ಹೊನ್ನಾಳಿ:
ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ಸಿಪಿಐ ಎಚ್.ಎಸ್. ಬ್ರಿಜೇಶ್ ಮ್ಯಾಥ್ಯೂ ಹೇಳಿದರು.
ಇಲ್ಲಿನ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ “ಅಪರಾಧ ತಡೆ ಮಾಸಾಚರಣೆ” ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಲೈಂಗಿಕ ಕಿರುಕುಳ ಕೇವಲ ಮಹಿಳೆಯರ ಮೇಲಷ್ಟೇ ಅಲ್ಲದೇ ಪುರುಷರ ಮೇಲೂ ಆಗಬಹುದು. ಸಲಿಂಗಕಾಮಿಗಳ ವಿರುದ್ಧವೂ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಸಾಮಾನ್ಯವಾಗಿ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವ ದುರುಳರು ನಮ್ಮ ಸುತ್ತ-ಮುತ್ತ ಇರುತ್ತಾರೆ. ಬಸ್, ಪ್ಯಾಸೆಂಜರ್ ಆಟೋ ಮತ್ತಿತರ ವಾಹನಗಳಲ್ಲಿ ಓಡಾಡುವ ಸಂದರ್ಭಗಳಲ್ಲಿ ಪುರುಷರು ವಿದ್ಯಾರ್ಥಿನಿಯರ ಖಾಸಗಿ ಬದುಕಿನಲ್ಲಿ ಪ್ರವೇಶಿಸದಂತೆ ಎಚ್ಚರದಿಂದ ಇರಬೇಕು. ವಿದ್ಯಾರ್ಥಿನಿಯರ ಮೈ-ಕೈ ಸ್ಪರ್ಶಿಸದಂತೆ ನಿಗಾ ವಹಿಸಬೇಕು. ಇಂಥ ಘಟನೆಗಳು ಘಟಿಸಿದ ಸಂದರ್ಭಗಳಲ್ಲಿ ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು ಎಂದು ವಿವರಿಸಿದರು.
ವಿಶೇಷವಾಗಿ ವಿದ್ಯಾರ್ಥಿನಿಯರು ಉತ್ತಮವಾಗಿ ಅಧ್ಯಯನ ನಡೆಸಿ ತಮ್ಮ ಭವಿಷ್ಯ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕು. ವಿದ್ಯಾರ್ಜನೆಯ ಸಂದರ್ಭದಲ್ಲಿ ಪ್ರೀತಿ, ಪ್ರೇಮ, ಕ್ಷಣಿಕ ಆಕರ್ಷಣೆಗಳಿಗೆ ಬಲಿಯಾಗಬಾರದು. ಆಮಿಷಗಳಿಗೆ ಒಳಗಾಗಿ ಹುಡುಗರೊಂದಿಗೆ ಬೈಕ್ಗಳಲ್ಲಿ ಸಂಚರಿಸಲು ಮುಂದಾದರೆ ಅಲ್ಲಿಗೇ ವಿದ್ಯಾರ್ಥಿನಿಯರ ಬದುಕು ಮುಗಿದುಹೋದಂತೆ. ಈ ಬಗ್ಗೆ ವಿದ್ಯಾರ್ಥಿನಿಯರು ಗಮನಹರಿಸಬೇಕು ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು. ಸದಾ ಅಧ್ಯಯನದತ್ತ ಗಮನಹರಿಸಬೇಕು. ಸಮಾಜ ವಿರೋಧಿ ಶಕ್ತಿಗಳಿಂದ ದೂರ ಇರಬೇಕು. ನಿಮ್ಮ ತಂದೆ-ತಾಯಿ, ಪೋಷಕರು ಸೇರಿದಂತೆ ಸಮಾಜದಲ್ಲಿನ ಇತರರಿಗೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗದಂತೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಬೆಲೆಬಾಳುವ ಬಂಗಾರದ ಆಭರಣಗಳನ್ನು ಧರಿಸಿಕೊಂಡ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಸರಗಳ್ಳರ ಕೈಚಳಕಕ್ಕೆ ಬಲಿಯಾಗಬಾರದು. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮನೆಗಳಲ್ಲಿನ ಕಳ್ಳತನದ ಬಗ್ಗೆ ಜಾಗೃತರಾಗಬೇಕು. ಲಾಟರಿ ಹೊಡೆದಿದೆ ಎಂದು ಮೊಬೈಲ್ಗಳಿಗೆ ಕಳುಹಿಸುವ ಸಂದೇಶಗಳ ಬಗ್ಗೆ ಎಚ್ಚರದಿಂದ ಇರಬೇಕು. ದಿಢೀರನೇ ಯಾರೂ ಶ್ರೀಮಂತರಾಗಲು ಸಾಧ್ಯವಿಲ್ಲ. ಆದ್ದರಿಂದ, ಯಾರೋ ನಿಮಗೆ ಅದು ಹೇಗೆ ಲಕ್ಷಗಟ್ಟಲೇ ಹಣವನ್ನು ಉಚಿತವಾಗಿ ನೀಡುತ್ತಾರೆ? ಹಾಗಾಗಿ, ಹಣದ ಆಮಿಷಕ್ಕೆ ಯಾರೂ ಬಲಿಯಾಗಬಾರದು ಎಂದು ತಿಳಿಸಿದರು.
