು ಪ್ರೀತಿಯ ಭೂಮಿ ಗೀತೆಯಾಗಿದೆ ಎಂದು ಬಣ್ಣಿಸಿದ ಅವರು, ಈ ಕೃತಿಯಲ್ಲಿರುವ 40 ಪದ್ಯಗಳು ಸರಳವಾಗಿದ್ದು, ಪ್ರಕಾಶ್ ತನ್ನ ಅನುಭವ ಮತ್ತು ವಿಚಾರವನ್ನು ಕಾವ್ಯದ ಮೂಲಕ ಪಾರದರ್ಶಕವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.

       ತನ್ನ ತಾಕಲಾಟ, ನೋವನ್ನು ಕಾವ್ಯದ ಮೂಲಕ ಕವಿ ಪ್ರಕಾಶ್ ಕೊಡಗನೂರ್ ಹಿಡಿದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನೇರವಾಗಿ ಅನುಭವ ಬಿಟ್ಟುಕೊಡುವುದಕ್ಕಿಂತ, ಕಲಾತ್ಮಕವಾಗಿ ಕಾವ್ಯ ರಚಿಸುವುದನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವಿಮರ್ಶಕ ಬಿದರಹಳ್ಳಿ ನರಸಿಂಹಮೂರ್ತಿ ಮಾತನಾಡಿ, ಎಲಿಯಟ್ ಈ ವರೆಗೂ ನನಗೆ ಕವಿಯಾಗಿ ಅನಿಸಿಲ್ಲ. ಇದಕ್ಕೆ ಅವರ ಲಾಜಿಕ್ ಪೋಯಟ್ರಿ ರಚನೆಯೇ ಕಾರಣವಾಗಿದೆ.

      ಆದರೆ, ಅವರು ಅಧ್ಬುತ ವಿಮರ್ಶಕ ಎಂಬುವುರಲ್ಲಿ ಎರಡು ಮಾತಿಲ್ಲ. ಆದರೆ, ಮ್ಯಾಜಿಕಲ್ ಪೋಯಟ್ರಿಯ ಮೂಲಕ ಅಂಗೈಯಲ್ಲಿಯೇ ಬ್ರಹ್ಮಾಂಡ ತೋರಿಸುವ ಏಟ್ಸ್ 20ನೇ ಶತಮಾನದ ಪ್ರಸಿದ್ಧ ಕವಿಯಾಗಿದ್ದಾರೆ. ಏಟ್ಸ್, ರವೀಂದ್ರನಾಥ ಟ್ಯಾಗೂರ್ ಹಾಗೂ ದ.ರಾ.ಬೇಂದ್ರೆ ನಮ್ಮ ಶ್ರೇಷ್ಠ ಕವಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

        ಪ್ರಕಾಶ್ ಏಟ್ಸ್ ಬಗ್ಗೆ ಬರೆದಿರುವ ಕವಿತೆ ನನಗೆ ಎಷ್ಟು ಸಮಾಧಾನವನ್ನು ತಂದುಕೊಟ್ಟಿಲ್ಲ. ಅವರಿನ್ನಷ್ಟು ಕಾವ್ಯಕ್ಕೆ ಇಳಿಯಬೇಕು. ತನ್ನಲ್ಲಿರುವ ಪ್ರೇಮ, ಕಾವ್ಯದ ತಲ್ಲಣಗಳಿಗೆ ಕಾವ್ಯ ಕಟ್ಟಿಕೊಟ್ಟಿದ್ದಾರೆ. ಹೀಗೆ ಕೈಗೂಡದ ಪ್ರೀತಿಯೇ ಕಾವ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು.

         ಪ್ರಾಸ್ತಾವಿಕ ಮಾತನಾಡಿದ ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್ ಮಾತನಾಡಿ, ಬಸವಲಿಂಗಪ್ಪನವರ ಬೂಸಾ ಸಾಹಿತ್ಯ ಚಳವಳಿ ನನ್ನಲ್ಲಿ ಆಳವಾಗಿ ನಾಟಿತ್ತು. ಹಾಗೂ ಬೇಂದ್ರೆಯವರ ಸಾವು ಇರದ ಕವಿತೆ ಬರಿ ಪ್ರಕರಣವು ನನ್ನ ಮೇಲೆ ಪ್ರಭಾವ ಬೀರಿತ್ತು. ಬೂಸಾ ಸಾಹಿತ್ಯಕ್ಕೆ ನನ್ನ ಮೊದಲ ಕವನ ಸಂಕಲನ ಎರಡು ಹಳ್ಳಿಗಳ ನಡುವೆ ಸೇರುವ ಕಾರಣಕ್ಕೆ ಸಾವು ಇರದ ಪದ್ಯ ಬರಯಬೇಕೆನ್ನುವ ತುಡಿತ ಮನೆ ಮಾಡಿದ ಕಾರಣಕ್ಕೆ ಇನ್ನೊಂದು ಕವನ ಸಂಕಲನ ಹೊರ ತರಲು 16 ವರ್ಷಗಳೇ ಹಿಡಿದಿದೆ. ಬರೆದದ್ದು ಉಳಿಯದ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ಸಿಗುವುದಿಲ್ಲ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಸುರೇಂದ್ರ ನಾಯ್ಕ, ಪ್ರಗತಿಪರ ಸಂಘಟಕ ಎನ್.ಪಿ.ನಾಗರಾಜ್ ಉಪಸ್ಥಿತರಿದ್ದರು. ಯು.ಅರುಣಾದೇವಿ, ಭುವನ್ ಕೊಡಗನೂರ್ ಆಯ್ದ ಕವಿತೆಗಳನ್ನು ಹಾಡಿದರು. ಕೆ.ಶಶಿಕಲಾ ಸ್ವಾಗತಿಸಿದರು. ಕೆ.ಎನ್.ಸ್ವಾಮಿ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link