ಪಿಎಸ್ಐ ಎನ್.ಸಿ. ಕಾಡದೇವರ ಮಾತನಾಡಿ, ಲೈಸೆನ್ಸ್ ಮತ್ತು ಹೆಲ್ಮೆಟ್ ಇಲ್ಲದೇ ದ್ವಿ-ಚಕ್ರ ವಾಹನಗಳನ್ನು ಓಡಿಸುವುದು ಅಪರಾಧವಾಗುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಬೈಕ್ ಚಾಲನೆ ಮಾಡಬಾರದು. ತಮ್ಮ ಪೋಷಕರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು. ನೀವು ಹೆಲ್ಮೆಟ್ ಧರಿಸದಿದ್ದರೆ ನಾನು ಬೈಕ್ ಹತ್ತುವುದಿಲ್ಲ ಎಂದು ನೇರವಾಗಿ ನಿಮ್ಮ ಪೋಷಕರಿಗೆ ಹೇಳಬೇಕು. ಏಕೆಂದರೆ, ಅಪಘಾತದ ಸಂದರ್ಭಗಳಲ್ಲಿ ತಲೆಗೆ ಪೆಟ್ಟು ಬಿದ್ದ ಕಾರಣಕ್ಕಾಗಿ ಹೆಚ್ಚಿನ ಜನರು ಮೃತರಾಗುತ್ತಾರೆ. ಹೆಲ್ಮೆಟ್ ಧರಿಸಿದರೆ ಶೇ.75ರಷ್ಟು ಪ್ರಾಣ ಹಾನಿ ತಡೆಗಟ್ಟಬಹುದು ಎಂದು ಹೇಳಿದರು.
ಸಂಚಾರಿ ನಿಯಮಗಳ ಪಾಲನೆ ಬಗ್ಗೆಯೂ ವಿದ್ಯಾರ್ಥಿಗಳು ಗಮನಹರಿಸಬೇಕು. ಅನಗತ್ಯವಾಗಿ ಕಾಲಹರಣ ಮಾಡದೇ, ಅಲ್ಲದ ವಯಸ್ಸಿನಲ್ಲಿ ಸಲ್ಲದ ಕೆಲಸಗಳನ್ನು ಮಾಡದೇ ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ದೇಶದ ಸತ್ಪ್ರಜೆಗಳಾಗಬೇಕು ಎಂದು ತಿಳಿಸಿದರು.
ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಶ್ರಮಿಸಬೇಕು. ಮೊಬೈಲ್ ಫೋನ್ಗಳು, ಅಂತರ್ಜಾಲ, ವಾಟ್ಸ್ಆಪ್ ಮತ್ತಿತರ ಆಧುನಿಕ ಸವಲತ್ತುಗಳ ದುರ್ಬಳಕೆಯಿಂದ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆದ್ದರಿಂದ, ಯುವಜನರು ಇವುಗಳನ್ನು ವಿವೇಚನೆಯಿಂದ ಬಳಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಪಾಲಿಸಬೇಕು. ತನ್ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲದೇ, ಇತರ ಯಾವುದೇ ಅಪರಾಧ ಚಟುವಟಿಕೆಗಳಲ್ಲೂ ಯಾರೂ ಭಾಗಿಯಾಗಬಾರದು ಎಂದು ಸಲಹೆಯಿತ್ತರು.
ಸಮಾಜದಲ್ಲಿ ನಡೆಯುವ ವಿವಿಧ ಅಪರಾಧಗಳು, ಅತ್ಯಾಚಾರ, ಲೈಂಗಿಕ ಸೌರ್ಜನ್ಯ ಸೇರಿದಂತೆ ವಿವಿಧ ದೌರ್ಜನ್ಯಗಳ ಬಗ್ಗೆ ಯುವಕರು ದನಿ ಎತ್ತಬೇಕು. ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿ ದೂರು ನೀಡಬೇಕು. ಸಮಾಜದಲ್ಲಿನ ಅನಕ್ಷರಸ್ಥರಿಗೆ ವಿದ್ಯಾರ್ಥಿಗಳು ಸಹಾಯ ಮಾಡಬೇಕು. ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳನ್ನು ಯಾರೂ ಪ್ರೋತ್ಸಾಹಿಸಬಾರದು ಎಂದು ವಿವರಿಸಿದರು.
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ ನಾಯ್ಕರ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ವರ್ತಿಸಬೇಕು. ವಿದ್ಯಾರ್ಥಿ ಜೀವನ ನಮ್ಮ ಬದುಕಿನಲ್ಲಿ ಲಭಿಸುವ ಒಂದು ಸುವರ್ಣಾವಕಾಶ. ಹಾಗಾಗಿ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಉಪನ್ಯಾಸಕಿ ಬಿ.ಜೆ. ಸುಪ್ರಿಯಾ ಮತ್ತಿತರರು ಮಾತನಾಡಿದರು.ಉಪನ್ಯಾಸಕರಾದ ಸುರೇಶ್ ಲಮಾಣಿ, ಡಿ. ಲತಾ, ಸಲ್ಮಾ ಬಾನು, ಸುಮತಿ, ಕೆ. ನಾಗರಾಜ್, ಲಕ್ಷ್ಮೀ, ನೇತ್ರಾವತಿ, ಅಜಿತಾ ಜೋಗಳೇಕರ್, ಟಿ.ಜೆ. ಸುಪ್ರೀತಾ, ಬಿ. ಶಾಲಿನಿ, ಎಚ್. ಕಾವ್ಯ, ಸಿಬ್ಬಂದಿ ನಾಗರಾಜ್, ಸ್ವಾಮಿ, ಹೊನ್ನಾಳಿ ಠಾಣೆಯ ಎಎಸ್ಐ ಮಹಾಂತೇಶ್, ಸಿಬ್ಬಂದಿ ಡಿ. ಜಗದೀಶ್, ರಮೇಶ್, ಸುನಿಲ್, ಮಂಜುನಾಥ್, ಲಕ್ಷ್ಮಣ, ಪಿ. ಸೀಮಾ, ಶೀಲಾ, ಸುರೇಶ್, ಉಮೇಶ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